ಸುದ್ದಿಮೂಲ ವಾರ್ತೆ
ಬೆಂಗಳೂರು,ಏ.20: ದೇಶದಲ್ಲಿ ಮೊಟ್ಟಮೊದಲ ಬಾರಿಗೆ ಪದವಿ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಸ್ಥಳೀಯ ಭಾಷೆಯಲ್ಲಿ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಲಾಗಿದೆ. ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಮಂಡಳಿ (ಕೆಎಸ್ಎಚ್ಇಸಿ) ಬರುವ ಶೈಕ್ಷಣಿಕ ವರ್ಷ 2023 ದಿಂದ ಇದನ್ನು ಅಳವಡಿಸಲು ವಿಶ್ವವಿದ್ಯಾಲಯ ಅನುದಾನ ಆಯೋಗವು (ಯುಜಿಸಿ)ವಿಶ್ವವಿದ್ಯಾಲಯಗಳಿಗೆ ಸೂಚನೆ ನೀಡಿದ್ದು, ಉನ್ನತ ಶಿಕ್ಷಣ ಮಂಡಳಿ ಅಡಿಯಲ್ಲಿ ಬರುವ ವಿಶ್ವವಿದ್ಯಾನಿಲಯಗಳು ಮತ್ತು ಕಾಲೇಜುಗಳಲ್ಲಿ ಪದವಿ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳು ಕನ್ನಡ ಭಾಷೆಯಲ್ಲಿ ಪರೀಕ್ಷೆ ಬರೆಯಲು ಅನುವು ಮಾಡಿಕೊಟ್ಟಿರುವುದನ್ನು ಕನ್ನಡ ಸಾಹಿತ್ಯ ಪರಿಷತ್ತು ಸ್ವಾಗತಿಸುತ್ತದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ. ಮಹೇಶ ಜೋಶಿ ತಿಳಿಸಿದ್ದಾರೆ,
ಮಾತೃಭಾಷೆ ಅಥವಾ ಸ್ಥಳೀಯ ಭಾಷೆಗಳಲ್ಲಿ ಪಠ್ಯಪುಸ್ತಕಗಳನ್ನು ಬರೆಯುವುದು ಮತ್ತು ಇತರ ಭಾಷೆಗಳಿಂದ ಪುಸ್ತಕಗಳನ್ನು ಭಾಷಾಂತರಿಸುವುದು ಸೇರಿದಂತೆ ಬೋಧನೆಯಲ್ಲಿ ಅವುಗಳ ಬಳಕೆಯನ್ನು ಉತ್ತೇಜಿಸುವ ಕ್ರಮಗಳನ್ನು ಪ್ರೋತ್ಸಾಹಿಸಬೇಕು. ಯಾವುದೇ ಪದವಿ ಇಂಗ್ಲಿಷ್ ಮಾಧ್ಯಮದಲ್ಲಿದ್ದರೂ ಪರೀಕ್ಷೆಯ ಸಮಯದಲ್ಲಿ ವಿದ್ಯಾರ್ಥಿಗಳು ಸ್ಥಳೀಯ ಭಾಷೆಯಲ್ಲೇ ಉತ್ತರ ಬರೆಯುವುದರಿಂದ ವಿದ್ಯಾರ್ಥಿಗಳಿಗೆ ಇನ್ನೂ ಹೆಚ್ಚಿನ ಅನುಕೂಲವಾಗಲಿದೆ. ಶಿಕ್ಷಣದಲ್ಲಿ ಭಾರತೀಯ ಭಾಷೆಗಳ ಪ್ರಚಾರ ಮತ್ತು ನಿಯಮಿತ ಬಳಕೆಯನ್ನು ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ (ಎನ್ಇಪಿ) ಗಮನಹರಿಸಬೇಕಾದ ಪ್ರಮುಖ ಕ್ಷೇತ್ರವಾಗಿದೆ. ಇದು ಮಾತೃಭಾಷೆ ಮತ್ತು ಸ್ಥಳೀಯ ಭಾಷೆಗಳಲ್ಲಿ ಬೋಧನೆ ಮತ್ತು ಬೋಧನೆಯ ಮಹತ್ವವನ್ನು ಒತ್ತಿಹೇಳುತ್ತದೆ ಎಂದು ನಾಡೋಜ ಡಾ. ಮಹೇಶ ಜೋಶಿ ಅಭಿಪ್ರಾಯ ಪಟ್ಟಿದ್ದಾರೆ.
ಪ್ರಸಕ್ತ ಸಾಲಿನ ಪದವಿ ಅಥವಾ ಸ್ನಾತಕೋತ್ತರ ವಿಭಾಗದ ವಿದ್ಯಾರ್ಥಿಗಳು ಪರೀಕ್ಷೆಯನ್ನು ಯಾವ ಭಾಷೆಯಲ್ಲಿ ಬರೆಯುತ್ತೇನೆ ಎಂದು ಮುಂಚಿತವಾಗಿಯೇ ತಿಳಿಸಬೇಕು ಎನ್ನಲಾಗಿದೆ. ಆದರೆ ಬರುವ ಶೈಕ್ಷಣಿಕ ವರ್ಷದಿಂದ ಹೀಗಾಗದಂತೆ ನೋಡಿಕೊಂಡು, ಓರ್ವ ವಿದ್ಯಾರ್ಥಿಯು ಪ್ರಶ್ನೆ ಪತ್ರಿಕೆಗೆ ಉತ್ತರ ಬರೆಯುವಾಗ ಒಂದು ಪ್ರಶ್ನೆಗೆ ಕನ್ನಡದಲ್ಲಿಯೂ ಮತ್ತೊಂದು ಪ್ರಶ್ನೆಗೆ ಇಂಗ್ಲಿಷ್ನಲ್ಲಿಯೂ ಉತ್ತರ ಬರೆಯಲು ಅವಕಾಶ ನೀಡಲಾಗುತ್ತಿದೆ. ಡಿಪ್ಲೊಮಾ ಮತ್ತು ಪಾಲಿಟೆಕ್ನಿಕ್ ಕೋರ್ಸ್ಗಳಲ್ಲಿಯೂ ಈ ವ್ಯವಸ್ಥೆಯನ್ನು ಪರಿಚಯಿಸಲಾಗಿರುವುದನ್ನು ಕನ್ನಡ ಸಾಹಿತ್ಯ ಪರಿಷತ್ತು ಸ್ವಾಗತಿಸುತ್ತಿದೆ ಎಂದು ಪರಿಷತ್ತಿನ ಅಧ್ಯಕ್ಷರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಶೈಕ್ಷಣಿಕ ಪರಿಸರ ವ್ಯವಸ್ಥೆಯು ಇಂಗ್ಲಿಷ್ ಮಾಧ್ಯಮ ಕೇಂದ್ರಿತವಾಗಿ ಮುಂದುವರಿಯುತ್ತಿದೆ. ಆದರೆ ಶೈಕ್ಷಣಿಕ ಪರಿಸರವನ್ನೂ ಸಹ ಕನ್ನಡದಲ್ಲಿ ಇರುವಂತೆ ಮಾಡಬೇಕು. ಬೋಧನೆ,ಕಲಿಕೆ ಮತ್ತು ಮೌಲ್ಯಮಾಪನ ಪ್ರಕ್ರಿಯೆಯು ಸ್ಥಳೀಯ ಭಾಷೆಗಳಲ್ಲಿ ನಡೆದರೆ ವಿದ್ಯಾರ್ಥಿಗಳು ತಮ್ಮನ್ನು ತಾವು ಶೈಕ್ಷಣಿವಾಗಿ ತೊಡಗಿಸಿಕೊಳ್ಳುವಿಕೆಯ ಪ್ರಮಾಣ ಹೆಚ್ಚಾಗಲಿದೆ. ಪರಿಣಾಮ ವಿದ್ಯಾರ್ಥಿಗಳ ಯಶಸ್ಸು ಹೆಚ್ಚಾಗಲಿದೆ ಎಂದು ಅಭಿಪ್ರಾಯ ಪಟ್ಟ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ. ಮಹೇಶ ಜೋಶಿಯವರು ಮೌಲ್ಯಮಾಪಕರೂ ಸಹ ಸ್ಥಳೀಯ ಭಾಷೆಯನ್ನು ಅರಿತಿರಬೇಕು. ಸ್ಥಳೀಯ ಭಾಷೆ ತಿಳಿದಿರುವ ಮೌಲ್ಯಮಾಪಕರನ್ನು ತಯಾರು ಮಾಡುವ ಕೆಲಸವನ್ನು ವಿಶ್ವವಿದ್ಯಾಲಯ ಮಾಡಬೇಕು ಎಂದು ಹೇಳಿದರು.
ಭಾಷೆಯ ಅಡೆತಡೆಯಾಗದಂತೆ ಪ್ರಸ್ತುತ ನಿರ್ಧಾರ ತೆಗೆದುಕೊಳ್ಳಲಾಗಿದ್ದು ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಇದು ಬಹಳಷ್ಟು ಅನುಕೂಲಕರವಾಗಲಿದೆ. ಉತ್ತಮ ಅರಿವಿನ ಸಾಧನೆಗಾಗಿ ಮತ್ತು ಕಲಿಯುವವರ ಸಮಗ್ರ ವ್ಯಕ್ತಿತ್ವದ ಬೆಳವಣಿಗೆಗಾಗಿ ಎಲ್ಲಾ ಭಾರತೀಯ ಭಾಷೆಗಳಲ್ಲಿ ಸಂವಹನವನ್ನು ಉತ್ತಮಗೊಳಿಸುವ ಅಗತ್ಯವನ್ನು ಇದು ಪೂರ್ತಿಮಾಡಲಿದೆ. ಆಂಗ್ಲ ಮಾಧ್ಯಮದಲ್ಲಿ ಕಾರ್ಯಕ್ರಮವನ್ನು ನೀಡಲಾಗಿದ್ದರೂ ಸಹ ಪರೀಕ್ಷೆಗಳಲ್ಲಿ ಸ್ಥಳೀಯ ಭಾಷೆಗಳಲ್ಲಿ ಉತ್ತರಗಳನ್ನು ಬರೆಯಲು ವಿದ್ಯಾರ್ಥಿಗಳಿಗೆ ಅವಕಾಶ ನೀಡಬೇಕು ಮತ್ತು ಸ್ಥಳೀಯ ಭಾಷೆಗಳಲ್ಲಿ ಮೂಲ ಬರವಣಿಗೆಯ ಅನುವಾದವನ್ನು ಉತ್ತೇಜಿಸಲು ಮತ್ತು ಬೋಧನೆ ಕಲಿಕೆ ಪ್ರಕ್ರಿಯೆಯಲ್ಲಿ ಸ್ಥಳೀಯ ಭಾಷೆಯನ್ನು ಬಳಸಬೇಕೆಂಬ ಆಯೋಗದ ನಿಲುವನ್ನು ಕನ್ನಡ ಸಾಹಿತ್ಯ ಪರಿಷತ್ತು ಅಭಿನಂದಿಸುತ್ತದೆ ಏಂದು ನಾಡೋಜ ಡಾ. ಮಹೇಶ ಜೋಶಿ ತಿಳಿಸಿದ್ದಾರೆ.