ಸುದ್ದಿಮೂಲ ವಾರ್ತೆ
ಹೊಸಕೋಟೆ, ನ.06 : ದಲಿತ ಸಮುದಾಯ ಸ್ವಾತಂತ್ರ್ಯ ಬಂದಾಗಿನಿಂದ ಆಳುವ ರಾಜಕೀಯ ಪಕ್ಷಗಳಿಗೆ ಗುಲಾಮರಾಗಿದ್ದಾರೆ ಹೊರತು ಎಂದಿಗೂ ನಾವು ಆಳಬೇಕು ಎನ್ನುವ ಕಲ್ಪನೆಯನ್ನು ಸಹ ಹೊಂದಿಲ್ಲ ಎಂದು ರಿಪಬ್ಲಿಕ್ ಪಾರ್ಟಿ ಆಫ್ ಇಂಡಿಯಾದ ರಾಷ್ಟ್ರೀಯ ಕಾರ್ಯಾಧ್ಯಕ್ಷ ಡಾ.ಎಂ.ವೆಂಕಟಸ್ವಾಮಿ ಅಸಮಾಧಾನ ವ್ಯಕ್ತಪಡಿಸಿದರು.
ನಗರದ ಆರ್ಪಿಐ ಕಚೇರಿಯಲ್ಲಿ ನಡೆದ ಬೆಂಗಳೂರು ಗ್ರಾಮಾಂತರ ಜಿಲ್ಲಾ ಪದಾಧಿಕಾರಿಗಳ ಆಯ್ಕೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸಂವಿಧಾನ ಬರೆದ ಡಾ.ಬಿ.ಆರ್.ಅಂಭೇಡ್ಕರ್ ದಲಿತರು ಕೂಡ ರಾಜಕೀಯವಾಗಿ, ಸಾಮಾಜಿಕವಾಗಿ ಸಮಾಜದ ಎಲ್ಲಾ ಕ್ಷೇತ್ರಗಳಲ್ಲಿ ಸಾಧನೆ ಮಾಡಬೇಕು. ಪ್ರಮುಖವಾಗಿ ರಾಜಕೀಯವಾಗಿ ಆಳುವ ವರ್ಗಕ್ಕೆ ಗುಲಾಮರಾಗಿ ಬದುಕುವ ಬದಲಾಗಿ ದಲಿತರು ಕೂಡ ಆಳುವ ವರ್ಗವಾಗಲಿ ಎಂದು ಆರ್ಪಿಐ ಪಕ್ಷ ಸ್ಥಾಪಿಸಿದರು. ಈ ನಿಟ್ಟಿನಲ್ಲಿ ಪ್ರತಿ ಗ್ರಾಪಂ ಮಟ್ಟದಲ್ಲಿ ಆರ್ಪಿಐ ಪಕ್ಷ ಸಂಘಟನೆ ಮಾಡಬೇಕು. ಪ್ರತಿ ಚುನಾವಣೆಯಲ್ಲಿ ಅಭ್ಯರ್ಥಿಗಳು ಸ್ಪರ್ಧೆ ಮಾಡಬೇಕು. ಅಧಿಕಾರದ ಚುಕ್ಕಾಣಿ ಹಿಡಿಯಬೇಕು ಎಂದರು.
ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯ ಲಘುಮಯ್ಯ ಮಾತನಾಡಿ, ಆರ್ಪಿಐ ಸ್ಥಾಪನೆಯಾಗಿ ದಶಕಗಳೆ ಕಳೆದರೂ ಸಹ ಅದರ ಪೋಷಣೆ ಆಗಿಲ್ಲ. ಆದ್ದರಿಂದ ದಲಿತರು ಇನ್ನಾದರೂ ಜಾಗೃತರಾಗಿ ಇತರೆ ರಾಜಕೀಯ ಪಕ್ಷಗಳ ಆಸೆ ಆಮಿಷಕ್ಕೆ ಬಲಿಯಾಗದೆ ನಮ್ಮದೆ ಪಕ್ಷವನ್ನು ಸಂಘಟಿಸಿ ಅಧಿಕಾರಕ್ಕೆ ತಂದು ಆಳುವ ವರ್ಗ ನಾವಾಗಬೇಕು.
ಜಾಗೃತರಾಗದೆ ಅಂಬೇಡ್ಕರ್ ಹೆಸರು ಪ್ರತಿಪಾದಿಸಿ, ಕಾಂಗ್ರೆಸ್, ಬಿಜೆಪಿಗೆ ಜೈ ಎನ್ನುವುದಾರೆ ಅಂಬೇಡ್ಕರ್ ಮೀಸಲಾತಿ ನಮಗೆ ಏಕೆ ಬೇಕು ಎಂದರು.
ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯ ಯಳಚಹಳ್ಳಿ ಶಶಿಕುಮಾರ್, ರಾಜ್ಯಾಧ್ಯಕ್ಷ ಹಾಸನ ಸತೀಶ್, ಕಾರ್ಯಾಧ್ಯಕ್ಷ ಗೋವಿಂದಯ್ಯ, ಪ್ರ.ಕಾರ್ಯದರ್ಶಿ ವೆಂಕಟರಮಣಪ್ಪ, ಕೋಲಾರ ಕಾರ್ಯದರ್ಶಿ ಭದ್ರಿ ನಾರಾಯಣ್, ಯುವ ಘಟಕದ ಕಾರ್ಯದರ್ಶ ನಾಗೇಶ್ ಹಾಜರಿದ್ದರು.