ಸುದ್ದಿಮೂಲ ವಾರ್ತೆ
ಬೆಂಗಳೂರು, ಜೂ.17: ರಾಜ್ಯದಲ್ಲಿ ನಿರುದ್ಯೋಗ ಅತಿ ದೊಡ್ಡ ಸಮಸ್ಯೆಯಾಗಿದ್ದು, ಇದಕ್ಕೆ ತಮ್ಮ ಶಿಕ್ಷಣ ವ್ಯವಸ್ಥೆಯಲ್ಲಿ ದೋಷವಿದೆಯೇ? ಪಠ್ಯಕ್ರಮದಲ್ಲಿ ಲೋಪವಿದೆಯೇ ಎಂಬುದನ್ನು ಅರಿತು ಸೂಕ್ತ ಮಾರ್ಪಾಟು ಮಾಡುವ ಅಗತ್ಯವಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ. ಸುಧಾಕರ್ ಹೇಳಿದ್ದಾರೆ.
ಕೈಗಾರಿಕಾ ಬೆಳವಣಿಗೆಯಾಗುತ್ತಿದ್ದು, ನುರಿತ, ಕೌಶಲ್ಯಯುತ ಸಂಪನ್ಮೂಲಕ್ಕೆ ಬೇಡಿಕೆ ಇದೆ. ಪರಿಣಿತ ಮಾನವ ಸಂಪನ್ಮೂಲ ಒದಗಿಸುವುದು ನಮ್ಮ ಜವಾಬ್ದಾರಿಯಾಗಿದೆ. ಇಂತಹ ಸವಾಲುಗಳನ್ನು ಸೂಕ್ತ ಶಿಕ್ಷಣ ವ್ಯವಸ್ಥೆ ಅಳವಡಿಸುವ ಮೂಲಕ ಬಗೆಹರಿಸಿಕೊಳ್ಳಬೇಕು ಎಂದು ಪ್ರತಿಪಾದಿಸಿದರು.
ದಂತ ವೈದ್ಯಕೀಯ ಚಿಕಿತ್ಸಾ ವಲಯದಲ್ಲಿ ದೇಶದಲ್ಲೇ ಮೊದಲ ಕೊರ್ಟಿಕೋ ಬಸಲ್ ಡೆಂಟಲ್ ಇಂಪ್ಲಾಂಟೇಷನ್ ಕುರಿತ ದಂತ ವೈದ್ಯರ ಮೊದಲ ಅಂತರರಾಷ್ಟ್ರೀಯ ಸಮ್ಮೇಳನ ಕಾನ್ಕರ್ಡ್ ಹೋಟೆಲ್ ನಲ್ಲಿ ಆಯೋಜಿಸಲಾಗಿತ್ತು. ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಸಚಿವರು, ಆಯಾ ಕಾಲಘಟ್ಟಕ್ಕೆ ಅನುಗುಣವಾಗಿ ಸೂಕ್ತ ಮಾರ್ಪಾಟುಗಳೊಂದಿಗೆ ಮುನ್ನಡೆದಾಗ ಮಾತ್ರ ಪರಿಕಾರ ಕಂಡುಕೊಳ್ಳಲು ಸಾಧ್ಯ ಎಂದರು.
ತಮ್ಮ ದಂತ ವೈದ್ಯಕೀಯ ವೃತ್ತಿ ಕುರಿತು ಮಾತನಾಡಿದ ಡಾ. ಎಂ.ಸಿ. ಸುಧಾಕರ್, 2004ರಲ್ಲಿಯೇ ತಾವು ವೃತ್ತಿ ತೊರೆಯಬೇಕಾಯಿತು. ವೈದ್ಯರಾಗಿ ಸೇವೆ ಸಲ್ಲಿಸಲು ಸಾಧ್ಯವಾಗುತ್ತಿಲ್ಲ ಎಂಬ ಅಸಮಾಧಾನವಿದೆ. ಆದರೆ ತಮ್ಮನ್ನು ರಾಜಕೀಯದಲ್ಲಿ ಪೂರ್ಣ ಪ್ರಮಾಣದಲ್ಲಿ ಸಮರ್ಪಿಸಿಕೊಂಡಿದ್ದೇನೆ. ಎರಡು ಬಾರಿ ಗೆದ್ದು, ಎರಡು ಬಾರಿ ಸೋತಿದ್ದರೂ ತಮ್ಮ ಕೀಡಾ ಸ್ಫೂರ್ತಿ ಕಡಿಮೆಯಾಗಿಲ್ಲ. ಬದ್ಧತೆಯೊಂದಿಗೆ ಸಾರ್ವಜನಿಕ ಕ್ಷೇತ್ರದಲ್ಲಿದ್ದೇನೆ ಎಂದರು.
ತಾವೀಗ ಉನ್ನತ ಶಿಕ್ಷಣ ಸಚಿವರಾಗಿ ಸೇವೆ ಸಲ್ಲಿಸುತ್ತಿದ್ದು, ಆದರೆ ತಮಗೆ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವರಾಗಿ ಕೆಲಸ ಮಾಡಲು ಒಲವಿದೆ. ಹಾಗೆಂದ ಮಾತ್ರಕ್ಕೆ ತಮಗೆ ದೊರೆತಿರುವ ಉನ್ನತ ಶಿಕ್ಷಣ ಇಲಾಖೆ ಕಡಿಮೆಯೇನಲ್ಲ. 32 ಸರ್ಕಾರಿ ವಿಶ್ವವಿದ್ಯಾಲಯಗಳು ಇಲಾಖೆ ವ್ಯಾಪ್ತಿಗೆ ಬರುತ್ತವೆ. ಅತಿ ದೊಡ್ಡ ಸ್ವಾಯತ್ತ ಮತ್ತು ಪರಿಗಣಿತ ವಿಶ್ವವಿದ್ಯಾಲಯಗಳು, ದೊಡ್ಡ ದೊಡ್ಡ ಶಿಕ್ಷಣ ಸಂಸ್ಥೆಗಳು ಬರುತ್ತವೆ ಎಂದು ಹೆಮ್ಮೆಯಿಂದ ಹೇಳಿಕೊಂಡರು.
ದಂತ ವೈದ್ಯಕೀಯ ವಲಯದಲ್ಲಿ ಹಲವಾರು ರೀತಿಯ ಇಂಪ್ಲಾಂಟ್ ಚಿಕಿತ್ಸಾ ಪದ್ಧತಿಗಳಿವೆ. ಎಲ್ಲಾ ಮಾಹಿತಿಯೂ ರೋಗಿಗಳಿಗೆ ತಿಳಿದಿರುತ್ತದೆ. ಆದರೂ ಈ ನಿಟ್ಟಿನಲ್ಲಿ ಅರಿವು ಮೂಡಿಸುವ ಕೆಲಸ ಆಗಬೇಕಾಗಿದೆ. ಇಲ್ಲಿನ ಜನರಿಗೆ ಅಗತ್ಯವಾಗಿರುವ ಮತ್ತು ಅತ್ಯಾಧುನಿಕ ತಂತ್ರಜ್ಞಾನದ ಮತ್ತು ಸುಲಭ ದರದಲ್ಲಿ ಚಿಕಿತ್ಸೆ ನೀಡುವ ವ್ಯವಸ್ಥೆ ರೂಪಿಸಬೇಕಾಗಿದೆ ಎಂದು ಹೇಳಿದರು.
ಬೆಂಗಳೂರು ವಿಶ್ವವಿದ್ಯಾಲಯದ ಉಪಕುಲಪತಿ ಡಾ. ಜಯರಾಮ್ ಎಸ್.ಎಂ, ದಂತ ವೈದ್ಯಕೀಯ ಮಂಡಳಿ ಸದಸ್ಯ ಡಾ. ಕೆ. ಶಿವಶರಣ್ ಮತ್ತು ಜೆ,ಎಸ್,ಡಿ.ಸಿ. ಅಧ್ಯಕ್ಷ ಡಾ. ವಿ. ರಂಗನಾಥ್, ಸಮ್ಮೇಳನ ಸಂಘಟನಾ ಸಮಿತಿಯ ಅಧ್ಯಕ್ಷ ಡಾ.ಎಸ್.ಸಿ. ವೀರೇಂದ್ರ ಕುಮಾರ್ ಮತ್ತಿತರರು ಪಾಲ್ಗೊಂಡಿದ್ದರು.