ಸುದ್ದಿಮೂಲ ವಾರ್ತೆ
ಬೆಂಗಳೂರು, ಏ.8: ಲೋಕಸಭೆ ಚುನಾವಣೆ ಗೆಲುವಿಗೆ ಪೂರಕವಾಗಿ ಕರ್ನಾಟಕದಲ್ಲಿ ಅಸೆಂಬ್ಲಿ ಚುನಾವಣೆಯಲ್ಲಿ ಬಿಜೆಪಿಗೆ ಸ್ಪಷ್ಟ ಜನಾದೇಶ ಇರಲಿ ಎಂದು ಆರೋಗ್ಯ ಕುಟುಂಬ ಕಲ್ಯಾಣ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆ ಸಚಿವರಾದ ಡಾ. ಕೆ ಸುಧಾಕರ್ ತಿಳಿಸಿದರು.
ಮಲ್ಲೇಶ್ವರದ ಬಿಜೆಪಿ ಮಾಧ್ಯಮ ಕೇಂದ್ರದಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಾವು ರಾಮರಾಜ್ಯದ ಪರಿಕಲ್ಪನೆಯನ್ನು ಈಡೇರಿಸುತ್ತೇವೆ ಎಂದರಲ್ಲದೆ, ಜನಪರ ಯೋಜನೆಗಳನ್ನು ಜಾರಿಗೊಳಿಸಲು ರಾಜ್ಯದ ಪ್ರಜ್ಞಾವಂತ ಜನತೆ ಸಹಕರಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕರ್ನಾಟಕಕ್ಕೆ 2,141 ಕೋಟಿ ಮೌಲ್ಯದ ಕೋವಿಡ್ ಉಚಿತ ಲಸಿಕೆಯನ್ನು ಕೇಂದ್ರದ ಬಿಜೆಪಿ ಸರಕಾರ ನೀಡಿದೆ. ದೇಶಾದ್ಯಂತ 220 ಕೋಟಿ ಲಸಿಕೆ ಕೊಡಲಾಗಿದೆ. ರಾಜ್ಯದಲ್ಲಿ 12.21 ಕೋಟಿಗೂ ಹೆಚ್ಚು ಲಸಿಕೆ ನೀಡಿದ್ದೇವೆ. ವಿಶ್ವದಲ್ಲೇ ದಾಖಲೆ ಮಟ್ಟದಲ್ಲಿ ಇದು ನಡೆದಿದೆ. 1.15 ಕೋಟಿ ಬೂಸ್ಟರ್ ಡೋಸ್ ಕೊಡಲಾಗಿದೆ ಎಂದು ವಿವರಿಸಿದರು.
ಲಸಿಕೆ ವಿಚಾರದಲ್ಲಿ ವಿಳಂಬಕ್ಕೆ ಕಾಂಗ್ರೆಸ್ ಟೀಕೆ ವ್ಯಕ್ತವಾಗಿತ್ತು. ತುರ್ತು ಮಾತ್ರವಲ್ಲದೆ ವಿಶೇóಷ ಸಂದರ್ಭ ಎಂದು ಮರೆತು ಇಲ್ಲಿವರೆಗೆ ಕಾಂಗ್ರೆಸ್ ರಾಜಕಾರಣ ಬೆರೆಸಿದೆ. ಎಳ್ಳಷ್ಟೂ ಸಹಕಾರ ಕೊಡದೆ ಇರುವುದು ರಾಜ್ಯ ಮತ್ತು ದೇಶದ ಜನತೆಗೆ ಮಾಡಿದ ಘೋರ ಅಪರಾಧ ಎಂದು ಡಾ. ಕೆ ಸುಧಾಕರ್ ಅವರು ಟೀಕಿಸಿದರು.
ಲಸಿಕೆ ವಿಷಯದಲ್ಲಿ ಅಪಹಾಸ್ಯ ಮಾಡಿ ಮೋದಿ ಲಸಿಕೆ ಎಂದು ಕರೆದರು. ಕಾಂಗ್ರೆಸ್ನವರು ಕೆಲವು ಧರ್ಮಗಳ ನಂಬಿಕೆಗೆ ವಿರುದ್ಧ, ವ್ಯತಿರಿಕ್ತವಾಗಿ ವಿಶ್ವಾಸ ಕೆಡಿಸುವ ಕೆಲಸ ಮಾಡಿ ಸಂತಾನಶಕ್ತಿ ಕಳಕೊಳ್ಳುವ ಭೀತಿ ಹುಟ್ಟಿಸಿದ್ದಾರೆ. ಅದನ್ನು ಖಂಡಿಸುತ್ತೇವೆ. ಆರಂಭದಲ್ಲಿ ಅವರು ಲಸಿಕೆ ಪಡೆಯಲಿಲ್ಲ. ಬಳಿಕ ವಿಳಂಬವಾಗಿ ಕ್ಯೂ ನಿಂತು ಲಸಿಕೆ ಪಡೆದರು ಎಂದು ತಿಳಿಸಿದರು. ಲಸಿಕೆಯನ್ನೇ ಪ್ರಶ್ನೆ ಮಾಡಿ ಸಂಶೋಧಕರಿಗೆ ಅಪಮಾನ ಮಾಡುವಂತೆ ರಾಹುಲ್ ಗಾಂಧಿ ನಡೆದುಕೊಂಡರು ಎಂದು ಆಕ್ಷೇಪಿಸಿದರು.
3 ವರ್ಷಗಳ ಹಿಂದೆ ಶತಮಾನದ ಅತ್ಯಂತ ಭೀಕರ ಸಾಂಕ್ರಾಮಿಕ ಕೋವಿಡ್ ದೇಶವನ್ನು ಮತ್ತು ವಿಶ್ವವನ್ನು ಬಾಧಿಸಿತ್ತು. ನಿರ್ದಿಷ್ಟ ಚಿಕಿತ್ಸೆ- ಔಷಧಿ ಇಲ್ಲ ಎಂಬ ಅಂಶ ಎಲ್ಲರನ್ನೂ ಭಯಭೀತರನ್ನಾಗಿ ಮಾಡಿತ್ತು. ಅನೇಕ ವರ್ಷ, ದಶಕಗಳು ತೆಗೆದುಕೊಂಡ ಅನೇಕ ಸಾಂಕ್ರಾಮಿಕಗಳಿದ್ದವು. ಇಂಥ ಆತಂಕಕಾರಿ ಪರಿಸ್ಥಿತಿ, ಲಾಕ್ ಡೌನ್, ಆರ್ಥಿಕ ದುಸ್ಥಿತಿ ಕಾಡುವಂತಾಗಿತ್ತು. ಬಡಜನರು, ಶ್ರಮಿಕರು ತೊಂದರೆಗೆ ಒಳಗಾಗದಂತೆ ಬಿಜೆಪಿ ಸರಕಾರ ನೋಡಿಕೊಂಡಿದೆ ಎಂದು ವಿವರಿಸಿದರು.
ಪ್ರಧಾನಿ ನರೇಂದ್ರ ಮೋದಿಯವರ ದಿಟ್ಟ ನಾಯಕತ್ವ ನಮ್ಮನ್ನು ಕಾಪಾಡಿದೆ. ಎಲ್ಲ ರಾಜ್ಯಗಳಲ್ಲೂ ಬಿಜೆಪಿ ಸರಕಾರ ಇರಲಿಲ್ಲ. ಅನೇಕ ರಾಜ್ಯಗಳಲ್ಲಿ ಬೇರೆ ಪಕ್ಷಗಳ ಆಡಳಿತ ಇದ್ದರೂ ಮೋದಿಜಿ ದಿಟ್ಟವಾಗಿ ಕೋವಿಡ್ ಎದುರಿಸಿದ್ದಾರೆ ಎಂದು ತಿಳಿಸಿದರು.
ರಾಜ್ಯ ಮುಖ್ಯ ವಕ್ತಾರ ಎಂ.ಜಿ. ಮಹೇಶ್ ಅವರು ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.