ಸುದ್ದಿಮೂಲವಾರ್ತೆ
ಮೈಸೂರು, ಅ.6:ಸಾಂಪ್ರದಾಯಿಕ ದಸರಾ ಹೆಸರಿನಲ್ಲಿ ಅದ್ದೂರಿ ದಸರಾ ನಡೆಸುವುದು ಬೇಡ ಎಂದು ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ಒತ್ತಾಯಿಸಿದ್ದಾರೆ.
ಮಳೆ ಇಲ್ಲದೆ ಬೆಳೆ ಇಲ್ಲದೆ ಬರದ ಕಾರ್ಮೋಡ ಮೂಡಿರುವ ಹಿನ್ನೆಲೆಯಲ್ಲಿ ರಾಜ್ಯದ ನೂರಾರು ತಾಲೂಕುಗಳು ಬರಪೀಡಿತ ಪ್ರದೇಶವಾಗಿ ಲಕ್ಷಾಂತರ ರೈತರು ಬೆಳೆ ಇಲ್ಲದೆ ಜೀವನ ನಡೆಸಲು ಕಂಗಾಲಾಗಿದ್ದಾರೆ. ವಿಶ್ವವಿಖ್ಯಾತ ದಸರಾ ಮಹೋತ್ಸವದ ಪೂಜಾ ಕಾರ್ಯಕ್ರಮಗಳು ಎಂದಿನಂತೆ ನಡೆಯಲಿ. ದಸರಾ ಮಹೋತ್ಸವದ ಹೆಸರಿನಲ್ಲಿ ನೂರಕ್ಕೂ ಹೆಚ್ಚು ಕಿ.ಮೀ ವ್ಯಾಪ್ತಿಯಲ್ಲಿ ವಿದ್ಯುತ್ ದೀಪಗಳನ್ನು ಅಲಂಕರಿಸಿ ಜಗಮಗಿಸಿದರೆ ರೈತನ ನೋವು ನಿವಾರಣೆಯಾಗುವುದಿಲ್ಲ ಎಂದು ಹೇಳಿದ್ದಾರೆ.
ಮೈಸೂರು ನಗರ ಹೊರತುಪಡಿಸಿ ಎಲ್ಲಾ ತಾಲೂಕುಗಳು ಮಂಡ್ಯ, ಚಾಮರಾಜನಗರ, ಹಾಸನ ಸೇರಿದಂತೆ ರಾಜ್ಯದ ಎಲ್ಲಾ ಜಿಲ್ಲೆಗಳು ಬರಪೀಡಿತವಾಗಿದೆ. ಮೈಸೂರಿನ ನಗರದಲ್ಲಿ ವಿದ್ಯುತ್ ದೀಪಾಲಂಕಾರ ಮಾಡಿ ಹಾಗೂ ಯುವ ದಸರ ಹೆಸರಿನಲ್ಲಿ ಹೊರರಾಜ್ಯದ ಕಲಾವಿದರನ್ನು ತರಿಸಿ ಕೆಕೆಹಾಕಿ ಅವರಿಗೆ ಲಕ್ಷಾಂತರ ನೀಡಿ ನಮ್ಮ ರೈತರಿಗೆ ಅವಮಾನ ಮಾಡುವುದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಹುಲಿ, ಚಿರತೆಗಳ ದಾಳಿಯಿಂದ ರೈತರ ಮಕ್ಕಳು ಜೀವ ಕಳೆದುಕೊಂಡಿದ್ದಾರೆ. ರೈತರ ನೋವಿಗೆ ಸ್ಪಂದಿಸಬೇಕಾದರೆ ಸರಳ ಹಾಗೂ ಸಾಂಪ್ರದಾಯಿಕ ದಸರಾ ಮಾತ್ರ ನಡೆಸಲಿ. ನಾಡಿನ ಕಲೆ ಹಾಗೂ ಸಂಸ್ಕೃತಿಯನ್ನು ಬಿಂಬಿಸುವ ಉತ್ಸವವಾಗಬೇಕು ದಸರಾ ಮಹೋತ್ಸವದಲ್ಲಿ ರೈತ ದಸರಾ ಸೇರಿದಂತೆ ವಿವಿಧ ಉತ್ಸವಗಳು ಸರಳವಾಗಿ ನಡೆಯಲಿ.
ನವರಾತ್ರಿ ಉತ್ಸವ ಸರಳವಾಗಿ ಆಚರಿಸಿ ಚಾಮುಂಡೇಶ್ವರಿ ದೇವಿಗೆ ಪೂಜಾ ಕೈಂಕರ್ಯಗಳು ನಡೆದು ಸಕಾಲಕ್ಕೆ ಮಳೆ ಬೆಳೆ ಬಂದು ರೈತರು ಸಮೃದ್ಧಿಯಾಗಿ ಬೆಳೆ ಬೆಳೆಯುವಂತಾಗಲಿ. ಸರ್ಕಾರ ಈಗಲಾದರೂ ಎಚ್ಚೆತ್ತು ಸರಳ ಹಾಗೂ ಸಾಂಪ್ರದಾಯಿಕ ದಸರಾ ಮಹೋತ್ಸವ ನಡೆಸಲಿ ಎಂದು ಆಗ್ರಹಿಸಿದ್ದಾರೆ.