ಸುದ್ದಿಮೂಲ ವಾರ್ತೆ
ಬೆಂಗಳೂರು, ಏ.21: ಆಹಾರ ಕಲಬೆರಕೆ ತಡೆಗಟ್ಟಲು ಪರಿಣಾಮಕಾರಿ ಕಾಯಿದೆಗಳನ್ನು ಜಾರಿಗೆ ತರುವುದು ಅತ್ಯಗತ್ಯವಾಗಿದೆ ಎಂದು ಬೆಂಗಳೂರಿನ ಕೃಷಿ ವಿಶ್ವವಿದ್ಯಾನಿಲಯ ಜಿಕೆವಿಕೆ, ಶಿಕ್ಷಣ ನಿರ್ದೇಶಕರಾದ ಡಾ. ಕೆ.ಸಿ.ನಾರಾಯಣಸ್ವಾಮಿ ಹೇಳಿದ್ದಾರೆ.
ಕೌಶಲ್ಯ ಅಭಿವೃದ್ಧಿ ಕೇಂದ್ರ ಮತ್ತು ಆಹಾರ ವಿಜ್ಞಾನ ಮತ್ತು ಪೋಷಣೆ ವಿಭಾಗ, ಕೃಷಿ ವಿಶ್ವವಿದ್ಯಾನಿಲಯ, ಬೆಂಗಳೂರು ವತಿಯಿಂದ ಇಂದು “ಆಹಾರ ಸುರಕ್ಷತೆ, ಸಂಸ್ಕರಣೆ, ಮೌಲ್ಯವರ್ದನೆ ಮತ್ತು ಸಿರಿಧಾನ್ಯಗಳ ಗುಣಮಟ್ಟದ ಮೌಲ್ಯಮಾಪನ ತರಬೇತಿ ಕಾರ್ಯಕ್ರಮ”ವನ್ನು ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
ಪ್ರಸ್ತುತ ಪರಿಸ್ಥಿತಿಯಲ್ಲಿ ಪ್ರಪಂಚದಾದ್ಯಂತ ಆಹಾರ ಸುರಕ್ಷತೆ ಪ್ರಮುಖ ಸವಾಲಾಗಿದ್ದು ಹಣ್ಣು, ತರಕಾರಿ, ಸೊಪ್ಪು, ತಾಯಿ ಹಾಲು ಸೇರಿದಂತೆ ಪ್ರತಿಯೊಂದು ಆಹಾರ ಪದಾರ್ಥಗಳಲ್ಲಿ ರಸಾಯನಿಕ ಶೇಷಗಳು ಕಂಡು ಬರುತ್ತಿರುವುದು ವಿಪರ್ಯಾಸ. ಆಹಾರ ಸುರಕ್ಷತೆ ಆಹಾರ ಭದ್ರತೆಗೆ ಮಾತ್ರ ಸೀಮಿತವಾಗಿರುವುದಿಲ್ಲ. ಆಹಾರ ಪದಾರ್ಥಗಳ ಮೌಲ್ಯವರ್ಧನೆಯಿಂದ ರೈತರ ಆದಾಯ ದ್ವಿಗುಣಗೊಳ್ಳುವುದಲ್ಲದೆ ಹಳ್ಳಿಗಳಿಂದ ನಗರಗಳತ್ತ ವಲಸೆ ಹೋಗುವುದನ್ನು ಸಹ ತಡೆಯಬಹುದು ಎಂದರು.
ಗುಣಮಟ್ಟದ ಆಹಾರ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳ್ಳುವುದರಿಂದ ವಿದೇಶಗಳಲ್ಲಿ ಬೇಡಿಕೆ ಉಂಟಾಗಿ ರಫ್ತಿಗೆ ಅನುಕೂಲವಾಗಿತ್ತದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಅಂತರಾಷ್ಟ್ರೀಯ ಸಿರಿಧಾನ್ಯ ವರ್ಷದ ಪ್ರಯುಕ್ತ್ತ ಅನೇಕ ಕಾರ್ಯಕ್ರಮಗಳನ್ನು ಜಾರಿಗೊಳಿಸಿವೆ. ಈ ನಿಟ್ಟಿನಲ್ಲಿ ಕೃಷಿ ವಿಶ್ವವಿದ್ಯಾನಿಲಯ, ಬೆಂಗಳೂರು ವರ್ಷಪೂರ್ತಿ ಸಿರಿಧಾನ್ಯಗಳನ್ನು ಪ್ರೋತ್ಸಾಹಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಸಿರಿಧಾನ್ಯಗಳ ಉತೃಷ್ಟಕೇಂದ್ರವನ್ನು ಸ್ಥಾಪಿಸಿ ಮೌಲ್ಯವರ್ಧಿತ ಪದಾರ್ಥಗಳ ಸಂಶೋಧನೆಯನ್ನು ಸಹ ಕೈಗೊಂಡಿದೆ. ಆಹಾರ ವಿಜ್ಞಾನ ಹಾಗೂ ಪೋಷಣಾ ವಿಭಾಗವು ಹಲವಾರು ತಾಂತ್ರಿಕತೆಗಳನ್ನು ಬಿಡುಗಡೆಗೊಳಿಸಿದೆ ಮತ್ತು ಬೇಕರಿ ತರಬೇತಿ ಕೇಂದ್ರವು ಆಹಾರ ಸುರಕ್ಷತೆಗೆ ಒತ್ತು ನೀಡಿ ನಿರಂತರವಾಗಿ ತರಬೇತಿಯನ್ನು ಕೈಗೊಂಡು ತನ್ನದೇ ಆದ ಚಾಪನ್ನು ಮೂಡಿಸಿದೆ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಬೆಂಗಳೂರಿನ ಕೃಷಿ ವಿಶ್ವವಿದ್ಯಾನಿಲಯದ ಡೀನ್ (ಕೃಷಿ), ಡಾ. ಎನ್.ಬಿ. ಪ್ರಕಾಶ್ ಮಾತನಾಡಿ, ಸಿರಿಧಾನ್ಯದ ಉತ್ಪಾದನೆಯ ಜೊತೆಗೆ ಮಣ್ಣಿನ ಆರೋಗ್ಯದ ಕಡೆಗೂ ಹೆಚ್ಚಿನ ಗಮನವರಿಸುವುದು ಅಗತ್ಯವಿದೆ. ಹೆಚ್ಚಿನ ರಾಸಾಯನಿಕ ಬಳಕೆಯಿಂದ ಮಣ್ಣಿನ ಆರೋಗ್ಯ ಕುಂಟಿತವಾಗಿ ಇಳುವರಿ ಕಡಿಮೆಯಾಗುತ್ತಿರುವುದು ಕಂಡುಬರುತ್ತಿದೆ ಆದುದರಿಂದ ರೈತರು ಸಮಗ್ರ ಕೃಷಿಯತ್ತ ಗಮನಹರಿಸುವುದು ಅತ್ಯಂತ ಅವಶ್ಯಕವೆಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಭಾರತೀಯ ಕೃಷಿ ಕೌಶಲ್ಯ ಮಂಡಳಿಯ ದಕ್ಷಿಣ ವಿಭಾಗದ ಪ್ರಾದೇಶಿಕ ಮುಖ್ಯಸ್ಥರಾದ ಡಾ: ಈಶ್ವರ್ ಪೂಜಾರ್, ಬೆಂಗಳೂರಿನ ಸೌತ್ ಏಷ್ಯಾ ಪ್ರೈ. ಲಿಮಿಟೆಡ್, ನೊವೋಜೈಮ್ಸ್ನ ಮುಖ್ಯಸ್ಥರಾದ ಡಾ: ಸುಚಿತ್ರಾ ತ್ರಿಪಾಠಿ, ಮತ್ತು ಸ್ನಾತಕೋತ್ತರ ವಿಭಾಗದ ಡೀನ್ ಡಾ: ಹೆಚ್.ಸಿ. ಪ್ರಕಾಶ್. ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು ಹಾಗೂ ಕೃಷಿ ವಿಶ್ವವಿದ್ಯಾನಿಲಯದ ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು.