ದಯಾಶಂಕರ ಮೈಲಿ
ಮೈಸೂರು, ಮೇ 14: ಮಳೆ ನಿಂತರೂ ಹನಿ ನಿಲ್ಲಲ್ಲ… ಎಂಬಂತೆ ವಿಧಾನಸಭಾ ಚುನಾವಣೆಯ ಪ್ರಚಾರ, ಮತ ಎಣಿಕೆ ಆಗಿ ಫಲಿತಾಂಶ ಪ್ರಕಟವಾದ ನಂತರವೂ ನಮ್ಮ ಜಿಲ್ಲೆಯವರೇ ಆದ ಮಾಜಿ ಸಿಎಂ ಸಿದ್ದರಾಮಯ್ಯನವರಿಗೆ ಮತ್ತೆ ಮುಖ್ಯಮಂತ್ರಿ ಗದ್ದುಗೆ ಸಿಗುತ್ತಾ ? ಯಾರು ಜಿಲ್ಲೆಯಿಂದ ಮಂತ್ರಿ ಆಗುತ್ತಾರೆ ? ಎಂಬ ಬಗ್ಗೆ ರಾಜಕೀಯ ವಲಯದಲ್ಲಿ ಭಾರಿ ಚರ್ಚೆ ಆಗುತ್ತಿದೆ.
ಕಾಂಗ್ರೆಸ್ಗೆ ಸ್ಪಷ್ಟ ಬಹುಮತ ಬಂದ ಹಿನ್ನೆಲೆಯಲ್ಲಿ ಜಾತಿ, ಹಿರಿತನ ಮತ್ತಿತರ ಅಂಶಗಳನ್ನು ಇಟ್ಟುಕೊಂಡು ಅಳೆದು ತೂಗಿ ಸಿಎಂ ಮತ್ತು ಮಂತ್ರಿ ಸ್ಥಾನ ಯಾರಿಗೆ ಸಿಗುತ್ತದೆ ಎಂಬ ಬಗ್ಗೆ ವಾದ, ಪ್ರತಿವಾದ, ಪ್ರತಿಪಾದನೆ ನಡೆಯುತ್ತಿದೆ.ಈಗಾಗಲೇ 5 ವರ್ಷ ಬರೋಬರಿ ಮುಖ್ತಮಂತ್ರಿ ಆಗಿರುವ ಸಿದ್ದರಾಮಯ್ಯನವರು 2023 ರ ಚುನಾವಣೆ ನಡೆಯುವ ವೇಳೆ. ನಾನು ಇನ್ನು ಮುಂದೆ ಚುನಾವಣೆಯಲ್ಲಿ ನಿಲ್ಲುವುದಿಲ್ಲ ಎಂದು ಬಹಿರಂಗವಾಗಿಯೇ ಹೇಳಿದ್ದಾರೆ. ಈ ಕಾರಣದಿಂದ ಮೊದಲ 2 ವರ್ಷ ಸಿದ್ದರಾಮಯ್ಮ ಅವರಿಗೆ ಉಳಿದ ಮೂರು ವರ್ಷ ಕೆಪಿಸಿಸಿ ಅಧ್ಯಕ್ಷರಾಗಿ ಡಿ.ಕೆ. ಶಿವಕುಮಾರ್ ಅವರಿಗೆ ಸಿಎಂ ಆಗಬಹುದು.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜನ ಅವರಿಗೆ ಸಿಎಂ ಆಗುವ ಅಭಿಲಾಷೆ ಇಲ್ಲ. ಮತ್ತು 2024 ಕ್ಕೆ ಲೋಕಸಭೆ ಚುನಾವಣೆ ಇರುವುದರಿಂದ ಪಕ್ಷದ ಹೈಕಮಾಂಡ್ ಈ 2 ಪ್ಲಸ್ ೩ ಸೂತ್ರ ಅನುಸರಿಸುವ ಸಾಧ್ಯತೆಗಳಿವೆ. ಹಾಗಾಗಿ ಸಿದ್ದರಾಮಯ್ಯ 2 ನೇ ಬಾರಿಗೆ 2 ವರ್ಷಗಳು ಸಿಎಂ ಆಗಬಹುದು ಎಂದು ಕಾಂಗ್ರೆಸ್ ವಲಯದಲ್ಲಿ ಮಾತ್ರವೇ ಅಲ್ಲ, ಎಲ್ಲಾ ಪಕ್ಷಗಳಲ್ಲಿ ಮತ್ತು ಸಾರ್ವಜನಿಕವಾಗಿ ವಿಶ್ಲೇಷಣೆ ಮಾಡಲಾಗುತ್ತಿದೆ.
ಇದು ಎಷ್ಟರ ನಿಜವಾಗುತ್ತೆ ಎಂಬುದು ಸೋನಿಯಾಗಾಂಧಿ ಮತ್ತು ರಾಹುಲ್ ಗಾಂಧಿ ಕಳುಹಿಸುವ ಲಕೋಟೆ ತೆರೆದುಕೊಂಡಾಗಲೆ ತಿಳಿಯುತ್ತದೆ. ಅದರಲ್ಲೂ ಕುರುಬ ಸಮಾಜದಲ್ಲಿ ಮಾತ್ರ ಸಿದ್ದರಾಮಯ್ಯನವರು ಸಿಎಂ ಆಗುವುದು ಸೂರ್ಯ, ಚಂದ್ರರಷ್ಟೆ ಸತ್ಯ
ಎಂಬ ಅದಮ್ಯ ವಿಶ್ವಾಸದ ಮಾತುಗಳು ಕೇಳಿ ಬರುತ್ತಿವೆ.
ಈ ಮೂವರೊಳಗೆ ಯಾರಿಗೆ ಮಂತ್ರಿ ಪಟ್ಟ?
ಈ ಮಧ್ಯೆ ಜಾತಿವಾರು, ಜಿಲ್ಲಾವಾರ ಸಮೀಕರಣದ ಆಧಾರದ ಮೇಲೆ ಜಿಲ್ಲೆಯಿಂದ ಯಾರು ಮಂತ್ರಿ ಆಗುತ್ತಾರೆ ಎಂಬ ಬಗ್ಗೆಯಂತೂ ವಿಭಿನ್ನ ರೀತಿಯಲ್ಲಿ ವಾದ ವಿವಾದ ನಡೆಯುತ್ತಿದೆ. ಜಿಲ್ಲೆಯ ಕಾಂಗ್ರೆಸ್ ಹಿರಿಯ ಶಾಸಕರಾದ ಡಾ.ಎಚ್.ಸಿ.ಮಹಾದೇವಪ್ಪ, ತನ್ವೀರ್ ಸೇಠ್ ಮತ್ತು ಕೆ. ವೆಂಕಟೇಶ್ ಅವರು ಮಂತ್ರಿ ಆಗುವ ಲಕ್ಷಣಗಳು ಇವೆ. ಏಕೆಂದರೆ ಈ ಮೂವರು 6 ಬಾರಿ ಶಾಸಕರಾಗಿದ್ದವರು, ಉಳಿದ 5 ಶಾಸಕರಿಗೆ ಹಿರಿತನವಿಲ್ಲ.
ತನ್ವೀರ್ ಸೇಠ್ ಅವರು ನರಸಿಂಹರಾಜ ಕ್ಷೇತ್ರದಿಂದ 20008 ರಿಂದ 2023 ರವರೆಗೆ ಸತತವಾಗಿ 6 ಬಾರಿ ಶಾಸಕರಾಗಿದ್ದು, ಧರ್ಮಸಿಂಗ್ ಸಿಎಂ ಆಗಿದ್ದಾಗ ಕಾರ್ಮಿಕ ಮತ್ತು ಸಿದ್ದರಾಮಯ್ಯನವರು ಸಿಎಂ ಆಗಿದ್ದಾಗ ಪ್ರಾಥಮಿಕ, ಪ್ರೌಢ ಶಿಕ್ಷಣರಾಗಿದ್ದರು. ಜಿಲ್ಲೆಯಿಂದ ಮುಸ್ಲಿಂ ಸಮುದಾಯದಿಂದ ಆಯ್ಕೆ ಆಗಿರುವ ಏಕೈಕ ವ್ಯಕ್ತಿ.
ಟಿ.ನರಸೀಪುರ ಮೀಸಲು ಕ್ಷೇತ್ರದಿಂದ 6 ನೇ ಬಾರಿಗೆ ವಿಧಾನಸಭೆ ಪ್ರವೇಶ ಮಾಡಿರುವ ಡಾ.ಎಚ್.ಸಿ. ಮಹಾದೇವಪ್ಪನವರು ಜೆ.ಎಚ್.ಪಟೇಲ್ ಮಂತ್ರಿ ಮಂಡಲದಲ್ಲಿ ಆರೋಗ್ಯ ಸಚಿವ, ಧರ್ಮಸಿಂಗ್ ಅವಧಿಯಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಸಿದ್ದರಾಮಯ್ಯನವರ ಸಂಪುಟದಲ್ಲಿ ಲೋಕೋಪಯೋಗಿ ಸಚಿವರಾಗಿದ್ದವರು. ಪರಿಶಿಷ್ಟ ಸಮಾಜಕ್ಕೆ ಸೇರಿದವರು ಎಂಬುದೇ ಅಲ್ಲ ಹಲವು ಖಾತೆಗಳನ್ನು ನಿಭಾಯಿಸಿರುವ ಛಾತಿ ಇದೆ ಎಂಬ ಅಂಶಗಳಿಂದ ಮಂತ್ರಿ ಆಗುವ ಸಂಭವಿದೆ.
ಇನ್ನೂ ಪಿರಿಯಾಪಟ್ಟಣ ಕ್ಷೇತ್ರದಿಂದ 6 ನೇ ಬಾರಿಗೆ ಆಯ್ಕೆ ಆಗಿರುವ ವಕ್ಕಲಿಗ ಸಮುದಾಯದ ಕೆ. ವೆಂಕಟೇಶ್ ಅವರು ಜೆ.ಎಚ್.ಪಟೇಲ್ ಕಾಲದಲ್ಲಿ ಕಾಡಾ ಸಚಿವರಾಗಿದ್ದರಲ್ಲದೇ, ಸಿದ್ದರಾಮಯ್ಯ ಅವಧಿಯಲ್ಲಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (ಬಿಡಿಎ) ಅಧ್ಯಕ್ಷರಾಗಿದ್ದರು.
ಕಾಂಗ್ರೆಸ್ ಸರಳ ಬಹುಮತ ಬಂದಿದ್ದರೆ ಮೂವರಿಗೆ ಜಾತಿ ಸಮೀಕರಣದ ಆಧಾರದ ಮೇಲೆ ಸಚಿವಗಿರಿ ಸಿಗುತ್ತಿತ್ತೆನೋ. ಆದರೆ ಹೆಚ್ಚು ಸ್ಥಾನಗಳು ಬಂದಿರುವ ಕಾರಣ ಒಬ್ಬರಿಗೆ ಅಥವಾ ಇಬ್ಬರಿಗೆ ಸಿಹಬಹುದು. ಏನಾದರೂ ಸಿದ್ದರಾಮಯ್ಯ ಸಿಎಂ ಆದರೆ ಒಬ್ಬರಿಗೆ ಮಾತ್ರ ಸಿಗಲಿಕ್ಕೆ ಸಾಧ್ಯ ಎಂದು ಕೂಡ ಪ್ರತಿಪಾದನೆ ಮಾಡಲಾಗುತ್ತಿದೆ.