ಸುದ್ದಿಮೂಲ ವಾರ್ತೆ
ದೇವನಹಳ್ಳಿ, ಮೇ 18: ವಿಧಾನ ಪರಿಷತ್ ಸದಸ್ಯ ನಾಗರಾಜ್ ಯಾದವ್ ಅವರಿಗೆ ಸಚಿವ ಸಂಪುಟದಲ್ಲಿ ಈ ಬಾರಿ ಸ್ಥಾನ ಮಾನ ಕಲ್ಪಿಸುವಂತೆ ಕರ್ನಾಟಕ ಯಾದವ ಯುವ ಸೇನೆಯ ರಾಜ್ಯಾಧ್ಯಕ್ಷ ಸುಧಾಕರ್ ಯಾದವ್ ಒತ್ತಾಯ ಮಾಡಿದ್ದಾರೆ
ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಸುಮಾರು ವರ್ಷಗಳಿಂದ ಕಾಂಗ್ರೆಸ್ ಪಕ್ಷಕ್ಕೆ ಸಾಮಾನ್ಯ ಕಾರ್ಯಕರ್ತನಾಗಿ ಪ್ರವೇಶ ಮಾಡಿ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಂಡು ರಾಜಕೀಯ, ಶೈಕ್ಷಣಿಕ ಮತ್ತು ಸಾಮಾಜಿಕವಾಗಿ ಯಾದವ ಸಮುದಾಯವನ್ನು ಸಮಾಜದ ಮುಖ್ಯ ವಾಹಿನಿಗೆ ತರುವುದಕ್ಕೆ ಅವರು ಬಹಳಷ್ಟು ಶ್ರಮಿಸಿರುವ ಯಾದವ ಸಮುದಾಯದ ಮುಖಂಡರಾದ ನಾಗರಾಜ್ ಯಾದವ್ ಅವರಿಗೆ ಈ ಬಾರಿ ಸಚಿವ ಸ್ಥಾನ ನೀಡಬೇಕು ಎಂದು ಆಗ್ರಹಿಸಿದರು.
ಅವರಿಗೆ ಸಚಿವ ಸ್ಥಾನ ನೀಡುವುದರಿಂದ ಸಮುದಾಯದ ಸಮಗ್ರ ಏಳಿಗೆ ಮಾಡಲು ಅವರಿಗೆ ಸಹಕಾರಿ ಆಗುತ್ತದೆ. ಜೊತೆಗೆ ಸುಮಾರು 45 ವಿಧಾನ ಸಭಾ ಕ್ಷೇತ್ರಗಳಲ್ಲಿ ನಿರ್ಣಾಯಕರಾಗಿರುವ ಯಾದವ ಸಮುದಾಯಕ್ಕೆ ನ್ಯಾಯ ಒದಗಿಸುವ ಕೆಲಸ ಆಗುವುದರ ಜೊತೆಗೆ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಪಕ್ಷಕ್ಕೆ ಅನುಕೂಲವಾಗಲಿದೆ ಎಂದರು.
ವಿಧಾನ ಪರಿಷತ್ ಸದಸ್ಯರಾಗಿ ರಾಜಕಾರಣದಲ್ಲಿ ಗುರುತಿಸಿಕೊಂಡು ಸಮಾಜಸೇವೆಯಲ್ಲಿ ತೊಡಗಿಸಿಕೊಂಡು ಅಪಾರ ಅನುಭವವನ್ನು ಹೊಂದಿರುವ ನಾಗರಾಜ್ ಯಾದವ್ ಅವರು ಅತಿ ಹಿಂದುಳಿದ ವರ್ಗವಾದ ಯಾದವ ಸಮುದಾಯದ ಮುಖಂಡರಾಗಿದ್ದು ಕಾಡುಗೊಲ್ಲ ಸಮುದಾಯವು ಅಭಿವೃದ್ಧಿ ಹೊಂದಲು ಸಮುದಾಯವನ್ನು ಪ್ರತಿನಿಧಿಸುತ್ತಿರುವ ನಾಗರಾಜ್ ಯಾದವ್ ಅವರು ಸಚಿವರಾದರೆ ಸಮಾಜದ ಬೆಳವಣಿಗೆ ಹೊಂದಲು ಸಾಧ್ಯವಾಗಲಿದೆ ಎಂದು ತಮ್ಮ ಮನದ ಮಾತನ್ನು ವ್ಯಕ್ತಪಡಿಸಿದರು.
ಈ ಪತ್ರಿಕಾಗೋಷ್ಠಿಯಲ್ಲಿ ಕರ್ನಾಟಕ ಯಾದವ ಯುವ ಸೇನೆ ಅಧ್ಯಕ್ಷ ಹರಿಕೃಷ್ಣ ಯಾದವ್, ರಾಜ್ಯ ಮಹಿಳಾ ಘಟಕದ ಅಧ್ಯಕ್ಷ ರಾಜೇಶ್ವರಿ, ಉಪಾಧ್ಯಕ್ಷ ಅನಿಲ್ ಕುಮಾರ್, ಹಿರಿಯ ಮುಖಂಡ ಉಮೇಶ್, ಖಜಾಚಿ ಸುನಿಲ್ ಕುಮಾರ್, ಕರ್ಯರ್ಶಿ ಮೋಹನ್ ಕುಮಾರ್ ಹಾಜರಿದ್ದರು.