ಸುದ್ದಿಮೂಲ ವಾರ್ತೆ
ಬೆಂಗಳೂರು,ಅ.2: ರಾಜ್ಯ ಸರಕಾರ ತುಷ್ಟೀಕರಣ ನೀತಿ ಅನುಸರಿಸುತ್ತಿದೆ. ಅಶಾಂತಿ ಇರಬೇಕೆಂಬ ಸರಕಾರದ ಮನಸ್ಥಿತಿ ಶಿವಮೊಗ್ಗ ಮಾತ್ರವಲ್ಲದೆ ಇಡೀ ರಾಜ್ಯದಲ್ಲಿ ಕಾಣುತ್ತಿದೆ ಎಂದು ಸಚಿವ ಡಾ. ಸಿ.ಎನ್.ಅಶ್ವತ್ಥ್ನಾರಾಯಣ್ ಅವರು ತಿಳಿಸಿದರು.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ನಮ್ಮ ಸಂಸ್ಕøತಿ, ನಮ್ಮ ಧರ್ಮವನ್ನು ನಿರ್ನಾಮ ಮಾಡುವಂಥ ವ್ಯಕ್ತಿಗಳನ್ನು ಮೆರೆಸುತ್ತಿದ್ದಾರೆ. ಎಸ್ಪಿಯವರ ಮೇಲೆಯೇ ಕಲ್ಲುತೂರಾಟ, ಹಲ್ಲೆ ನಡೆದಿದೆ ಎಂದು ಟೀಕಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ, ಅವರ ಸರಕಾರವು ಬಾಯಿಗೆ ಬೀಗ ಹಾಕಿಕೊಂಡಿದೆ. ಅಧಿಕಾರಿಗಳು ಕಾನೂನು- ಸುವ್ಯವಸ್ಥೆ ಕಾಪಾಡಲು ಆಗುತ್ತಿಲ್ಲ. ಕೋಮುಗಲಭೆ ಮಾಡಿದವರ ಆಸ್ತಿ ಜಪ್ತಿ ಮಾಡಬೇಕು. ಗೂಂಡಾ ಕಾಯ್ದೆ ವಿಧಿಸಬೇಕು ಎಂದು ಅವರು ಆಗ್ರಹಿಸಿದರು.
ನರಹಂತಕ ಟಿಪ್ಪು ಸುಲ್ತಾನ್, ಔರಂಗಜೇಬ್ರನ್ನು ಗ್ರೇಟ್ ಎನ್ನುವವರ ಮೇಲೆ ಕ್ರಮ ಕೈಗೊಳ್ಳಿ. ಹಲ್ಲೆಗೊಳಗಾದವರಿಗೆ ರಕ್ಷಣೆ ಮತ್ತು ಚಿಕಿತ್ಸೆ ಕೊಡಿಸಿ ಎಂದು ಒತ್ತಾಯಿಸಿದರು. ಸೌಹಾರ್ದತೆ ಮರೆತು ವರ್ತನೆ ಖಂಡನೀಯ. ತಕ್ಷಣ ಇದರ ಬಗ್ಗೆ ಕ್ರಮ ವಹಿಸಿ ಎಂದರು.
ಗೃಹ ಸಚಿವರು ಹಗುರವಾಗಿ ಹೇಳಿಕೆ ಕೊಡುತ್ತಿದ್ದಾರೆ. ಬಾರಿ ಬಾರಿಗೆ ಎಡವುತ್ತಿದ್ದಾರೆ. ಪೊಲೀಸ್ ಇಲಾಖೆ ವರ್ಗಾವಣೆಯಲ್ಲೂ ಗೊಂದಲ ಆಗಿದೆ. ಒಂದರ ಮೇಲೊಂದು ಎಡವಟ್ಟು ಸಂಭವಿಸಿದೆ. ಭ್ರಷ್ಟಾಚಾರದ ಆಪಾದನೆಗಳು ಬಂದಿವೆ ಎಂದು ಪ್ರಶ್ನೆಗೆ ಉತ್ತರ ಕೊಟ್ಟರು.
ಗೃಹ ಸಚಿವರು ಜವಾಬ್ದಾರಿಯಿಂದ ಮಾತನಾಡಬೇಕು. ವಿಷಯ ಗೊತ್ತಿದ್ದರೂ ಕ್ರಮ ಕೈಗೊಂಡಿಲ್ಲ. ಟಿಪ್ಪು ಸುಲ್ತಾನ್, ಔರಂಗಜೇಬ್ರನ್ನು ವಿಜೃಂಭಿಸುವಂತೆ ಚಿತ್ರಿಸಿದ್ದರೂ ಕ್ರಮ ಕೈಗೊಳ್ಳಲಿಲ್ಲ ಎಂದು ಟೀಕಿಸಿದರು. ಮುಂಜಾಗ್ರತೆ ವಹಿಸದೆ ಇದ್ದುದು ಆಕ್ಷೇಪಾರ್ಹ ಎಂದರು. ಅಧಿಕಾರಿಗಳು ಪೋಸ್ಟಿಂಗ್ ಬಗ್ಗೆ ತಲೆ ಕೆಡಿಸಿಕೊಳ್ಳದಿರಿ. ಅಧಿಕಾರಿಗಳು ಆತ್ಮಸಾಕ್ಷಿಯಿಂದ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.