ಸುದ್ದಿಮೂಲ ವಾರ್ತೆ
ಬೆಂಗಳೂರು,ಅ.25: ಕನಕಪುರವನ್ನು ಬೆಂಗಳೂರಿಗೆ ಸೇರಿಸುವ ಡಿ.ಕೆ.ಶಿವಕುಮಾರರ ಹೇಳಿಕೆಯು ಡೆವಲಪರ್ಗಳಿಗೆ, ರಿಯಲ್ ಎಸ್ಟೇಟ್ ಉದ್ಯಮಿಗಳಿಗೆ ದಂಧೆ ಮಾಡಲು ಹುನ್ನಾರ ಎಂದು ರಾಜ್ಯದ ಮಾಜಿ ಸಚಿವ ಆರ್.ಅಶೋಕ್ ಅವರು ಟೀಕಿಸಿದರು.
ಮಲ್ಲೇಶ್ವರದ ರಾಜ್ಯ ಬಿಜೆಪಿ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಕನಕಪುರವನ್ನು ಬೆಂಗಳೂರಿಗೆ ಸೇರಿಸುವ ಕುರಿತ ಡಿ.ಕೆ.ಶಿವಕುಮಾರ್ ಅವರ ಹೇಳಿಕೆ ಕುರಿತಂತೆ ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗೆ ಉತ್ತರ ನೀಡಿದÀರು. ಕಾಂಗ್ರೆಸ್ಸಿನ ಹಿರಿಯ ಮುಖಂಡ ಡಿ.ಕೆ.ಶಿವಕುಮಾರ್ ಅವರು ಒಂದಲ್ಲ ನೂರಾರು ಬಾರಿ ಮಾಧ್ಯಮ ಹೇಳಿಕೆ ಕೊಟ್ಟಿದ್ದಾರೆ. ನಾನು ಮೊದಲು ಬಿಸಿನೆಸ್ಮ್ಯಾನ್; ರಾಜಕಾರಣ ನನ್ನ ಹವ್ಯಾಸ ಎಂದಿದ್ದಾರೆ. ಅವರು ಏನೇ ಮಾಡಿದರೂ ಬಿಸಿನೆಸ್ ಮೊದಲ ಸ್ಥಾನ ಪಡೆಯುತ್ತದೆ. ಆಮೇಲಿನ ಸ್ಥಾನ ರಾಜಕೀಯಕ್ಕೆ ಎಂದು ತಿಳಿಸಿದರು.
ಬೆಂಗಳೂರಿನಿಂದ ಕಾಂಗ್ರೆಸ್ ಟಿಕೆಟ್ ಪಡೆದು ಗೆದ್ದವರು ಈ ಕುರಿತು ಏನು ಹೇಳುತ್ತಾರೆ ಎಂದು ಪ್ರಶ್ನಿಸಿದ ಅವರು, 110 ಹಳ್ಳಿಗಳನ್ನು ಸುಮಾರು 15 ವರ್ಷಗಳ ಹಿಂದೆ ಬಿಬಿಎಂಪಿಗೆ ಸೇರಿಸಿ ಇನ್ನೂ ಶೇ 30ರಷ್ಟು ಅಭಿವೃದ್ಧಿ ಸಾಧಿಸಲಾಗಿಲ್ಲ. ಇನ್ನೂ ಈ ಪ್ರದೇಶಗಳಿಗೆ ಕಾವೇರಿ ಕುಡಿಯುವ ನೀರು ಕೊಡಲು ಸಾಧ್ಯವಾಗಿಲ್ಲ. ರಸ್ತೆ, ಬೀದಿದೀಪ ಸೌಕರ್ಯ ಕೊಟ್ಟಿಲ್ಲ. ಅದನ್ನು ಬೆಂಗಳೂರು ಥರ ಮಾಡಲು ಇನ್ನೂ 15 ವರ್ಷ ಬೇಕು. 110 ಹಳ್ಳಿಗಳ ಜನರು ಸಂಕಷ್ಟದಲ್ಲಿದ್ದು, ಹೋರಾಟ ಮಾಡುತ್ತಿದ್ದಾರೆ. ಪ್ರತಿಭಟನೆಗಳೂ ನಡೆಯುತ್ತಿವೆ. ಈಗ ಕನಕಪುರವನ್ನು ಸೇರಿಸುತ್ತೇನೆ ಎನ್ನುತ್ತಾರೆ. ಹಾರೋಹಳ್ಳಿ ದಾಟಿ 10 ಕಿಮೀ ಬಳಿಕ ಕನಕಪುರ ಸಿಗುತ್ತದೆ. ಹಾಗಿದ್ದರೆ ಹಾರೋಹಳ್ಳಿ, ರಾಮನಗರದ ಕಥೆ ಏನು ಎಂದು ಕೇಳಿದರು.
ಏರ್ಪೋರ್ಟ್ ಇರುವ ದೇವನಹಳ್ಳಿ ಕಥೆ ಏನು? ಅದು ಗಡಿಯಲ್ಲೇ ಇದೆ. ಹೊಸಕೋಟೆ ಕಥೆ ಏನು? ಎಂದು ಕೇಳಿದರು. ಮುಂದೆ ಸಿಡಿಪಿ ಬರಲಿದೆ. ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಸಿಡಿಪಿ 10 ವರ್ಷದಿಂದ ಬಾಕಿ ಇದೆ. ಆ ಸಿಡಿಪಿಯಡಿ ಇದೆಲ್ಲವನ್ನೂ ಸೇರಿಸಿ ಯಾವ್ಯಾವುದು ಹೇಗೆ ಬೇಕೋ ಯೆಲ್ಲೊ, ಗ್ರೀನ್, ಕಮರ್ಷಿಯಲ್, ವಸತಿ ಪ್ರದೇಶ- ಹೀಗೆ ಡೆವಲಪರ್ಗಳಿಗೆ ದಂಧೆ ಮಾಡುವ ಹುನ್ನಾರ ಎಂದು ಆರೋಪಿಸಿದರು.
ಕಾಂಗ್ರೆಸ್ನವರು ಟಿಪ್ಪು ಅಭಿಮಾನಿಗಳು ಮತ್ತು ಬೆಂಬಲಿಗರು. ನೀವು ಕೂಡ ತುಘಲಕ್ನ ದರ್ಬಾರ್ ಮಾಡಿ ಎಂದು ವ್ಯಂಗ್ಯವಾಗಿ ತಿಳಿಸಿದ ಅವರು, ನೀವು ಹೇಗಿದ್ದರೂ 5 ಟಿಎಂಸಿ ಕಾವೇರಿ ನೀರನ್ನು ಸ್ಟಾಲಿನ್ಗೆ ಕೊಟ್ಟಿದ್ದೀರಿ. ಕನಕಪುರದಿಂದ ಹತ್ತಿರ ಇರುವ ಆನೇಕಲ್ ಸಮೀಪದ ಹೊಸೂರನ್ನು ಬೆಂಗಳೂರಿಗೆ ಸೇರಿಸಿ. ಈ ಬಗ್ಗೆ ದೋಸ್ತ್ ಸ್ಟಾಲಿನ್ ಜೊತೆ ಮಾತನಾಡಿ, ಅದನ್ನೂ ಸೇರಿಸಿ ಬೆಂಗಳೂರನ್ನು ಹಾಳುಗೆಡಹಲು ಏನೇನು ಹುನ್ನಾರ ಬೇಕೋ ಅದನ್ನು ಮಾಡಿಬಿಡಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಹಿಂದೆ 50 ವರ್ಷ ಆಳ್ವಿಕೆ ಮಾಡಿದ ಕಾಂಗ್ರೆಸ್ಸಿಗರು ಯಾಕೆ ಅವಾಗ ಬೆಂಗಳೂರಿಗೆ ಏನೂ ಮಾಡಿಲ್ಲ? ಆಗ ಯೋಗ್ಯತೆ ಇರಲಿಲ್ಲ ಅಲ್ಲವೇ? ಆಗ ಏನೂ ಮಾಡಿಲ್ಲ ಅಲ್ಲವೇ ಎಂದು ಕೇಳಿದರು. ಈಗ ಸೌಜನ್ಯಶೀಲ, ಶಾಂತಿಪ್ರಿಯ ಬೆಂಗಳೂರಿನ ಜನ ನೆಮ್ಮದಿಯಿಂದಿದ್ದಾರೆ. ನಿಮ್ಮ ರಿಪಬ್ಲಿಕ್ ಆಫ್ ಕನಕಪುರವನ್ನು ಸೇರಿಸಿದರೆ ಬೆಂಗಳೂರಿನ ಜನರ ಪಾಡೇನು ಎಂದು ಪ್ರಶ್ನೆಯನ್ನು ಮುಂದಿಟ್ಟರು.
ಬೆಂಗಳೂರು ಅವ್ಯವಸ್ಥೆಯ ಆಗರವಾಗಲು ಬಿಡುವುದಿಲ್ಲ. ನಮ್ಮ ಪಕ್ಷದ ನಿಲುವೂ ಅದೇ ಇದೆ. ಇರುವುದನ್ನು ಅಭಿವೃದ್ಧಿ ಪಡಿಸೋಣ. ಅಭಿವೃದ್ಧಿಗೂ ಇನ್ನೊಂದೆರಡು ವರ್ಷ ನಯಾಪೈಸೆ ಹಣ ಇಲ್ಲ ಎಂದು ಸಿದ್ದರಾಮಯ್ಯನವರು ಹೇಳಿದ್ದಾರೆ. ರಸ್ತೆಗಳು ಹಾಳಾಗಿವೆ. 10 ಸಾವಿರ ಹೊಂಡಗಳಾಗಿವೆ. ಕಸದ ಕೊಂಪೆ ಹೆಚ್ಚಾಗಿದೆ ಎಂದು ಟೀಕಿಸಿದರು.
ಹೊಸೂರು, ಕನಕಪುರ, ರಾಮನಗರ, ಮಾಗಡಿ ಏನೇನಿದೆಯೋ ಎಲ್ಲ ಸೇರಿಸಿದರೆ ರಿಯಲ್ ಎಸ್ಟೇಟ್ ದಂಧೆ ಮಾಡಲು ಅವಕಾಶ ಆಗಲಿದೆ. ಬೆಂಗಳೂರಿನ ಜನರು ನರಕ ನೋಡಲು ಪ್ರಯತ್ನ ಕಾಂಗ್ರೆಸ್ಸಿನವರದು ಎಂದು ಆಕ್ಷೇಪಿಸಿದರು. ಬೆಂಗಳೂರಿನ ಜನರು ಎಲ್ಲದಕ್ಕೂ ಮೌನ ವಹಿಸದಿರಿ; ಸಾಮಾಜಿಕ ಜಾಲತಾಣ ಸೇರಿ ಎಲ್ಲ ಕಡೆ ಪ್ರತಿಕ್ರಿಯೆ ಕೊಡಿ ಎಂದು ಮನವಿ ಮಾಡಿದರು. ಒಬ್ಬನ ತೆವಲಿಗಾಗಿ ಈ ಪ್ರಯತ್ನ ಎಂದು ಟೀಕಿಸಿದರು.
ಅಧಿಕಾರ ಸ್ವೀಕಾರ ಸಮಾರಂಭದ ಬಳಿಕ ಸಿದ್ದರಾಮಯ್ಯ ಎಲ್ಲೂ ಕಾಣುತ್ತಿಲ್ಲ ಎಂದು ತಿಳಿಸಿದ ಅವರು, ಕರ್ನಾಟಕಕ್ಕೆ ಸಿಎಂ ಇದ್ದೂ ಬೇರೆಯವರದೇ ರಾಜ್ಯಭಾರ ಎನ್ನುವಂತಾಗಿದೆ ಎಂದು ದೂರಿದರು. ಸಿದ್ದರಾಮಯ್ಯನವರು ನಾನೇ ಸಿಎಂ ಎಂದರೆ ಅದು ದೃಢಗೊಳ್ಳುತ್ತದೆ. ವಿಜಯನಗರ ಜಿಲ್ಲೆ ಮಾಡಲು ಹಲವಾರು ವರ್ಷ ಪ್ರತಿಭಟನೆ, ಹೋರಾಟ ನಡೆದಿತ್ತು. ಆದರೆ, ಕನಕಪುರ, ರಾಮನಗರ, ಹೊಸೂರು ಸೇರಿಸಲು ಡಿಕೆ ಶಿವಕುಮಾರ್ ಒಬ್ಬರದು ಹೋರಾಟ. ಜನರೇನೂ ಹೋರಾಟ ಮಾಡಿಲ್ಲ ಎಂದು ತಿಳಿಸಿದರು.