ಬೆಂಗಳೂರು, ಆ, 6; ರಾಜ್ಯದ ಸಾಮಾಜಿಕ ಸಮಾನತೆಯ ಹರಿಕಾರ, ಶೋಷಿತರ ಅಸ್ಮಿತೆಯಾಗಿರುವ ಏಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವ ಮಾಜಿ ಗೃಹ ಸಚಿವ, ಬಿಜೆಪಿ ಮುಖಂಡ ಆರಗ ಜ್ಞಾನೇಂದ್ರ ಅವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಕೆಪಿಸಿಸಿ ಮಾಜಿ ಕಾರ್ಯದರ್ಶಿ ಡಾ. ಆನಂದ್ ಕುಮಾರ್, ಕಟ್ಟುನಿಟ್ಟಿನ ಕಾನೂನು ಕ್ರಮಕ್ಕೆ ಆಗ್ರಹಿಸಿದ್ದಾರೆ.
ಸುದ್ದಿಗಾರರ ಜೊತೆ ಮಾತನಾಡಿದ ಅವರು, ಮಲ್ಲಿಕಾರ್ಜುನ ಖರ್ಗೆ ಅವರ ವಿರುದ್ಧ ಅತ್ಯಂತ ಕೀಳುಮಟ್ಟದ ಟೀಕೆ ಮಾಡಿರುವ ಆರಗ ಜ್ಞಾನೇಂದ್ರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಬೆಂಗಳೂರು ನಗರ ಪೊಲೀಸ್ ಆಯುಕ್ತರಿಗೆ ದೂರು ಸಲ್ಲಿಸಲಾಗಿದೆ. ಖರ್ಗೆ ಅವರಂತಹ ಪ್ರಬುದ್ಧ ಮುತ್ಸದ್ದಿ ಬಗ್ಗೆ ಮಾಡಿರುವ ಟೀಕೆಯಿಂದ ಅಸಂಖ್ಯಾತ ಅಭಿಮಾನಿಗಳಿಗೆ ನೋವಾಗಿದೆ. ಮಲ್ಲಿಕಾರ್ಜುನ ಖರ್ಗೆ ಏಐಸಿಸಿ ಅಧ್ಯಕ್ಷರಾಗಿ ರಾಷ್ಟ್ರಮಟ್ಟದಲ್ಲಿ ಮತ್ತಷ್ಟು ಪ್ರಭಾವಿಯಾಗಿ ಬೆಳೆಯುತ್ತಿರುವುದನ್ನು ಸಹಿಸದೇ ಈ ರೀತಿ ಟೀಕೆ ಮಾಡುತ್ತಿರುವುದು ಖಂಡನೀಯ. ಇದು ಇದು ಜನಾಂಗೀಯ ನಿಂದನೆಯಾಗಿದೆ ಎಂದರು.
ಮಲ್ಲಿಕಾರ್ಜುನ ಖರ್ಗೆ ಅವರು ಐದು ದಶಕಗಳಿಗೂ ಹೆಚ್ಚು ಕಾಲದಿಂದ ರಾಜ್ಯ ಹಾಗೂ ರಾಷ್ಟ್ರಮಟ್ಟದ ಮೇರು ನಾಯಕರಾಗಿ ಬೆಳೆದುಬಂದಿದ್ದಾರೆ. ವಿಶೇಷವಾಗಿ ಶಿವಮೊಗ್ಗ ಜಿಲ್ಲೆಯ ಸಮಾಜವಾದಿ ಮುಖಂಡರು, ಪ್ರಮುಖ ನಾಯಕರ ಜೊತೆ ನಿಕಟ ಸಂಬಂಧ ಹೊಂದಿದ್ದಾರೆ. ಭೂ ರಹಿತರಪವಾದ ಕಾಗೋಡು ಚಳವಳಿ, ಸಮಾಜವಾದಿ ಹೋರಾಟಗಳಿಗೆ ಸಾಕ್ಷಿಯಾಗಿದ್ದಾರೆ. ಮಾಜಿ ಮುಖ್ಯಮಂತ್ರಿಗಳಾದ ದಿವಂಗತ ಜೆ.ಎಚ್. ಪಟೇಲ್, ನಮ್ಮ ನಡುವೆ ಇರುವ ಬಿ.ಎಸ್. ಯಡಿಯೂರಪ್ಪ ಸೇರಿದಂತೆ ಹಲವು ಮುಖಂಡರೊಂದಿಗೆ ವ್ಯಕ್ತಿಗತ ಬಾಂಧವ್ಯ ಹೊಂದಿರುವ ಅವರ ಬಗ್ಗೆ ಎಲ್ಲರಿಗೂ ಅಭಿಮಾನ ಮತ್ತು ಪ್ರೀತಿ ಇದೆ. ಸದನ ಒಳಗೆ ಮತ್ತು ಹೊರಗಡೆ ನಡೆದ ಪ್ರಬಲ ಹೋರಾಟಗಳ ಸಂದರ್ಭಗಳಲ್ಲೂ ಯಾರೊಬ್ಬರೂ ಖರ್ಗೆ ಅವರ ಬಗ್ಗೆ ಕೀಳುಮಟ್ಟದ ಟೀಕೆ ಮಾಡಿದ ಇತಿಹಾಸವಿಲ್ಲ. ಗೃಹ ಸಚಿವರಾಗಿದ್ದ ಅರಗ ಜ್ಞಾನೇಂದ್ರ ಅವರು ಅಪಮಾನಕರವಾಗಿ ಮಾತನಾಡಿ ಶಿವಮೊಗ್ಗ ಜಿಲ್ಲೆಗೆ ಮತ್ತು ಜಿಲ್ಲೆಯ ಭವ್ಯ ಪರಂಪರೆಗೆ ಕೆಟ್ಟ ಹೆಸರು ತಂದಿದ್ದಾರೆ ಎಂದರು.
ಇದು ಖರ್ಗೆ ಅವರೊಬ್ಬರ ಮೇಲಿನ ಟೀಕಾ ಪ್ರಹಾರವಲ್ಲ. ಇಡೀ ದಲಿತ ಸಮುದಾಯಕ್ಕೆ ಮಾಡಿದ ಅಪಮಾನ. ಇವರ ಹೇಳಿಕೆ ಬಿಜೆಪಿ ಮನಸ್ಥಿತಿ, ದಲಿತ ವಿರೋಧಿ ಧೋರಣೆಯನ್ನು ತೋರಿಸುತ್ತದೆ. ದಲಿತ ವಿರೋಧಿ ನೀತಿ ಅನುಸರಿಸುವ ಬಿಜೆಪಿಗೆ ಈ ಬಾರಿಯ ಚುನಾವಣೆಯಲ್ಲಿ ಶೋಷಿತ ಸಮುದಾಯ ತಕ್ಕ ಪಾಠ ಕಲಿಸಿದೆ. ಆರಗ ಜ್ಞಾನೇಂದ್ರ ಅವರ ಹೇಳಿಕೆಗೆ ಬಿಜೆಪಿ ಕ್ಷಮೆ ಕೇಳಿದರಷ್ಟೇ ಸಾಲದು, ಪಕ್ಷದಿಂದಲೇ ಉಚ್ಛಾಟನೆ ಮಾಡಬೇಕು. ಇಂತಹ ಧೋರಣೆಯನ್ನು ಸಹಿಸಲು ಸಾಧ್ಯವಿಲ್ಲ. ಅವರ ಮೇಲೆ ಕೂಡಲೇ ಸೂಕ್ತ ಕಾನೂನು ಕ್ರಮ ಕೈಗೊಳ್ಳದಿದ್ದರೆ ತೀವ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಡಾ. ಆನಂದ್ ಕುಮಾರ್ ಎಚ್ಚರಿಕೆ ನೀಡಿದ್ದಾರೆ.