ಸುದ್ದಿಮೂಲ ವಾರ್ತೆ
ಹೊಸಕೋಟೆ, ಅ. 4 : ಸರ್ಕಾರಿ ಶಾಲೆಗಳಲ್ಲಿ ಸಹ ಗುಣಮಟ್ಟದ ಶಿಕ್ಷಣವನ್ನು ಕೊಡುತ್ತಿದ್ದು ಸರ್ಕಾರದ ಜೊತೆ ಜೊತೆಗೆ ದಾನಿಗಳ ನೆರವಿನ ಹಸ್ತ ಕೂಡ ಅತ್ಯಗತ್ಯ ಎಂದು ಶಾಸಕ ಶರತ್ ಬಚ್ಚೇಗೌಡ ತಿಳಿಸಿದರು.
ತಾಲೂಕಿನ ಕಸಬಾ ಹೋಬಳಿಯ ಕಣ್ಣೂರಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮಕ್ಕಳಿಗೆ ನೋಟ್ ಬುಕ್, ಸಮವಸ್ತ್ರ ಸೇರಿದಂತೆ ಕಲಿಕಾ ಸಾಮಾಗ್ರಿಗಳನ್ನ ವಿತರಿಸಿ ಮಾತನಾಡಿದರು.
ಗ್ರಾಮೀಣ ಭಾಗದಲ್ಲಿ ಆಂಗ್ಲಭಾಷೆಯ ವ್ಯಾಮೋಹ ಹೆಚ್ಚಾಗಿದೆ. ಇದರ ಪರಿಣಾಮ ಖಾಸಗಿ ಶಾಲೆಗಳಿಗೆ ದಾಖಲಾತಿ ಹೆಚ್ಚಾಗಿ ಸರ್ಕಾರಿ ಶಾಲೆಗಳಲ್ಲಿ ದಾಖಲಾತಿ ಕುಂಠಿತವಾಗುತ್ತಿದೆ. ಆದ್ದರಿಂದ ಗ್ರಾಮೀಣ ಭಾಗದ ಪೋಷಕರು ತಮ್ಮ ಮಕ್ಕಳನ್ನು ಗ್ರಾಮದ ಶಾಲೆಗಳಿಗೆ ದಾಖಲು ಮಾಡಿ ಸರ್ಕಾರಿ ಶಾಲೆಗಳ ಉಳಿವಿಗೆ ಸಹಕರಿಸಬೇಕು ಎಂದರು.
ಮಾದರಿ ವಸತಿ ಶಾಲೆಗಳ ನಿರ್ಮಾಣ ಗ್ರಾಮಾಂತರ ಪ್ರದೇಶದಲ್ಲಿನ ಸರ್ಕಾರಿ ಶಾಲೆಗಳಲ್ಲಿ ಕೇವಲ ಹತ್ತರಿಂದ ಇಪ್ಪತ್ತು ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿರುವ ಶಾಲೆಗಳು ಹೆಚ್ಚಾಗಿದ್ದು ಮಾದರಿ ವಸತಿ ಶಾಲೆಗಳನ್ನು ನಿರ್ಮಿಸಿ ಗುಣಮಟ್ಟದ ಶಿಕ್ಷಣವನ್ನು ಉಚಿತ ಊಟ ವಸತಿ ಜೊತೆಗೆ ನೀಡಲು ಸರ್ಕಾರ ನಿರ್ಧಾರ ಮಾಡಿದ್ದು ಮುಂದಿನ ದಿನಗಳಲ್ಲಿ ಹೋಬಳಿಗೊಂದು ಮಾದರಿ ವಸತಿ ಶಾಲೆ ನಿರ್ಮಾಣ ಆಗಲಿದೆ ಎಂದು ಶಾಸಕ ಶರತ್
ಬಚ್ಚೇಗೌಡ ಇದೇ ಸಂದರ್ಭದಲ್ಲಿ ತಿಳಿಸಿದರು.
ಗ್ರಾ.ಪಂ ಸದಸ್ಯ ಮುನಿಯಪ್ಪ ಮಾತನಾಡಿ, ಗ್ರಾಮೀಣ ಭಾಗದ ಸರ್ಕಾರಿ ಶಾಲೆಗಳಲ್ಲಿನ ಬಡ ಕುಟುಂಬದ ಮಕ್ಕಳು ವ್ಯಾಸಂಗ ಮಾಡುತ್ತಿದ್ದಾರೆ. ಅಂತಹ ಮಕ್ಕಳಿಗೆ ನಾನು ಪ್ರತಿ ವರ್ಷ ನನ್ನ ದುಡಿಮೆಯ ಅಲ್ಪಭಾಗವನ್ನು ಸರ್ಕಾರಿ ಶಾಲೆ ಮಕ್ಕಳ ವಿದ್ಯಾಭ್ಯಾಸಕ್ಕೆ ವಿನಿಯೋಗಿಸುತ್ತಿದ್ದೇನೆ. ಸಮಾಜದಲ್ಲಿ ಉಳ್ಳವರು ಸಹ ಕೈ ಜೋಡಿಸಬೇಕು ಎಂದರು.
ಕೆಪಿಸಿಸಿ ಸದಸ್ಯ ನಾಣಿ, ತಾಪಂ ಮಾಜಿ ಸದಸ್ಯ ಅಪ್ಪಯ್ಯಣ್ಣ, ಮಾಜಿ ಗ್ರಾಪಂ ಸದಸ್ಯ ರಾಮಕೃಷ್ಣಪ್ಪ, ನಗರಸಭೆ ಸದಸ್ಯ ಕೇಶವಮೂರ್ತಿ, ಪಿಎಲ್ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಸುನಿಲ್, ಮುಖಂಡರಾದ ಚೀಮಂಡಹಳ್ಳಿ
ಮುನಿಶಾಮಣ್ಣ, ಮುಖ್ಯ ಶಿಕ್ಷಕಿ ರೇಣುಕಮ್ಮಹಾಜರಿದ್ದರು.