ಸುದ್ದಿಮೂಲ ವಾರ್ತೆ
ಕೊರಟಗೆರೆ, ಏ.20: ಕಲ್ಲಿಗೆ ಸಂಸ್ಕಾರ ನೀಡಿದರೆ ಅದು ವಿಗ್ರಹವಾಗುತ್ತದೆ, ದೇವರಾಗಿ ಎಲ್ಲರಿಂದ ಪೂಜಿಸಲ್ಪಡುತ್ತದೆ. ಮಕ್ಕಳು ನೀವೆಲ್ಲರೂ ಮಠಕ್ಕೆ ಇಂದು ಕಲ್ಲುಗಳಾಗಿ ಬಂದಿದ್ದೀರ. ಶಿಬಿರ ಮುಗಿಯುವ ಹೊತ್ತಿಗೆ ಎಲ್ಲರೂ ಪೂಜಿಸ್ಪಡುವ ವಿಗ್ರಹದ ರೀತಿ ಸಂಸ್ಕಾರ ಪಡೆಯಬೇಕು ಎಂದು ಎಲೆರಾಂಪುರ ಕುಂಚಿಟಿಗ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಡಾ. ಹನುಮಂತನಾಥಸ್ವಾಮೀಜಿ ತಿಳಿಸಿದರು.
ತಾಲೂಕಿನ ಎಲೆರಾಂಪುರ ಕುಂಚಿಟಿಗ ಮಹಾಸಂಸ್ಥಾನ ಮಠದಲ್ಲಿ ಗುರುವಾರ ಎರಡನೇ ವರ್ಷದ ಸಂಸ್ಕಾರ ಶಿಬಿರದ ಸಾನಿಧ್ಯವಹಿಸಿ ಅವರು ಮಾತನಾಡಿದರು.
ಮಕ್ಕಳು ಶಿಕ್ಷಣವಂತರಾಗಿ, ಸಂಸ್ಕಾರವಂತರಾಗಿ ಬದುಕನ್ನು ಕಟ್ಟಿಕೊಳ್ಳಬೇಕು. ಯಾವುದೇ ದೇಶದ್ರೋಹಿತನ ಕೆಲಸಗಳಿಗೆ ಕೈ ಹಾಕದೇ ಉತ್ತಮ ಸಮಾಜದ ರೂವಾರಿಗಳಾಗಿ ಬದುಕಬೇಕು. ಎಲ್ಲರನ್ನೂ ಗೌರವದಿಂದ ಕಾಣಿ. ಎಲ್ಲಡೆ ನಿಮಗೆ ಮನ್ನಣೆ ಸಿಗುತ್ತದೆ ಎಂದು ಮಕ್ಕಳಿಗೆ ತಿಳಿಸಿದರು.
ಹಿರಿಯರು ಮಕ್ಕಳಿಗೆ ಧರ್ಮ-ಕರ್ಮ ಮತ್ತು ಪಾಪ-ಪುಣ್ಯಗಳ ಬಗ್ಗೆ ತಿಳಿ ಹೇಳಬೇಕು. ಉತ್ತಮ ಸಮಾಜ ನಿರ್ಮಾಣ ಮಾಡಲು ಮಕ್ಕಳನ್ನು ದೇಶದ ಆಸ್ತಿಯನ್ನಾಗಿ ಮಾಡಬೇಕು. ಆಗ ಇಡೀ ಮನುಕುಲಕ್ಕೆ ಮಕ್ಕಳು ಆಸ್ತಿಯಾಗುತ್ತಾರೆ ಎಂದು ಎಂದು ಪೋಷಕರಿಗೆ ತಿಳಿಹೇಳಿದರು.
ಶಿಬಿರಾರ್ಥಿಗಳಿಗೆ ಸಮವಸ್ತ್ರ ವಿತರಿಸಿ ಮಾತನಾಡಿದ ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷೆ ಬಾ.ಹಾ ರಮಾ ಕುಮಾರಿ, ಮನೆಯಲ್ಲಿ ಪೋಷಕರು ಹೇಳಿಕೊಳ್ಳಲಾಗದ ಸಂಸ್ಕಾರವನ್ನು ಇಲ್ಲಿ ಮಕ್ಕಳಿಗೆ ಕಲಿಸಲಾಗುತ್ತದೆ. ಭಾರತ
ದೇಶದಲ್ಲಿ ಜ್ಞಾನ ಶಾಖೆಗಳು ಹೆಚ್ಚಿವೆ. ಇವುಗಳನ್ನು ನಾವು ಬಳಸಿಕೊಳ್ಳಬೇಕು ಮತ್ತು ಮುಂದಿನ ಪೀಳಿಗೆಗೆ ಈ ಜ್ಞಾನ ಶಾಖೆಗಳಾದ ಮಠಗಳನ್ನು ಉಳಿಸಿ ಬೆಳೆಸಬೇಕು ಎಂದು ಹೇಳಿದರು.
ಸಂಸ್ಕಾರ ದೀವಿಕೆ ಎನ್ನುವ ಪುಸ್ತಕವನ್ನು ಸಾಹಿತಿ ವಿದ್ಯಾವಾಚಸ್ಪತಿ ಕವಿತಾ ಕೃಷ್ಣ ಬಿಡುಗಡೆ ಮಾಡಿ ಮಾತನಾಡಿ, ದೇವಾಲಯಗಳು ಮತ್ತು ಮಠಗಳು ಸಂಸ್ಕಾರದ ಕೇಂದ್ರಗಳಾಗಿದ್ದು, ಇಡೀ ರಾಜ್ಯದಲ್ಲಿ ಚುಂಚನಗಿರಿ ಮಠ ಮತ್ತು ಕುಂಚಿಟಿಗ ಮಹಾಸಂಸ್ಥಾನ ಮಠ ಮಾತ್ರ ಮಕ್ಕಳಿಗೆ ಸಂಸ್ಕಾರ ಶಿಬಿರ ಮಾಡುತ್ತಿದ್ದು ಇದು ಅತ್ಯುತ್ತಮವಾದಂತಹ ಕೆಲಸ ಎಂದು ಪ್ರಶಂಸಿದರು.
ದೇಹದಂತೆ ಆತ್ಮಕ್ಕೂ ಹಸಿವಿರುತ್ತದೆ. ಮಾನವ ಆತ್ಮ ಸಂತೃಪ್ತಿಯನ್ನು ಮಾಡಬೇಕು. ಸಂಸ್ಕಾರದಿಂದ ಆತ್ಮದ ಸಂತೃಪ್ತಿಗೊಳ್ಳಲಿದ್ದು, ಸಂಸ್ಕಾರದಿಂದಲೇ ದೇವಾಲಯದಲ್ಲಿ ಅನ್ನ ಪ್ರಸಾದವಾಗುತ್ತದೆ, ನೀರು ತೀರ್ಥವಾಗುತ್ತದೆ, ಗಂಧದ ಕಟ್ಟಿ ವೀಭೂತಿಯಾಗುತ್ತದೆ. ಇದೇ ರೀತಿ ಮಕ್ಕಳು ಸಂಸ್ಕಾರದಿಂದ ಬಲದಾಗಬೇಕು ಎಂದು ತಿಳಿಹೇಳಿದರು.
ಸಾಹಿತಿ ಮ.ಲ.ನ ಮೂರ್ತಿ, ಆದಿಚುಂಚನಗಿರಿ ಸಂಸ್ಕೃತ ವೇದಾಗಮ ಮಹಾವಿದ್ಯಾಲಯದ ನಿವೃತ್ತ ಪ್ರಾಚಾರ್ಯ ಡಾ.ಸಿ ನಂಜುಂಡಯ್ಯ, ಶಿಕ್ಷಣ ತಜ್ಞ ಡಾ. ಬೋಗಣ್ಣ, ನಿವೃತ್ತ ಉಪನಿರ್ದೇಶಕ ಟಿ.ಸಿ ಶಿವೇಗೌಡ, ಕರ್ನಾಟಕ ಸಂಸ್ಕೃತ ವಿದ್ಯಾಲಯದ ಸಹಾಯಕ ಕುಲಸಚಿವ ವಿದ್ವಾನ್ ಎಂ. ಶಿವಮೂರ್ತಿ ಅವರು ಕಾರ್ಯಕ್ರಮದಲ್ಲಿ ಮಾತನಾಡಿದರು.