ಸುದ್ದಿಮೂಲ ವಾರ್ತೆ
ಸೂಲಿಬೆಲೆ, ಜೂ 28 : ಸಾಮಾಜಿಕವಾಗಿ ಪ್ರಗತಿ ಹೊಂದಬೇಕಾದರೆ ಶಿಕ್ಷಣವೇ ಮೂಲಧಾರ. ಪೋಷಕರು ತಮ್ಮ ಮಕ್ಕಳಿಗೆ ಗುಣಮಟ್ಟದ ಶಿಕ್ಷಣಕ್ಕೆ ಹೆಚ್ಚಿನ ಕಾಳಜಿ ವಹಿಸಬೇಕು. ಸದೃಢ ದೇಶ ನಿರ್ಮಿಸುವ ಶಿಲ್ಪಿಗಳನ್ನಾಗಿಸುವುದು ಶಿಕ್ಷಕರ ಜವಾಬ್ದಾರಿ ಎಂದು ಹೊಸಕೋಟೆ ಬಮುಲ್ ನ ಸಹಾಯಕ ವ್ಯವಸ್ಥಾಕರಾದ ಶ್ರೀರಾಮ್ ಹೇಳಿದರು.
ತಾಲೂಕಿನ ಪಿಲ್ಲಗುಂಪೆ ಸರ್ಕಾರಿ ಶಾಲಾಆವರಣದಲ್ಲಿ ವಿದ್ಯಾರ್ಥಿಗಳಿಗೆ ನೋಟ್ ಪುಸ್ತಕ ಹಾಗೂ ಲೇಖನ ಸಾಮಗ್ರಿ ವಿತರಿಸಿ ಮಾತನಾಡಿದರು. ಸರ್ಕಾರ ಗ್ರಾಮೀಣ ಭಾಗದಲ್ಲಿ ಖಾಸಗಿ ಶಾಲೆಗಳಿಗೆ ಪೈಪೋಟಿ ನೀಡುವ ನಿಟ್ಟಿನಲ್ಲಿ ಸರ್ಕಾರಿ ಶಾಲೆಗಳಲ್ಲಿ ಮಕ್ಕಳಿಗೆ ಗುಣಮಟ್ಟದ, ಮೌಲ್ಯಧಾರಿತ ಶಿಕ್ಷಣಕ್ಕೆ ವಿಶೇಷ ಆದ್ಯತೆ ನೀಡಿದೆ. ಸರ್ಕಾರಿ ಶಾಲೆಗಳಲ್ಲಿ ನುರಿತ ತಜ್ಞ ಶಿಕ್ಷಕರ ವೃಂದವಿದ್ದು, ಉತ್ತಮ ಶಿಕ್ಷಣ ಪಡೆಯಲು ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ಸೇರಿಸಿ ಸುಶಿಕ್ಷಿತರನ್ನಾಗಿ ಮಾಡಬೇಕು ಎಂದರು.
ಪೋಷಕರು ಖಾಸಗಿ ಶಾಲೆಗಳ ವ್ಯಾಮೋಹ ತೊರೆದು, ತಮ್ಮ ಮಕ್ಕಳನ್ನು ಕಡ್ಡಾಯವಾಗಿ ಸರ್ಕಾರಿ ಶಾಲೆಗೆ ಕಳುಹಿಸಬೇಕು. ಗ್ರಾಮೀಣ ಭಾಗದ ಕಡು ಬಡವ, ಶ್ರಮಿಕರ ಮಕ್ಕಳ ಭವಿಷ್ಯ ಉತ್ತಮಗೊಳಿಸಲು ಜನಪ್ರತಿನಿಧಿಗಳು ದಾನಿಗಳು ಸರ್ಕಾರಿ ಶಾಲೆಗಳ ಸರ್ವತೋಮುಖ ಪ್ರಗತಿಗೆ ಕೈ ಜೋಡಿಸಲು ಮುಂದಾಗಬೇಕು ಎಂದರು.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಶಿಕ್ಷಕರ ಸಂಘದ ಸಂಘಟನಾ ಕಾರ್ಯದರ್ಶಿಯಾದ ಆಶಾ ಮಾತನಾಡಿ, ಪೋಷಕರು ಮಕ್ಕಳಿಗೆ ಅನ್ಯ ಕೆಲಸಗಳಿಗೆ ತೊಡಗಿಸದೆ, ಹೆಚ್ಚಿನ ಸಮಯವನ್ನು ಅಭ್ಯಾಸಕ್ಕೆ ಮೀಸಲಿರಿಸಬೇಕು. ವಿದ್ಯಾರ್ಥಿಗಳು ಉತ್ತಮ ಅಂಕಗಳನ್ನು ಗಳಿಸುವುದಲ್ಲದೆ ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸಿ ಶಾಲೆಗೆ, ಹೆತ್ತವರಿಗೆ ಕೀರ್ತಿ ತರುವುದರೊಂದಿಗೆ, ನಿಮ್ಮ ಮುಂದಿನ ಭವಿಷ್ಯವನ್ನು ಉಜ್ವಲಗೊಳಿಸಬೇಕೆಂದು ಕಿವಿ ಮಾತು ಹೇಳಿದರು.
ಈ ಸಂದರ್ಭದಲ್ಲಿ ಶಿಕ್ಷಕ ಸಂಘದ ಉಪಾಧ್ಯಕ್ಷೆ ಲಲಿತಮ್ಮ, ಶಾಲಾ ಮುಖ್ಯ ಶಿಕ್ಷಕಿ ಸತ್ಯವತಿ, ಸಹ ಶಿಕ್ಷಕಿ ಸುನಿತ, ಕವಿತ, ಸೌಮ್ಯ, ಪರಿಣಿತ ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.