ಸುದ್ದಿಮೂಲ ವಾರ್ತೆ
ಬೆಂಗಳೂರು, ಮೇ 11: ಕರ್ನಾಟಕ ವಿಧಾನಸಭೆ ಚುನಾವಣೆ ಹಿನ್ನೆಲೆ ಮದ್ಯ ಮಾರಾಟ ನಿಷೇಧಿಸಲಾಗಿತ್ತು. ಇದರ ಬೆನ್ನಲ್ಲೇ ಸರ್ಕಾರಕ್ಕೆ ಸುಮಾರು ಕೋಟಿ ಹಣ ನಷ್ಟವಾಗಿದೆ.
ಮೇ 9 ಮತ್ತು 10ರಂದು ಎರಡು ದಿನ ಬಾರ್ ಶಾಪ್ಗಳನ್ನು ಬಂದ್ ಮಾಡಿಸಲಾಗಿತ್ತು. ಇದರಿಂದ ಸರ್ಕಾರಕ್ಕೆ ಸುಮಾರು 150 ಕೋಟಿಗೂ ಅಧಿಕ ನಷ್ಟವಾಗಿದೆ. ಅಲ್ಲದೆ, ತಮ್ಮ ಆದಾಯಕ್ಕೂ ಧಕ್ಕೆ ಬಂದಿದೆ ಎಂದು ಬಾರ್ ಮಾಲೀಕರು ತಿಳಿಸಿದ್ದಾರೆ.
ಪ್ರತಿ ದಿನ 12,500 ಮದ್ಯದ ಅಂಗಡಿಗಳಿಂದ 80 ರಿಂದ 90 ಕೋಟಿ ರೂ. ಆದಾಯ ಬರುತ್ತಿತ್ತು. ಅದೇ ರೀತಿ ಬಾರ್ ಮಾಲೀಕರಿಗೂ ನಷ್ಟ ಆಗಿದೆ. ಒಂದು ಬಾರ್ಗೆ ದಿನಕ್ಕೆ ₹1.5 ಲಕ್ಷಕ್ಕೂ ಅಧಿಕ ಆದಾಯ ಬರುತ್ತದೆ. ಒಂದು ಎಂಆರ್ಪಿ ಶಾಪ್ಗೆ 3 ಲಕ್ಷ ಆದಾಯ ಬರುತ್ತದೆ. ಎರಡು ದಿನದಲ್ಲಿ 12,500 ಮದ್ಯದ ಅಂಗಡಿಗಳಿಂದ ಒಟ್ಟು 200 ಕೋಟಿಗೂ ಅಧಿಕ ಲಾಭ ಆಗುತ್ತಿತ್ತು. ಆದರೆ ಎರಡು ದಿನ ಬಂದ್ ಆಗಿ ಒಟ್ಟು 350 ಕೋಟಿ ರೂಪಾಯಿ ನಷ್ಟವಾಗಿದೆ ಎಂದು ವ್ಯಾಪಾರಿಗಳು ಅಳಲು ತೋಡಿಕೊಂಡಿದ್ದಾರೆ.
ಮೇ 13ರಂದು ಮತ ಎಣಿಕೆ ಹಿನ್ನೆಲೆ ಶುಕ್ರವಾರ ರಾತ್ರಿಯಿಂದ ಮತ್ತೆ ಒಂದು ದಿನ ಮದ್ಯದಂಗಡಿಗಳು ಬಂದ್ ಆಗಲಿದ್ದು, ಮತ್ತಷ್ಟು ನಷ್ಟ ಅನುಭವಿಸಲಿವೆ.