ಸುದ್ದಿಮೂಲ ವಾರ್ತೆ
ಬೆಂಗಳೂರು, ಆ.14: ವಿಧಾನಸಭಾ ಚುನಾವಣೆ ಬಳಿಕ ನಮ್ಮ ಕಾರ್ಯಕರ್ತರು ರಿಲಾಕ್ಸ್ ಆಗಬಾರದು. ಲೋಕಸಭಾ ಚುನಾವಣೆಯಲ್ಲಿ ಕನಿಷ್ಠ 20 ಸ್ಥಾನ ಗೆಲ್ಲಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಕೆಪಿಸಿಸಿ ಕಚೇರಿಯ ಇಂದಿರಾಗಾಂಧಿ ಭವನದ ಭಾರತ್ ಜೋಡೋ ಸಭಾಂಗಣದಲ್ಲಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಸರ್ವ ಸದಸ್ಯರ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು.
ಕರ್ನಾಟಕ ವಿಧಾನಸಭಾ ಚುನಾವಣೆಯ ಫಲಿತಾಂಶ ಇಡಿ ದೇಶದ ಜನರ ಮತ್ತು ರಾಷ್ಟ್ರ ಮಟ್ಟದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಭರವಸೆಯನ್ನು ಹೆಚ್ಚಿಸಿ ಸಂಚಲನ ಮೂಡಿಸಿದೆ. ಲೋಕಸಭಾ ಚುನಾವಣೆಯಲ್ಲಿ ಕನಿಷ್ಠ 20 ಸ್ಥಾನ ಗೆಲ್ತೀವಿ ಎಂದು ಹೈಕಮಾಂಡ್ ಗೆ ಭರವಸೆ ನೀಡಿದ್ದೀನಿ. ಇದಕ್ಕೂ ಹೆಚ್ಚು ಸೀಟು ಗೆಲ್ಲುತ್ತೀವಿ ಎಂದು ವಿಶ್ವಾಸ ವ್ಯಕ್ತಪಡಿಸಿದರು.
‘ನಾನು ನನ್ನ ಅನುಭವದಿಂದ ಹೇಳ್ತಾ ಇದೀನಿ. ಯಾವುದೇ ಉತ್ಪ್ರೇಕ್ಷೆ ಇಲ್ಲದೆ ಹೇಳುತ್ತೇನೆ. 2024 ರಲ್ಲಿ ಕೇಂದ್ರದಲ್ಲಿ ಬಿಜೆಪಿ ಸೋಲುತ್ತದೆ. ಈ ಪ್ರಧಾನಿ ಮೋದಿ ಪಾರ್ಲಿಮೆಂಟ್ ಗೆ ಸರಿಯಾಗಿ ಹೋಗಲ್ಲ, ಜನರ ಸಮಸ್ಯೆಗಳ ಬಗ್ಗೆ ಗಮನ ಹರಿಸಲ್ಲ. ಬರೀ ಮನ್ ಕಿ ಬಾತ್. ಆ ಬಾತ್ ನಲ್ಲೂ ದೇಶದ ಜನ ಇರೋದಿಲ್ಲ’ ಎಂದರು.
ನಾಡಿನ ಜನತೆ ಬಿಜೆಪಿಯ ಅಭಿವೃದ್ಧಿಹೀನ, ಬೆಲೆ ಏರಿಕೆ, ನಿರುದ್ಯೋಗ, ದುರಾಡಳಿತ ಮತ್ತು ಜನರನ್ನು ದ್ವೇಷದ ಆಧಾರದಲ್ಲಿ ವಿಭಜಿಸಿ ದರ್ಬಾರ್ ನಡೆಸುವ ಅನಾಹುತಕಾರಿ ಸಿದ್ಧಾಂತ ಮತ್ತು ರಾಜಕಾರಣವನ್ನು ತಿರಸ್ಕರಿಸಿದ್ದಾರೆ. ಒಂದು ಕಡೆ ಆರ್ಎಸ್ಎಸ್ ಹಿಡನ್ ಅಜೆಂಡಾ ಜಾರಿಗೊಳಿಸುತ್ತಾ ಮತ್ತೊಂದು ಕಡೆ ಬೆಲೆ ಏರಿಕೆ, ಹಣದುಬ್ಬರ, ಭ್ರಷ್ಟಾಚಾರ, ದುರಾಡಳಿತದಿಂದ ನಾಡಿನ, ದೇಶದ ಜನತೆಯನ್ನು ವಿಪರೀತ ಸಂಕಷ್ಟಕ್ಕೆ ಸಿಲುಕಿಸಿದ್ದರು. ನಾಡಿನ ಜನ ಈ ಎಲ್ಲಾ ದುಷ್ಟಾಚಾರವನ್ನು ಸಮರ್ಥವಾಗಿ ಧಿಕ್ಕರಿಸಿ ಸೋಲಿಸಿದ್ದಾರೆ ಎಂದರು.
ಬಿಜೆಪಿ ಬೇಳೆಕಾಳು ಹೊರಗೆ ಬರುತ್ತದೆ
ದೇಶದ ಜನ ನೆಮ್ಮದಿಯಾಗಿ, ಸಂತೋಷದಿಂದ ಇದ್ದರೆ ಬಿಜೆಪಿಗೆ ನೆಮ್ಮದಿ ಹಾಳಾಗುತ್ತದೆ. ಹೊಟ್ಟೆಕಿಚ್ಚು ಹೆಚ್ಚಾಗುತ್ತದೆ. ಈಗ ನಾವು ಬಿಜೆಪಿ ಕಾಲದ ಎಲ್ಲಾ ಹಗರಣಗಳು, ಭ್ರಷ್ಟಾಚಾರದ ತನಿಖೆ ಆರಂಭಿಸಿದ್ದೇವೆ. ಸದ್ಯದಲ್ಲೇ ಬಿಜೆಪಿ ಬೇಳೆಕಾಳು ಹೊರಗೆ ಬರುತ್ತದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.
ಹೆಚ್.ಡಿ.ಕುಮಾರಸ್ವಾಮಿ ಅವರು ತಮ್ಮ ಪಕ್ಷವನ್ನು ಮರೆತುಬಿಟ್ಟಿದ್ದಾರೆ. ಬಿಜೆಪಿ ವಕ್ತಾರರ ಜವಾಬ್ದಾರಿ ನಿರ್ವಹಿಸುತ್ತಿದ್ದಾರೆ. ಅವರೊಂಥರಾ ಹಿಟ್ ಆಂಡ್ ರನ್ ಗಿರಾಕಿ. ಖಾಲಿ ಪೆನ್ ಡ್ರೈವ್ ಜೇಬಿಂದ ತೆಗೆಯೋದು ಒಳಗಿಟ್ಟುಕೊಂಡು ಹೋಗೋದು. ಇದೇ ಆಗೋಯ್ತು ಅಂದರು.
ಒಗ್ಗಟ್ಟಿನಿಂದ ಪಕ್ಷ ಅಧಿಕಾರಕ್ಕೆ: ಡಿ.ಕೆ. ಶಿವಕುಮಾರ್
ಚುನಾವಣೆಯಾದ ಎರಡೂವರೆ ತಿಂಗಳ ನಂತರ ಪಕ್ಷದ ಸಭೆ ಕರೆದಿದ್ದೇವೆ. 2023ರ ವಿಧಾನಸಭೆ ಚುನಾವಣೆಯ ಫಲಿತಾಂಶಕ್ಕೆ ಕೊಡುಗೆ ನೀಡಿದ ನೀವೆಲ್ಲಾ ನಾಯಕರಿಗೆ ಅಭಿನಂದನೆ ಸಲ್ಲಿಸಲು ಬಯಸುತ್ತೇನೆ. ನಿಮ್ಮೆಲ್ಲರ ಒಗ್ಗಟ್ಟಿನ ಪ್ರದರ್ಶನದಿಂದ ರಾಜ್ಯದಲ್ಲಿ 1989ರ ನಂತರ ಪಕ್ಷ ಬಹುದೊಡ್ಡ ಗೆಲವು ಸಾಧಿಸಲಾಗಿದೆ. ಆಮೂಲಕ ದಕ್ಷಿಣ ಭಾರತದಲ್ಲಿ ಬಿಜೆಪಿ ಬಾಗಿಲು ಮುಚ್ಚಲಾಗಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳೀದರು.
ನಾವು ಜನರ ವಿಶ್ವಾಸ ಉಳಿಸಿಕೊಳ್ಳಲು ನಾನು ಹಾಗೂ ಸಿದ್ದರಾಮಯ್ಯನವರು ನಮ್ಮ ಹೈಕಮಾಂಡ್ ನಾಯಕರ ಮಾರ್ಗದರ್ಶನದ ಮೇರೆಗೆ ನಮ್ಮ ಕೆಲಸ ಮುಂದುವರಿಸಿದ್ದೇವೆ.
ವೈಯಕ್ತಿಕ ವಿಚಾರ ಬದಿಗೊತ್ತಿ ದೇಶದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ತರುವುದು ನಮ್ಮ ಗುರಿ. ದೇಶದ ಎಲ್ಲಾ ವಿರೋಧ ಪಕ್ಷಗಳು ಇಂದು ಕಾಂಗ್ರೆಸ್ ಜೊತೆ ಕ ಜೋಡಿಸಲು ತೀರ್ಮಾನಿಸಿ ಕರ್ನಾಟಕದಲ್ಲೇ ಇಂಡಿಯಾ ಮೈತ್ರಿ ಕೂಟ ರಚನೆ ಮಾಡಿದ್ದಾರೆ. ನಮಗೆ ಸಿಕ್ಕಿರುವ ಶಕ್ತಿಯನ್ನು ನಾವು ಉಳಿಸಿಕೊಂಡು ಹೋಗಬೇಕಿದೆ. ನಾವು ಚುನಾವಣೆ ಸಮಯದಲ್ಲಿ ಗ್ಯಾರಂಟಿ ಯೋಜನೆಗಳ ಘೋಷಣೆ ಮಾಡಿದೆವು. ಈ ಯೋಜನೆಗಳು ನಿಮಗೆ ಅತ್ಯಂತ ದೊಡ್ಡ ಶಕ್ತಿ ನೀಡಿದೆ. ಈ ಗ್ಯಾರಂಟಿ ಯೋಜನೆಗಳಿಗೆ 50 ಸಾವಿರ ಕೋಟಿ ಮೀಸಲಿಡಲಾಗಿದೆ. ದೇಶದಲ್ಲಿ ಯಾವುದೇ ಪಕ್ಷಗಳು ಯಾವುದೇ ರಾಜ್ಯದಲ್ಲಿ ಇಂತಹ ಯೋಜನೆ ಜಾರಿ ಮಾಡಲು ಸಾಧ್ಯವಾಗಿಲ್ಲ. ಗ್ಯಾರಂಟಿಗಳ ಶಕ್ತಿಯನ್ನು ಬಳಸಿಕೊಳ್ಳಬೇಕು ಎಂದು ಸಲಹೆ ನೀಡಿದರು.