ಸುದ್ದಿಮೂಲ ವಾರ್ತೆ
ಹೊಸಕೋಟೆ,ಅ.4: ಮತ್ತೊಬ್ಬರ ಜೀವಕ್ಕೆ ಅಮೃತವಾಗುವ ಸಂಕಲ್ಪವನ್ನು ಸಾರ್ವಜನಿಕರು ಸ್ವಯಂಪ್ರೇರಿತರಾಗಿ ತಮ್ಮ ಮರಣದ ನಂತರ ಅಂಗಾಂಗ ದಾನವನ್ನು ಮಾಡಲು ಪ್ರತಿಯೊಬ್ಬರೂ ಎಂದು ಮುಂದಾಗಬೇಕು ಎಂದು ಆರೋಗ್ಯಾಧಿಕಾರಿ ಡಾ. ಭಾಸ್ಕರ್ ರೆಡ್ಡಿ ತಿಳಿಸಿದರು.
ಹೊಸಕೋಟೆ ತಾಲೂಕು ಆರೋಗ್ಯ ಇಲಾಖೆ ಸಹಭಾಗಿತ್ವದಲ್ಲಿ ನಂದಗುಡಿ ಗ್ರಾಮ ಪಂಚಾಯಿತಿಯಲ್ಲಿ ಬುಧವಾರ ನಡೆದ ಆಯುಷ್ಮಾನ್ಭವ 3.0 ಅಭಿಯಾನದಲ್ಲಿ ಮಾತನಾಡಿದರು.
ಟಿಶ್ಯೂ ದಾನದ ಮೂಲಕ ಸುಮಾರು 50 ಜನರಿಗೆ ನೆರವಾಗಬಹುದು. ಒಬ್ಬ ವ್ಯಕ್ತಿ 8 ಜನರಿಗೆ ಮರುಜೀವ ನೀಡಬಹುದು. ಹೃದಯ, ಮೂತ್ರಪಿಂಡ, ಯಕೃತ್ತು ಸೇರಿದಂತೆ ಹಲವು ಅಂಗಾಂಗಗಳನ್ನು ದಾನ ಮಾಡಬಹುದು. ವೈದ್ಯಕೀಯ ಲೋಕದಲ್ಲಿ ಆಧುನಿಕ ಆವಿಷ್ಕಾರ, ತಂತ್ರಜ್ಞಾನಗಳ ಸದ್ಬಳಕೆಯಿಂದ ಅಂಗಾಂಗ ದಾನ ಮತ್ತು ಕಸಿ ಅದ್ಭುತ ಅಚ್ಚರಿಯಂತೆ ನಡೆಯುತ್ತಿದೆ. ಅಂಗಾಂಗ ದಾನ ಇನ್ನೊಬ್ಬರ ಜೀವ ಉಳಿಸುವ, ಸಾವಿನ ಅನಂತರವೂ ಮತ್ತೊಬ್ಬರಿಗೆ ಬದುಕು ನೀಡುವ ಈ ದಾನ, ಎಲ್ಲಕ್ಕಿಂತ ಶ್ರೇಷ್ಠ ದಾನವಾಗಿದೆ. ಅಂಗಾಂಗ ದಾನಕ್ಕೆ ಹೆಸರು ನೋಂದಾಯಿಸಿಕೊಂಡು ಸಾರ್ಥಕತೆ ಮೆರೆಯುವ ಜನಾಂದೋಲನ ವ್ಯಾಪಕವಾಗಬೇಕು ಎಂದರು.
ಕೇಂದ್ರ ಸರಕಾರ ಆಯುಷ್ಮಾನ್ ಭಾರತ ಯೋಜನೆ ಅನುಷ್ಠಾನಗೊಳಿಸಿದೆ. ವಾರ್ಷಿಕ 5 ಲಕ್ಷ ರೂ.ವರೆಗೆ ರೋಗಗಳ ಚಿಕಿತ್ಸಾ ವೆಚ್ಚವನ್ನು ಸರಕಾರವೇ ಭರಿಸಲಿದ್ದು, ಸಾಮಾನ್ಯ ಜನರಿಗೆ ಗಂಭೀರ ಕಾಯಿಲೆಗಳು ಬಂದಾಗ ಅವರ ಜೀವಮಾನದ ಉಳಿತಾಯವನ್ನೆಲ್ಲ ಚಿಕಿತ್ಸೆಗೆ ಭರಿಸಬೇಕಾಗುವುದನ್ನು ತಡೆಯಲು ಈ ಯೋಜನೆಯನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.
ಕಾರ್ಯಕ್ರಮದಲ್ಲಿ ಗ್ರಾಪಂನ ಅಧ್ಯಕ್ಷೆ ಮುನಿವೆಂಕಟಮ್ಮ ಬಚ್ಚಪ್ಪ, ಉಪಾಧ್ಯಕ್ಷೆ ಮಜರ್ ಉನ್ನಿಸಾ, ಕಾರ್ಯದರ್ಶಿ ವೆಂಕಟೇಶ್, ಸದಸ್ಯರಾದ ವೀರರಾಜ್, ಎನ್.ಎನ್.ಮಂಜುನಾಥ್, ಮಂಜುಳ ನಾಗೇಶ್, ಶಿವರಾಜ್ಕುಮಾರ್, ಸುನಿತಾರಾಮೇಗೌಡ, ನಾಗಮ್ಮ, ನಟರಾಜ್, ಜಯರಾಮಯ್ಯ, ಅಶ್ವಥ್, ಸುಮಾಗೋಪಾಲ್, ತಾಪಂನ ಮಾಜಿ ಸದಸ್ಯೆ ಸುಮಿತ್ರಮ್ಮ ಮಂಜುನಾಥ್, ನಂದಗುಡಿ ಆರೋಗ್ಯ ಕೇಂದ್ರದ ಸಿಬ್ಬಂದಿ, ಆಶಾ ಕಾರ್ಯಕರ್ತೆಯರು ಹಾಗೂ ಗ್ರಾಮಸ್ಥರು ಭಾಗವಹಿಸಿದ್ದರು.