ಸುದ್ದಿಮೂಲ ವಾರ್ತೆ
ಬೆಂಗಳೂರು, ಏ.11: ಬಿಜೆಪಿ ಪಕ್ಷ ಇದುವರೆಗೂ ಒಬ್ಬ ಅಭ್ಯರ್ಥಿಯ ಹೆಸರು ಬಿಡುಗಡೆ ಮಾಡಿಲ್ಲ. ಇದರ ಮಧ್ಯೆಯೇ ಈಶ್ವರಪ್ಪ ಅವರು ತಮ್ಮ ಹೈಕಮಾಂಡ್ ನಾಯಕರಿಗೆ ಲವ್ ಲೆಟರ್ ಬರೆದಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಲೇವಡಿ ಮಾಡಿದ್ದಾರೆ.
ಈಶ್ವರಪ್ಪ ಅವರು ನನ್ನ ವಿರುದ್ಧ ಸ್ಪರ್ಧೆ ಮಾಡಿದ್ದರು. ಅವರ ಪಕ್ಷ ಹಾಗೂ ಅವರ ತೀರ್ಮಾನ, ಅವರಿಗೆ ಒಳ್ಳೆಯದಾಗಲಿ ಎಂದು ನವದೆಹಲಿಯಿಂದ ಮರಳಿದ ಬಳಿಕ ಶಿವಕುಮಾರ್ ಸುದ್ದಿಗಾರರೊಂದಿಗೆ ಮಾತನಡಿದರು.
ಕಾಂಗ್ರೆಸ್ ಈಗಾಗಲೇ 167 ಕ್ಷೇತ್ರಗಳ ಪಟ್ಟಿ ಬಿಡುಗಡೆ ಮಾಡಿದೆ. ಉಳಿದ ಕ್ಷೇತ್ರಗಳ ಪಟ್ಟಿ ಕೂಡ ಸದ್ಯದಲ್ಲೇ ಬಿಡುಗಡೆ ಆಗಲಿದೆ . ಶುಭ ಮುಹೂರ್ತ, ಶುಭ ಘಳಿಗೆ ನೋಡಿ ಪಟ್ಟಿ ಬಿಡುಗಡೆ ಮಾಡಲಾಗುವುದು ಎಂದು ತಿಳಿಸಿದರು.
ಲಕ್ಷ್ಮಣ ಸವದಿ ಕಾಂಗ್ರೆಸ್ ಪಕ್ಷ ಸೇರ್ಪಡೆ ಬಗ್ಗೆ ಕೇಳಿದಾಗ, ‘ಲಕ್ಷ್ಮಣ ಸವದಿ ಹಿರಿಯ ನಾಯಕರು. ಅವರ ಕಾಂಗ್ರೆಸ್ ಸೇರ್ಪಡೆ ವಿಚಾರ ಪ್ರಸ್ತಾಪವಾಗಿಲ್ಲ. ಸೋಮಣ್ಣ ಅವರು ಕೂಡ ಪಕ್ಷ ಸೇರ್ಪಡೆ ಆಗುತ್ತಾರೆ ಎಂಬ ವಿಚಾರ ಸುದ್ದಿಯಾಯಿತು. ಆದರೆ ಅವರು ಯಾವತ್ತೂ ಕಾಂಗ್ರೆಸ್ ಸೇರುವ ಬಗ್ಗೆ ಚರ್ಚೆ ಮಾಡಿಲ್ಲ. ಶಿವಮೊಗ್ಗ, ಹಾವೇರಿ ಇತರೆ ಭಾಗಗಳ ಕೆಲ ನಾಯಕರು ಪಕ್ಷ ಸೇರುವ ಇಂಗಿತ ವ್ಯಕ್ತಪಡಿಸಿದ್ದರು. ಅವರು ಬಂದಾಗ ಅವರಿಗೆ ಸೂಕ್ತ ಸ್ಥಾನಮಾನ ನೀಡಬೇಕು. ಪಕ್ಷದಲ್ಲಿ ಸೂಕ್ತ ಸ್ಥಾನಮಾನ ಖಾಲಿ ಇಲ್ಲದಿದ್ದರೆ ಅವರನ್ನು ಪಕ್ಷಕ್ಕೆ ಕರೆದುಕೊಳ್ಳುವುದು ಸೂಕ್ತವಲ್ಲ’ ಎಂದು ತಿಳಿಸಿದರು.
ಜೆಡಿಎಸ್ ಹಾಸನ ಟಿಕಟ್ ಹಂಚಿಕೆ ಬಗ್ಗೆ ಮಾತನಾಡಿದ ಡಿಕೆಶಿ, ‘ಅವರ ಪಕ್ಷ, ಕುಟುಂಬದ ವಿಚಾರದ ಬಗ್ಗೆ ನಾನು ಚರ್ಚೆ ಮಾಡುವುದಿಲ್ಲ. ಅವರ ರಾಜಕೀಯ ಅವರು ಮಾಡಲಿ, ನಾವು ನಮ್ಮ ಕೆಲಸ ಮಾಡುತ್ತೇವೆ. ಅವರ ಆಂತರಿಕ ವಿಚಾರದಲ್ಲಿ ನಾವು ಹಸ್ತಕ್ಷೇಪ ಮಾಡುವುದಿಲ್ಲ. ಅದರ ಅವಶ್ಯಕತೆ ಕಾಂಗ್ರೆಸ್ ಪಕ್ಷಕ್ಕೆ ಇಲ್ಲ. ಅವರ ಜತೆ ನಾವು ಕೆಲಸ ಮಾಡಿ ಈಗ ಅವರು ಸರಿ ಇಲ್ಲ ಎಂದು ದೂರುವುದು ಸರಿಯಲ್ಲ’ ಎಂದು ತಿಳಿಸಿದರು.