ಸುದ್ದಿಮೂಲ ವಾರ್ತೆ
ದೇವನಹಳ್ಳಿ, ಜು 11 : ಸೂಕ್ತ ಅರಿವಿನ ಕೊರತೆಯಿಂದ ಜನಸಂಖ್ಯೆ ಹೆಚ್ಚಾಗುತ್ತಿದ್ದು, ಬಡತನ, ನಿರುದ್ಯೋಗ ಸಮಸ್ಯೆ, ಶಿಕ್ಷಣ, ಆರೋಗ್ಯ, ಸೇವೆ ಮತ್ತು ಇತರೆ ಸಂಪನ್ಮೂಲಗಳ ಸೇವೆಗಳಿಗೆ ಕೊರತೆ ಉಂಟಾಗಲಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ. ವಿಜಯೇಂದ್ರ ತಿಳಿಸಿದರು.
ಪಟ್ಟಣದ ತಾಲೂಕು ಆರೋಗ್ಯ ಅಧಿಕಾರಿಗಳ ಕಚೇರಿಯಲ್ಲಿ ಜಿಲ್ಲಾಡಳಿತ, ಜಿ.ಪಂ ಮತ್ತು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ತಾಲೂಕು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ವಿಶ್ವ ಜನಸಂಖ್ಯಾ ದಿನಾಚರಣೆ ಕಾರ್ಯರ್ಕಮ ಉದ್ಘಾಟಿಸಿ ಮಾತನಾಡಿದರು.
ಜನಸಂಖ್ಯೆ ನಿಯಂತ್ರಿಸುವ ಉದ್ದೇಶದಿಂದ ಸರ್ಕಾರ ಹಲವು ಯೋಜನೆಗಳನ್ನು ಜಾರಿಗೆ ತಂದಿದ್ದು, ಸಂತಾನ ನಿಯಂತ್ರಣಕ್ಕೆ ಮಾತ್ರೆ ಹಾಗೂ ಚುಚ್ಚುಮದ್ದುಗಳಿಂದ ಇದನ್ನು ಅರಿತುಕೊಂಡು ಜನಸಂಖ್ಯೆ ನಿಯಂತ್ರಣಕ್ಕೆ ಸಾರ್ವಜನಿಕರು ಸಹಕರಿಸಬೇಕು. ಜನಸಂಖ್ಯೆ ಸ್ಥಿರತೆಯಿಂದ ದೇಶದ ಪ್ರಗತಿ ಸಾಧ್ಯವಾಗಿದ್ದು ಜನಸಂಖ್ಯಾ ಸ್ಥಿರತೆಯನ್ನು ಸಾಧಿಸಲು ಆರೋಗ್ಯ ಇಲಾಖೆಯಕುಟುಂಬ ಕಲ್ಯಾಣ ವಿಧಾನಗಳನ್ನು ಪ್ರತಿಯೊಬ್ಬರೂ ಅನುಸರಿಸಬೇಕು ಎಂದರು.
ಜಿಲ್ಲಾ ಆರ್ಸಿಹೆಚ್ ಅಧಿಕಾರಿ ಡಾ. ಸೀಮಾ ಮಾತನಾಡಿ, ಜನಸಂಖ್ಯಾ ಸ್ಪೋಟದಿಂದ ಕುಟುಂಬ ಯೋಜನೆ ಉಪಾಯಗಳನ್ನು ನಮ್ಮದಾಗಿಸಿ ಉನ್ನತೀಯ ಹೊಸ ಅಧ್ಯಾಯ ಬರೆಯುವ ಮೂಲಕ ಜನಸಂಖ್ಯಾ ನಿಯಂತ್ರಣ ಮಾಡಬೇಕು. ಈ ಎಲ್ಲಾ ಸೌಲಭ್ಯಗಳು ಸರ್ಕಾರಿ ಆಸ್ಪತ್ರೆಯಲ್ಲಿ ಸಂಪೂರ್ಣ ಉಚಿತವಾಗಿ ದೊರೆಯುತ್ತದೆ. ಇದರೊಂದಿಗೆ ಆರ್ಥಿಕ ಸೌಲಭ್ಯಗಳನ್ನು ಸರ್ಕಾರ ನೀಡುತ್ತಿದೆ. ಸಾರ್ವಜನಿಕರು ಇದರ ಸೌಲಭ್ಯಗಳನ್ನು ಪಡೆದುಕೊಳ್ಳಬೇಕು ಎಂದರು.
ತಾಲೂಕು ಆರೋಗ್ಯಾಧಿಕಾರಿ ಡಾ. ಸಂಜಯ್ ಮಾತನಾಡಿ, ಸುಧಾರಿತ ಮತ್ತು ಗುಣಾತ್ಮಕ ವೈದ್ಯಕೀಯ ಸೇವಾ ಸೌಲಭ್ಯಗಳನ್ನು ಪಡೆಯುವ ಮೂಲಕ ಪ್ರತಿಕುಟುಂಬವೂ ಒಂದು ಆಥವಾ ಎರಡು ಮಕ್ಕಳಿಗೆ ಸೀಮಿತವಾಗಬೇಕು. ಈ ಹಿಂದೆ ಒಂದು ಮನೆಗೆ 8-10 ಜನ ಮಕ್ಕಳು ಇರುತ್ತಿದ್ದರು. ಅದರಲ್ಲೂ ಮುಸಲ್ಮಾನರಲ್ಲಿ ಹೆಚ್ಚು ಮಕ್ಕಳನ್ನು ನೋಡುತ್ತಿದ್ದೆವು. ಕುಟುಂಬ ಯೋಜನೆ ರಾಷ್ಟ್ರೀಯ ಕಾರ್ಯಕ್ರಮವನ್ನು ಪ್ರಾರಂಭಿಸಿದ ವಿಶ್ವದ ಮೊದಲ ದೇಶ ಭಾರತವಾಗಿದೆ ಎಂದು ಹೇಳಿದರು.
ಈ ವೇಳೆ ಜಿಲ್ಲಾ ಐಇಸಿ ವಿಭಾಗದ ಅಧಿಕಾರಿ ಗೋವಿಂದರಾಜು, ಜಿಲ್ಲಾ ಅರೋಗ್ಯಾಧಿಕಾರಿ ಕಚೇರಿಯ ಸಿಎಂಡಿ ಮೋಹನ್ಕುಮಾರ್., ತಾಲೂಕು ಆರೋಗ್ಯ ಸಹಾಯಕ ವೆಂಕಟೇಶ್ ಮತ್ತಿತರರು ಇದ್ದರು.