ಸುದ್ದಿಮೂಲ ವಾರ್ತೆ
ದೇವನಹಳ್ಳಿ, ಜು 18 : ಪ್ಲಾಸ್ಟಿಕ್ ಮುಕ್ತ ದೇವನಹಳ್ಳಿ ಪಟ್ಟಣವನ್ನಾಗಿಸಲು ಪ್ರತಿ ನಾಗರೀಕರು ಸಹಕಾರ ನೀಡಬೇಕು. ಒಂದು ವೇಳೆ ಪ್ಲಾಸ್ಟಿಕ್ ಬಳಕೆ ಕಂಡುಬಂದರೆ ಪುರಸಭೆಯಿಂದ ದಂಡ ವಿಧಿಸಲಾಗುತ್ತದೆ ಎಂದು ಪುರಸಭಾ ಮುಖ್ಯಾಧಿಕಾರಿ ದೊಡ್ಡಮಲವಯ್ಯ ತಿಳಿಸಿದರು.
ದೇವನಹಳ್ಳಿ ಪಟ್ಟಣದ ಬಜಾರ್ರಸ್ತೆಯಲ್ಲಿರುವ ಮಳಿಗೆಯೊಂದರಲ್ಲಿ ಪ್ಲಾಸ್ಟಿಕ್ ಪರಿಕರಗಳನ್ನು ಮಾರಾಟ ಮಾಡುತ್ತಿದ್ದ ವಸ್ತುಗಳನ್ನು ವಶಕ್ಕೆ ಪಡೆದು ದಂಡ ವಿಧಿಸುವುದರ ಮೂಲಕ ಅವರು ಮಾತನಾಡಿದರು.
ಸ್ವಚ್ಛ ಸುಂದರ ಮತ್ತು ಆರೋಗ್ಯಕರ ವಾತಾವರಣ ಸೃಷ್ಠಿಯಾಗಬೇಕಾದರೆ, ಗೃಹ ಬಳಕೆಗೆ ಪರಿಸರ ಸ್ನೇಹಿ ವಸ್ತುಗಳ ಬಳಕೆ ಹೆಚ್ಚು ಮಾಡಬೇಕು. ಪ್ಲಾಸ್ಟಿಕ್ ನಂತರ ಕರಗದ ವಸ್ತುವನ್ನು ಬಳಸುವುದು ಆರೋಗ್ಯದ ಮೇಲೆ ಹೆಚ್ಚು ದುಷ್ಪರಿಣಾಮ ಬೀರುವುದರ ಜತೆಗೆ ಪಕೃತಿ ನಾಶಕ್ಕೆ ಕಾರಣವಾಗುತ್ತದೆ. ಪುರಸಭೆಯಿಂದ ದಿಟ್ಟ ಹೆಜ್ಜೆಯನ್ನಿಡಲಾಗುತ್ತಿದ್ದು, ಪ್ಲಾಸ್ಟಿಕ್ ಮುಕ್ತವನ್ನಾಗಿಸಲು ಪ್ರತಿಯೊಬ್ಬರೂ ಮುಂದಾಗಬೇಕು. ಈಗಾಗಲೇ ಸಾಕಷ್ಟು ಬಾರಿ ಬಿತ್ತಿ ಪತ್ರಗಳನ್ನು ನೀಡಿ ಜಾಗೃತಿ ಮೂಡಿಸಲಾಗಿದೆ. ಆದರೂ ಸಹ ಕೆಲವು ಅಂಗಡಿಯವರು ಪ್ಲಾಸ್ಟಿಕ್ ಬಳಕೆ ಮತ್ತು ಮಾರಾಟವಾಗುತ್ತಿರುವುದು ಪದೇ ಪದೇ ಕಂಡುಬಂದಿದೆ. ಇನ್ನಾದರೂ ಉದ್ಯಮಿದಾರರು ಇಂತಹ ಪ್ಲಾಸ್ಟಿಕ್ಯುಕ್ತ ವಸ್ತುಗಳನ್ನು ಮಾರಾಟವನ್ನು ನಿಲ್ಲಿಸಬೇಕು. ಗ್ರಾಹಕರು ಪ್ಲಾಸ್ಟಿಕ್ ಖರೀದಿಸುವುದನ್ನು ಕೈಬಿಡಬೇಕು ಎಂದು ಮನವಿ ಮಾಡಿದರು.
ಇದೇ ಸಂದರ್ಭದಲ್ಲಿ ಪುರಸಭಾ ಆರೋಗ್ಯಾಧಿಕಾರಿ ಶ್ರೀದೇವಿ, ಪುರಸಭಾ ಸಿಬ್ಬಂದಿ, ಮತ್ತಿತರರು ಇದ್ದರು.