ಸುದ್ದಿಮೂಲ ವಾರ್ತೆ
ದೇವನಹಳ್ಳಿ, ಮಾ.20: ಕನ್ನಡದ ಕಂಪನ್ನು ಪ್ರತಿ ನಿತ್ಯವೂ ಸಾರುವಂತಹ ಧ್ಯೇಯ ರೂಡಿಸಿಕೊಳ್ಳಬೇಕು. ಆಗ ಮಾತ್ರ ಕನ್ನಡಿಗರಂತಹ ಹೃದಯವಂತರು ಸಿಗಲು ಸಾಧ್ಯ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಹಾಗೂ ಡಾ.ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶನ ಕಲೆಗಳ ವಿಶ್ವವಿದ್ಯಾಲಯದ ಉಪಕುಲಪತಿ ಡಾ.ನಾಗೇಶ್.ವಿ.ಬೆಟ್ಟಕೋಟೆ ಹೇಳಿದರು.
ದೇವನಹಳ್ಳಿಯ ಡಾ.ಬಿ.ಆರ್. ಅಂಬೇಡ್ಕರ್ ಭವನದಲ್ಲಿ ನಡೆಯುತ್ತಿರುವ ಜಿಲ್ಲಾ ಮಟ್ಟದ 25ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸಮ್ಮೇಳನಾಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸ್ವಾಭಿಮಾನ, ಸಹಬಾಳ್ವೆ ,ಸಮಾನತೆ ಮತ್ತು ಪ್ರೀತಿವಿಶ್ವಾಸ ವ್ಯಕ್ತಪಡಿಸುವ ನಮ್ಮಂತಹ ಸಹೃದಯಿಗಳು ಕನ್ನಡ ನಾಡು, ನುಡಿ ಸೇವೆಯಲ್ಲಿ ಸದಾ ನಮ್ಮನ್ನು ತೊಡಗಿಸಿಕೊಂಡಾಗ ಮಾತ್ರ ಕನ್ನಡಕ್ಕೆ ಒಂದು ಗೌರವ ಸೂಚಿಸಿದಂತೆ ಎಂದು ತಿಳಿಸಿದರು.
ಇದಕ್ಕೂ ಮುನ್ನ ಸಮ್ಮೇಳನಾಧ್ಯಕ್ಷ ಡಾ.ನಾಗೇಶ್.ವಿ.ಬೆಟ್ಟಕೋಟೆ ಅವರನ್ನು ಟೌನಿನ ಪ್ರಮುಖ ರಸ್ತೆಯಲ್ಲಿ ಬೆಳ್ಳಿಯ ರಥದಲ್ಲಿ ಮೆರವಣಿಗೆ ಮಾಡಿ ಅಲ್ಲಿಂದ ವೇದಿಕೆಗೆ ಕರೆತರಲಾಯಿತು.
ಬೆಂಗಳೂರು ಗ್ರಾಮಾಂತರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಪ್ರೊ.ಬಿ.ಎನ್.ಕೃಷ್ಣಪ್ಪ ಮಾತನಾಡಿ, ಪ್ರಸ್ತುತ ಆಧುನಿಕ ಕನ್ನಡ ಸಾಹಿತ್ಯಕ್ಕೆ ನಮ್ಮ ಜಿಲ್ಲೆಯ ಸಾಹಿತಿಗಳ ಕೊಡುಗೆಯೂ ಕೂಡ ಗಮನಾರ್ಹವಾಗಿದೆ ಎಂದ ಅವರು, ನೂರಾರು ಬರಹಗಾರರು ನಮ್ಮ ಜಿಲ್ಲೆಯ ಸಾಹಿತ್ಯ ಚರಿತ್ರೆಯನ್ನು ಶ್ರೀಮಂತಗೊಳಿಸಿದ್ದಾರೆ. ಜಿಲ್ಲೆಯ ಸಾಹಿತಿಗಳ ಬರಹಗಳು ಕನ್ನಡದಲ್ಲಿ ಮಾತ್ರವಲ್ಲದೇ ರಾಷ್ಟ್ರಮಟ್ಟ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿಯೂ ಪ್ರಾಮುಖ್ಯತೆ ಪಡೆದ ಉದಾಹರಣೆಗಳಿವೆ ಎಂದರು.
ಕಸಾಪ ತಾಲ್ಲೂಕು ಅಧ್ಯಕ್ಷ ಆರ್.ಕೆ.ನಂಜೇಗೌಡ ಮಾತನಾಡಿ, ಜಿಲ್ಲೆಯ ವಿವಿಧ ಕಲಾತಂಡಗಳು ಸಾಹಿತ್ಯ ಮೆರವಣಿಗೆಯಲ್ಲಿ ಪಾಲ್ಗೊಂಡು ಮೆರುಗು ನೀಡಿದವು. ಕನ್ನಡ ಸಾಹಿತ್ಯ ಸಮ್ಮೇಳನವನ್ನು ಕನ್ನಡಿಗರು ಮತ್ತು ಸಾಹಿತ್ಯಾಸಕ್ತರ ನೆನಪಿನಲ್ಲಿ ಉಳಿಯುವಂತೆ ಆಯೋಜಿಸಲಾಗಿದೆ ಹಾಗೂ ಕನ್ನಡಿಗರ ಬಗ್ಗೆ, ಭಾಷೆ, ನಾಡು-ನುಡಿಯ ಬಗ್ಗೆ ಪ್ರತಿಯೊಬ್ಬರಲ್ಲೂ ಅಭಿಮಾನವಿರಬೇಕು, ನಾಡು ನುಡಿ ವಿಚಾರದಲ್ಲಿ ಯಾವುದೇ ರಾಜಿಯಿಲ್ಲ ಎಂದು ಹೇಳಿದರು.
ಈ ಸಂದರ್ಭದಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಹಸೀಲ್ದಾರ್ ಶಿವರಾಜ್, ಇಓ ವಸಂತ್ ಕುಮಾರ್, ಡಾ,ಆಂಜಿನಪ್ಪ,ಉಳಿಕಲ್ ನಟರಾಜು, ಬಿಜೆಪಿ ಜಿಲ್ಲಾಧ್ಯಕ್ಷ ಎ.ವಿ ನಾರಾಯಣಸ್ವಾಮಿ,ಪುರಸಭಾ ಉಪಾಧ್ಯಕ್ಷೆ ಗೀತಾ ಶ್ರೀ ಧರ್,ಚಿ.ಮಾ.ಸುಧಾಕರ್, ಮಾಲೂರು ವಿಜಿ,ಗೌರವ ಕಾರ್ಯದರ್ಶಿಗಳಾದ ಪ್ರೊ.ರವಿಕಿರಣ್.ಕೆ.ಆರ್, ಸಂಘಟನಾ ಕಾರ್ಯದರ್ಶಿ ಶ್ರೀನಿವಾಸ್ ಗೌಡ, ಸಹ ಕಾರ್ಯದರ್ಶಿ ಕೆಂಪಣ್ಣ,ಜಿಲ್ಲಾ ಸಹ ಕಾರ್ಯದರ್ಶಿ ರಮೇಶ್ ಕುಮಾರ್,ಹಿತ್ತರಹಳ್ಳಿ ರಮೇಶ್, ಬೂದಿಗೆರೆ ಪ್ರಕಾಶ್, ಹೊಸಕೋಟೆ ತಾಲ್ಲೂಕು ಅಧ್ಯಕ್ಷ ಮುನಿರಾಜು, ನೆಲಮಂಗಲ ತಾಲ್ಲೂಕು ಅಧ್ಯಕ್ಷ ಪ್ರದೀಪ್ ಕುಮಾರ್, ಜಿಲ್ಲಾ ಪದಾಧಿಕಾರಿಗಳಾದ ಹೊಸಕೋಟೆ ಜಿ. ಶ್ರೀನಿವಾಸ್, ದೇವನಹಳ್ಳಿ ದೇವರಾಜು ,ಪ್ರವೀಣ್, ಪರಮೇಶ್ವರಯ್ಯ,ಚಂದ್ರಣ್ಣ,ವಿನೋದ್ ಕುಮಾರ್, ಶಶಿಕಲಾ, ಮಹಾದೇವಿ ಕಾಂತರಾಜ್, ರಾಧ ರವರು ಸೇರಿದಂತೆ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಪದಾಧಿಕಾರಿಗಳು ಹಾಜರಿದ್ದರು.