ನವದೆಹಲಿ, ಏ.10: ಕಾಂಗ್ರೆಸ್ ಮೂರನೇ ಪಟ್ಟಿ ಬಿಡುಗಡೆ ಸಂಬಂಧ ದೆಹಲಿಯಲ್ಲಿ ಕಾಂಗ್ರೆಸ್ ಉನ್ನತ ನಾಯಕರ ಚರ್ಚೆ ನಡೆದಿದ್ದು, ಟಿಕೆಟ್ ಹಂಚಿಕೆ ಸಂಬಂಧ ಕೆಲವು ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಲಾಗುತ್ತಿದೆ.
ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮತ್ತು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಸೋಮವಾರ ದೆಹಲಿಗೆ ತೆರಳಿದ್ದಾರೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನಿವಾಸದಲ್ಲಿ ಸೋಮವಾರ ರಾತ್ರಿ ಮಹತ್ವದ ಸಭೆ ನಡೆಸಲಾಗಿದೆ. ಈ ಸಭೆಯಲ್ಲಿ ಖರ್ಗೆ, ರಾಹುಲ್ಗಾಂಧಿ, ಡಿ.ಕೆ. ಶಿವಕುಮಾರ್ ಮತ್ತು ಸಿದ್ದರಾಮಯ್ಯ ಮಾತ್ರ ಇದ್ದರು ಎನ್ನಲಾಗಿದೆ.
ಮೊದಲ ಪಟ್ಟಿಯಲ್ಲಿ 120 ಕ್ಷೇತ್ರಗಳಿಗೆ ಮತ್ತು ಎರಡನೇ ಪಟ್ಟಿಯಲ್ಲಿ 42 ಕ್ಷೇತ್ರಗಳ ಅಭ್ಯರ್ಥಿಗಳನ್ನು ಕಾಂಗ್ರೆಸ್ ಪ್ರಕಟಿಸಿದೆ. ಈಗ ಬಾಕಿ ಇರುವ 58 ಕ್ಷೇತ್ರಗಳಿಗೆ ಮೂರನೇ ಪಟ್ಟಿ ಬಿಡುಗಡೆ ಕಾಂಗ್ರೆಸ್ಗೆ ಸವಾಲಿನ ವಿಷಯವಾಗಿದೆ. ಆದರೂ ಸಹ ಅಳೆದು, ತೂಗಿ ಅಂತಿಮಗೊಳಿಸುವ ಮೂಲಕ ಬಹುತೇಕ ಬುಧವಾರದೊಳಗೆ ತನ್ನ ಅಂತಿಮ ಪಟ್ಟಿ ಬಿಡುಗಡೆ ಮಾಡಲು ಕಾಂಗ್ರೆಸ್ ನಿರ್ಧರಿಸಿದೆ ಎನ್ನಲಾಗಿದೆ.
ಕಾಂಗ್ರೆಸ್ನ ಮೊದಲೆರಡು ಪಟ್ಟಿಗಳನ್ನು ಚುನಾವಣಾ ಸ್ಕ್ರೀನಿಂಗ್ ಕಮಿಟಿ ಮೂಲಕ ಅಂತಿಮಗೊಳಿಸಲಾಗಿತ್ತು. ಇದರಲ್ಲಿ ಕರ್ನಾಟಕದಿಂದ ಡಿಕೆಶಿ, ಸಿದ್ದರಾಮಯ್ಯ, ಎಂ.ಬಿ. ಪಾಟೀಲ್, ಪರಮೇಶ್ವರ್, ಬಿ.ಕೆ. ಹರಿಪ್ರಸಾದ್ ಸಹಿತ ಹಲವರು ಇದ್ದರು. ಆದರೆ, ಮೂರನೇ ಪಟ್ಟಿ ಸಂಬಂಧ ಸ್ಕ್ರೀನಿಂಗ್ ಕಮಿಟಿಯ ಉಪಸಮಿತಿಯೊಂದನ್ನು ರಚಿಸಲಾಗಿದೆ. ಇದರಲ್ಲಿ ಕರ್ನಾಟಕದಿಂದ ಡಿಕೆಶಿ ಮತ್ತು ಸಿದ್ದರಾಮಯ್ಯ ಅವರಿಗೆ ಮಾತ್ರ ಸ್ಥಾನ ನೀಡಲಾಗಿದೆ. ಉಳಿದವರನ್ನು ಕೈಬಿಡಲಾಗಿದೆ.
ಸಿದ್ದರಾಮಯ್ಯ ವರುಣಾದಲ್ಲಿ ಮಾತ್ರ?
ಸಿದ್ದರಾಮಯ್ಯ ಅವರಿಗೆ ಈಗಾಗಲೇ ವರುಣಾ ಕ್ಷೇತ್ರದಿಂದ ಟಿಕೆಟ್ ಘೋಷಿಸಲಾಗಿದೆ. ಇದರ ಜೊತೆಗೆ ಕೋಲಾರ ಕ್ಷೇತ್ರದಿಂದಲೂ ಸಹ ಸ್ಪರ್ಧಿಸಲಿದ್ದಾರೆ ಎಂದು ಹೇಳಲಾಗಿತ್ತು. ಸಿದ್ದರಾಮಯ್ಯ ಅವರೂ ಸಹ ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಸುವ ಇಂಗಿತ ವ್ಯಕ್ತಪಡಿಸಿದ್ದರು. ಆದರೆ, ಕೇಂದ್ರ ಸಮಿತಿ ಇದಕ್ಕೆ ಸಹಮತ ನೀಡಿಲ್ಲ ಎಂದು ಹೇಳಲಾಗುತ್ತಿದೆ. ಒಬ್ಬರಿಗೆ ಎರಡು ಕ್ಷೇತ್ರದಲ್ಲಿ ಸ್ಪರ್ಧಿಸುವ ಅವಕಾಶ ನೀಡುವುದು ಏಕೆ? ಹೀಗಾಗಿ ವರುಣಾದಲ್ಲಿ ಮಾತ್ರ ಸ್ಪರ್ಧಿಸುವುದು ಉತ್ತಮ ಎಂಬ ಅಭಿಪ್ರಾಯಕ್ಕೆ ಬರಲಾಗಿದೆ ಎಂದು ಹೇಳಲಾಗುತ್ತಿದೆ.
ಕಾಂಗ್ರೆಸ್ ಹಿರಿಯ ನಾಯಕ, ಕುರುಬ ಸಮುದಾಯಕ್ಕೆ ಸೇರಿದ ಎಚ್.ಎಂ. ರೇವಣ್ಣ ಅವರಿಗೂ ಟಿಕೆಟ್ ಸಿಗುವ ಸಾಧ್ಯತೆ ಇದೆ ಎನ್ನಲಾಗಿದೆ. ನನ್ನ ಹಿರಿತನ ಗಮನಿಸಿ ಅವಕಾಶ ನೀಡುವಂತೆ ರೇವಣ್ಣ ಅವರೇ ಪಕ್ಷದ ಮುಂದೆ ಕೋರಿದ್ದರು. ಹರಿಹರ ಕ್ಷೇತ್ರದಿಂದ ರೇವಣ್ಣ ಟಿಕೆಟ್ ಬಯಸಿದ್ದಾರೆ. ರೇವಣ್ಣ ಅವರ ಬಯಕೆ ಈಡೇರುತ್ತದೆಯೇ ಎಂಬುದನ್ನು ಕಾದು ನೋಡಬೇಕು.
ಇನ್ನು ಬೆಂಗಳೂರಿನ ಪುಲಿಕೇಶಿನಗರ ವಿಧಾನಸಭಾ ಕ್ಷೇತ್ರದಿಂದಲೂ ಸಹ ಅಖಂಡ ಶ್ರೀನಿವಾಸಮೂರ್ತಿ ಪ್ರಮುಖ ಆಕಾಂಕ್ಷಿ ಆಗಿದ್ದಾರೆ. ಅಖಂಡ ಪರ ಕೆಲವು ಸ್ವಾಮೀಜಿಗಳು ಸಹ ಒತ್ತಡ ಹೇರುತ್ತಿದ್ದಾರೆ. ಸಿದ್ದರಾಮಯ್ಯ ಅಖಂಡ ಪರ ಒಲವು ಹೊಂದಿದ್ದರೆ, ಜಮೀರ್ ಅಹ್ಮದ್ ಅಖಂಡ ಅವರಿಗೆ ಟಿಕೆಟ್ ನೀಡುವಂತೆ ತೀವ್ರ ಒತ್ತಡ ಹೇರುತ್ತಿದ್ದಾರೆ. ಚುನಾವಣಾ ಸಮಿತಿ ಯಾವ ನಿರ್ಧಾರ ತೆಗೆದುಕೊಳ್ಳುತ್ತದೆ ಎಂಬುದು ಕುತೂಹಲ ಮೂಡಿಸಿದೆ.
ರಾಯಚೂರು ಜಿಲ್ಲೆಯ ರಾಯಚೂರು ನಗರ, ಮಾನ್ವಿ, ಸಿಂಧನೂರು ಮತ್ತು ಲಿಂಗಸೂಗೂರು ವಿಧಾನಸಭಾ ಕ್ಷೇತ್ರಗಳಿಗೆ ಟಿಕೆಟ್ ಅಂತಿಮಗೊಳ್ಳಬೇಕಾಗಿದ್ದು, ಆಕಾಂಕ್ಷಿಗಳು ನವದೆಹಲಿಯಲ್ಲಿಯೇ ಬೀಡು ಬಿಟ್ಟಿದ್ದಾರೆ.