ಸುದ್ದಿಮೂಲ ವಾರ್ತೆ
ಕೊರಟಗೆರೆ ಆ.2: ನಮ್ಮ ಸಂಸ್ಕೃತಿಯನ್ನು ರಕ್ಷಣೆ ಮಾಡುವ ಸಂಸ್ಕೃತ ಶಿಕ್ಷಕರನ್ನು ನಾವು ರಕ್ಷಣೆ ಮಾಡಬೇಕು ಎಂದು ಎಲೆರಾಂಪುರ ಕುಂಚಿಟಿಗ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಡಾ.ಹನುಮಂಥನಾಥಸ್ವಾಮೀಜಿ ತಿಳಿಸಿದರು.
ತಾಲೂಕಿನ ಕೋಳಾಲ ಹೋಬಳಿಯ ಎಲೆರಾಂಪುರ ಕುಂಚಿಟಿಗ ಮಹಾಂಸ್ಥಾನ ಮಠದಲ್ಲಿ ಬುಧವಾರ ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾನಿಲಯ, ಸದ್ವಿದ್ಯಾ ಸಂಸ್ಕೃತ ಪಾಠಶಾಲೆ ಮತ್ತು ಕುಂಚಿಟಿಗರ ಮಹಾಂಸ್ಥಾನ ಮಠದ ಸಯೋಗದಲ್ಲಿ ಸೇತುಬಂಧ-01 ಪುನಶ್ಚೇತನ ಶಿಬಿರ 2023-24ರ ದಿವ್ಯ ಸಾನಿಧ್ಯವನ್ನು ವಹಿಸಿ ಮಾತನಾಡಿದರು.
ಸಂಸ್ಕೃತ ಪಾಠಶಾಲಾ ಶಿಕ್ಷಕರಿಗೆ 10 ದಿನಗಳ ಕಾಲ ತರಬೇತಿಯನ್ನು ಮಠದಲ್ಲಿ ಪಡೆಯುತ್ತಿರುವಂತಹ ಸಂಸ್ಕೃತ ಶಿಕ್ಷಕರು ತಮ್ಮಲ್ಲಿರುವ ನೂನ್ಯತೆಯನ್ನು ಸರಿಪಡಿಸಿಕೊಂಡು ಹೊಸ ರೀತಿಯಲ್ಲಿ ತಮ್ಮ ವೃತ್ತಿಯನ್ನು ಆರಂಭಿಸಲು ಅಣಿಯಾಗಬೇಕು. ಈ ಶಿಬಿರದ ಸಾರ್ಥಕತೆಯಾಗಬೇಕು ಎಂದು ಕರೆ ನೀಡಿದರು.
ಇಡೀ ವಿಶ್ವವೇ ನಮ್ಮ ದೇಶದ ಕಡೆ ನೋಡುವಂತೆ ಮಾಡಿರುವುದು ನಮ್ಮ ಸಂಸ್ಕೃತಿಗೆ ಇರುವಂತಹ ಶಕ್ತಿ. ಇದನ್ನು ನಮ್ಮಲ್ಲಿ ಮೂಡಿಸಿರುವುದು ಸಂಸ್ಕೃತ. ಆದ್ದರಿಂದ ಸಂಸ್ಕೃತ ಬಾಷೆಯನ್ನು ಕೇವಲ ದೇವರ ಬಾಷೆಯನ್ನಾಗಿ ಬಳಸದೇ ಮನೆ-ಮನೆ, ಮನ-ಮನದ ಬಾಷೆಯನ್ನಾಗಿ ಮಾಡಬೇಕಾಗಿದೆ. ಇದನ್ನು ಕಲಿಸಲು ಸಂಸ್ಕೃತ ಶಿಕ್ಷಕರು ಸನ್ನದ್ಧರಾಗಬೇಕಿದೆ ಎಂದು ಹೇಳಿದರು.
ಶಿಬಿರ ಉದ್ಘಾಟಿಸಿ ಮಾತನಾಡಿದ ವಿಧಾನ ಪರಿಷತ್ ಸದಸ್ಯ ಚಿದಾನಂದ ಎಂ.ಗೌಡ, ವೇದೋಪನಿಷತ್ತು ಗಳು, ರಾಮಾಯಣ, ಮಹಾಭಾರತ ಕತೆಗಳು, ಭಗವದ್ಗೀತೆ, ಪುರಾಣಗಳು, ಧರ್ಮಶಾಸ್ತ್ರಗಳು. ಇಡೀ ಮನು ಕುಲದ ಉನ್ನತಿಯನ್ನು ಸಾಧಿಸಬಲ್ಲ ಸಾಹಿತ್ಯವೆಲ್ಲವೂ ಈ ಸಂಸ್ಕೃತ ಭಾಷೆಯಲ್ಲಿದೆ. ವಿಜ್ಞಾನ, ತಂತ್ರಜ್ಞಾನ, ಕಲೆ ಹಾಗೂ ಸಾಹಿತ್ಯ ಕ್ಷೇತ್ರಗಳ ಅದ್ಭುತ ಕೊಡುಗೆಗಳಲ್ಲಿ ಬಹುಪಾಲು ಈ ಪ್ರಾಚೀನ ಭಾಷೆಯಲ್ಲಿದೆ. ಸಂಸ್ಕೃತ ಇಂಡೋ ಯುರೋಪಿಯನ್ ಭಾಷಾ ಬಳಗಕ್ಕೆ ಸೇರಿದ ಪ್ರಾಚೀನ ಭಾಷೆ, ಭಾರತದಲ್ಲಿ ಸಂಸ್ಕೃತ ಹೊಂದಿರುವ ಸ್ಥಾನಮಾನವನ್ನು ಯುರೋಪ್ ನಲ್ಲಿ ಲ್ಯಾಟಿನ್ ಮತ್ತು ಗ್ರೀಕ್ ಭಾಷೆಗಳು ಹೊಂದಿವೆ. ಭಾರತ ಸಂವಿಧಾನದಲ್ಲಿ ಘೋಷಿಸಿರುವ 22 ಅಧಿಕೃತ ಭಾಷೆಗಳಲ್ಲಿ ಇದೂ ಒಂದು ಹಾಗೂ ಶಾಸ್ತ್ರೀಯ ಸ್ಥಾನ ಮಾನವನ್ನೂ ಹೊಂದಿದೆ. ಆದರೂ, ಸಂಸ್ಕೃತಕ್ಕೆ ಇಂದು ಯೋಗ್ಯ ಮಾನ್ಯತೆ ದೊರೆಯ ದಿರುವುದು ವಿಪರ್ಯಾಸವೇ ಸರಿ ಎಂದು ವಿಷಾಧಿಸಿದರು.
ಈ ಸಂದರ್ಭದಲ್ಲಿ ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾನಿಲಯದ ಕುಲಪತಿಗಳಾದ ಡಾ.ಅಹಲ್ಯಾ, ಮಧುಗಿರಿ ಶೈಕ್ಷಣಿಕ ಜಿಲ್ಲೆಯ ಉಪನಿರ್ದೇಶಕ ಎಂ.ಆರ್ ಮಂಜುನಾಥ್, ಅಖಿಲ ಭಾರತೀಯ ಸಂಘಟನಾ ಸಂಸ್ಕೃತ ಭಾರತೀ ಮಂತ್ರಿ ಸತ್ಯನಾರಾಯಣ್, ಸಂಸ್ಕೃತ ಸಿಂಡಿಕೇಟ್ ಮಾಜಿ ಸದಸ್ಯ ನಂಜುಂಡಯ್ಯ, ಮಠದ ದಾನಿಗಳಾದ ನರಸಿಂಹಮೂರ್ತಿ, ಸಂಸ್ಕೃತ ಶಿಕ್ಷಣ ನಿರ್ದೇಶಕರಾದ ಡಾ.ಪಾಲಯ್ಯ, ಶಿಕ್ಷಕರಗಳಾದ ಕುಮಾರ್, ಹನುಮಂತರಾಯಪ್ಪ, ಚಿಕ್ಕಪ್ಪಯ್ಯ ,ಧರ್ಮೇಂದ್ರ ಎಂ.ಸಿ ಬಸವರಾಜ್ ಸೇರಿದಂತೆ ಇತರರು ಇದ್ದರು.