ಸುದ್ದಿಮೂಲ ವಾರ್ತೆ
ಕುಷ್ಟಗಿ, ಮೇ. 29: ತಾಲೂಕಿನ ಸಂಗನಾಳ ಗ್ರಾ.ಪಂ ವ್ಯಾಪ್ತಿಯ ಮೆತ್ತಿನಾಳ ಗ್ರಾಮದ ಮನರೇಗಾ ಯೋಜನೆಯಡಿ ಕೂಲಿಕಾರರಿಗೆ ಕೆರೆ ಹೂಳೆತ್ತುವ ಕೆಲಸ ನೀಡಲಾಗಿದ್ದು, ಕಾಮಗಾರಿ ಸ್ಥಳದಲ್ಲಿ ಸೋಮವಾರ ಆರೋಗ್ಯ ಅಮೃತ ಅಭಿಯಾನ ಯೋಜನೆಯಡಿ ಹಮ್ಮಿಕೊಂಡಿದ್ದ ಆರೋಗ್ಯ ತಪಾಸಣಾ ಶಿಬಿರಕ್ಕೆ ತಾಪಂ ಸಹಾಯಕ ನಿರ್ದೇಶಕ ನಿಂಗನಗೌಡ ವಿ.ಹೆಚ್. ಅವರು ಚಾಲನೆ ನೀಡಿದರು.
ಬಳಿಕ ಮಾತನಾಡಿದ ಅವರು, ನಮ್ಮ ನರೇಗಾ ಯೋಜನೆಯಡಿ ಕೂಲಿಕಾರರಿಗೆ ಕೆಲಸ ನೀಡುವುದಲ್ಲದೇ, ಅವರ ಆರೋಗ್ಯವನ್ನು ಕಾಪಾಡುವುದು ನಮ್ಮ ಕರ್ತವ್ಯವಾಗಿದೆ. ಹಾಗಾಗಿ ತಾಲೂಕಿನ ಎಲ್ಲಾ ಗ್ರಾ.ಪಂ ವ್ಯಾಪ್ತಿಯಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರಗಳನ್ನು ಹಮ್ಮಿಕೊಂಡು ತಪಾಸಣೆಯನ್ನು ಮಾಡಲಾಗುತ್ತಿದೆ. ಪ್ರತಿಯೊಬ್ಬ ಕೂಲಿಕಾರರು ಈ ಶಿಬಿರದ ಪ್ರಯೋಜನವನ್ನು ಪಡೆದುಕೊಳ್ಳಬೇಕು.
ಜೊತೆಗೆ ನರೇಗಾ ಯೋಜನೆಯಡಿ ಈ ವರ್ಷ ಕೂಲಿ ಹಣವನ್ನು ಹೆಚ್ಚಿಸಲಾಗಿದೆ. ತಾಂತ್ರಿಕ ಸಹಾಯಕರು ನಿಮಗೆ ನೀಡಿದ ಆಳತೆಗನುಸಾರವಾಗಿ ನೀವು ಕೆಲಸ ಮಾಡಿದಾಗ ನಿಮಗೆ ಪೂರ್ತಿ ಕೂಲಿ ಹಣ ದೊರೆಯಲಿದೆ. ಕಡ್ಡಾಯವಾಗಿ ಎಲ್ಲರೂ ಯೋಜನೆಯ ಸದುಪಯೋಗ ಪಡೆದುಕೊಂಡು ಆರ್ಥಿಕವಾಗಿ ಸಬಲರಾಗಲು ತಿಳಿಸಿದರು.
ನಂತರ ಆರೋಗ್ಯ ಇಲಾಖೆ ಸಿಬ್ಬಂದಿ ಕೂಲಿಕಾರರ ಆರೋಗ್ಯ ತಪಾಸಣೆ ಮಾಡಿದರು. ಈ ವೇಳೆ ಬಿಪಿ, ಶುಗರ್ ಸೇರಿದಂತೆ ಕೆಮ್ಮು, ನೆಗಡಿ, ಜ್ವರ ಸೇರಿದಂತೆ ಹಲವು ಕಾಯಿಲೆಗಳ ತಪಾಸಣೆ ನಡೆಸಿ, ಮಾತ್ರೆಗಳನ್ನು ವಿತರಿಸಲಾಯಿತು.
ಈ ಸಂದರ್ಭದಲ್ಲಿ ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ಗುರಪ್ಪ, ತಾಪಂ ನರೇಗಾ ಸಿಬ್ಬಂದಿ ಚಂದ್ರಶೇಖರ್ ಹಿರೇಮಠ, ಆರೋಗ್ಯ ಇಲಾಖೆ ಸಿಬ್ಬಂದಿ ನಿರ್ಮಲಾ, ಜಯರಾಜ್, ಹನುಮಪ್ಪ ಕರಡಿ, ರಮೇಶ್, ಗೌರಮ್ಮ ಸೇರಿದಂತೆ ಗ್ರಾಪಂ ಸಿಬ್ಬಂದಿ, ಕಾಯಕ ಬಂಧುಗಳು, ಕೂಲಿಕಾರ್ಮಿಕರು ಹಾಜರಿದ್ದರು.