ಸೋಮವಾರ ನಗರದ ಜೆ.ಕೆ ಮೈದಾನದಲ್ಲಿ ಮಹಿಳಾ ದಸರಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಮಹಿಳೆಯರ ಶಿಕ್ಷಣಕ್ಕಾಗಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅನೇಕ ಕೆಲಸಗಳನ್ನು ಮಾಡಿದ್ದಾರೆ. ಸಾವಿತ್ರಿ ಬಾಪುಲೆ ಮತ್ತು ಜ್ಯೋತಿ ಬಾಪುಲೆ ಮಹಿಳೆಯರ ವಿರುದ್ಧದ ದೌರ್ಜನ್ಯವನ್ನು ಖಂಡಿಸಿ ಮಹಿಳಾ ಶಿಕ್ಷಣಕ್ಕಾಗಿ ಶ್ರಮಿಸಿದರು ಎಂದು ಹೇಳಿದರು.
17 ಶತಮಾನದಲ್ಲಿ ಬಸವಣ್ಣನವರು ಲಿಂಗ ತಾರತಮ್ಯದ ವಿರುದ್ಧ ಹೋರಾಡಿ ಸ್ವಂತ ಮನೆಯನ್ನು ಬಿಟ್ಟು ಹೊರ ನಡೆದರು. ಅದೇ ರೀತಿಯಾಗಿ ಮಹಿಳೆಯರ ಸಮಾನತೆಗಾಗಿ ತಮ್ಮ ಕಾನೂನು ಮಂತ್ರಿ ಪದವಿಯನ್ನೇ ತ್ಯಾಗ ಮಾಡಿದ ಡಾ.ಬಿ.ಆರ್ ಅಂಬೇಡ್ಕರ್ ಅವರನ್ನು ಈ ಸಮಯದಲ್ಲಿ ನೆನೆದ ಸಚಿವರು, ಈಗ ಮಹಿಳೆಯರು ಅಭಿವೃದ್ಧಿಯತ್ತ ಸಾಗುತ್ತಿದ್ದಾರೆ. ಮಹಿಳೆಯರಲ್ಲಿ ಅನೇಕ ಪ್ರತಿಭೆಗಳಿವೆ ಅದನ್ನು ಅವಕಾಶ ಮತ್ತು ವೇದಿಕೆ ಸಿಕ್ಕಾಗ ತೆರೆದಿಡುವ ಪ್ರಯತ್ನ ಮಾಡಬೇಕು ಎಂದರು.
ಮಾರಾಟ ಮೇಳ
ಮಹಿಳಾ ದಸರಾ ಪ್ರಯುಕ್ತ, ಮಹಿಳಾ ಮತ್ತು ಮಕ್ಕಳ ದಸರಾ ಉಪ ಸಮಿತಿಯ ವತಿಯಿಂದ ಆಯೋಜಿಸಲಾಗಿದ್ದ ವಸ್ತು ಪ್ರದರ್ಶನ ಮಾರಾಟ ಮೇಳವನ್ನು ಹಾಗೂ ಮಳಿಗೆಗಳನ್ನು ಉದ್ಘಾಟಿಸಿದ ಸಚಿವರು ಎಲ್ಲಾ ಮಳಿಗೆಗಳಿಗೂ ಭೇಟಿ ನೀಡಿ ಮಹಿಳೆಯರಿಗೆ ಶುಭಾಶಯ ಕೋರಿದರು.
ಮೇಯರ್ ಶಿವಕುಮಾರ್ ಮಾತನಾಡಿ, ಮಹಿಳಾ ದಸರಾ ಕಾರ್ಯಕ್ರಮವು ಮಹಿಳೆಯರ ಅಭಿವೃದ್ಧಿ ಪೂರಕವಾಗಿದೆ. ಮಹಿಳೆಯರು ಆರ್ಥಿಕವಾಗಿ ಮುಂದೆ ಬಂದು ಸ್ವಭಾವಲಂಬಿಯಾಗಿ ಬದುಕಬೇಕು. ಅದು ದೇಶದ ಆರ್ಥಿಕತೆಗೂ ಕೂಡ ಸಹಾಯವಾಗುತ್ತದೆ. ಈಗಿನ ಮಹಿಳೆಯರು ಗುಡಿ ಕೈಗಾರಿಕೆ ಕ್ಷೇತ್ರದಲ್ಲಷ್ಟೇ ಅಲ್ಲದೆ ಕಾರ್ಪೊರೇಟ್ ಕ್ಷೇತ್ರದಲ್ಲೂ ಹೆಸರು ಮಾಡುತ್ತಿರುವುದು ಸಂತಸದ ವಿಷಯ. ಹೀಗೆ ಮಹಿಳೆಯರು ಎಲ್ಲಾ ಕ್ಷೇತ್ರದಲ್ಲೂ ಮುಖ್ಯ ವಾಹಿನಿಗೆ ಬರಬೇಕು. ಮಹಿಳೆಯರು ಮಹಿಳಾ ದಸರಾ ಪ್ರಯುಕ್ತ ಆಯೋಜಿಸಿರುವ ಎಲ್ಲಾ ಕಾರ್ಯಕ್ರಮಗಳಲ್ಲೂ ಭಾಗವಹಿಸುವಂತೆ ಉತ್ತೇಜನ ನೀಡಿದರು.
ಕಾರ್ಯಕ್ರಮದಲ್ಲಿ ಉಪಮೇಯರ್ ಡಾ. ರೂಪ, ನಗರ ಪಾಲಿಕೆ ಸದಸ್ಯೆ ಪ್ರಮೀಳಾ ಭರತ್ ಮಹಿಳಾ ಮತ್ತು ಮಕ್ಕಳ ದಸರಾ ಉಪ ಸಮಿತಿಯ ಅಧ್ಯಕ್ಷೆ ಸುಧಾ ಮದೇವಯ್ಯ, ಹುಣಸೂರು ಉಪ ವಿಭಾಗಾಧಿಕಾರಿ ಹಾಗೂ ಮಹಿಳಾ ಮತ್ತು ಮಕ್ಕಳ ದಸರಾ ಉಪ ಸಮಿತಿಯ ವಿಶೇಷಾಧಿಕಾರಿದ ರುಚಿ ಬಿಂದಾಲ್ ಇತರರು ಇದ್ದರು.