ಸುದ್ದಿಮೂಲ ವಾರ್ತೆ
ಮೈಸೂರು, ಸೆ.17:ರಾಜ್ಯ ಸರ್ಕಾರ ಬರಗಾಲ ಘೋಷಣೆ ಮಾಡಿದರೆ ಸಾಲದು. ಈಗಾಗಲೇ ರೈತರು ತತ್ತರಿಸಿ ಆತ್ಮಹತ್ಯೆ ಶರಣಾಗುತ್ತಿದ್ದಾರೆ. ಬರ ಪಟ್ಟಿಗೆ ಸೇರಿಸಿರುವ ಪ್ರದೇಶಗಳ ರೈತರ ಸಂಪೂರ್ಣ ಸಾಲವನ್ನುಮನ್ನಾ ಮಾಡಬೇಕು ಎಂದು ರೈತ ಸಂಘಟನೆಗಳ ಒಕ್ಕೂಟದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ಆಗ್ರಹಿಸಿದ್ದಾರೆ.
ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಳೆ ನಷ್ಟ ಪರಿಹಾರ ಪ್ರತಿ ಎಕರೆಗೆ 25 ಸಾವಿರ ರೂ. ಪರಿಹಾರ ನೀಡಬೇಕು. ಬರ ಕಾಮಗಾರಿಯಲ್ಲಿ ಸಂಕಷ್ಟದ ರೈತರಿಗೆ ಎನ್ ಆರ್ ಈ ಜಿ ಉದ್ಯೋಗ ಭರವಸೆ ಯೋಜನೆಯಡಿ ಅಕ್ಕಿ, ರಾಗಿ, ಗೋಧಿ, ಬೇಳೆ ವಿತರಿಸಬೇಕು. ಜಾನುವಾರಗಳ ಕುಡಿಯುವ ನೀರು ಮೇವು ಸೌಲಭ್ಯ ಪೂರೈಕೆ ಮಾಡಲು ಕೂಡಲೇ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.
ಇದೇ ವೇಳೆ, ರಾಜ್ಯ ಸರ್ಕಾರ ಕಾವೇರಿ ಜಲಾಶಯಗಳ ನೀರು ಖಾಲಿ ಮಾಡಿದ ಕಾರಣ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಭಾಗದ ರೈತರನ್ನು ಸಂಪೂರ್ಣವಾಗಿ ಬರಗಾಲಕ್ಕೆ ಒಳಗಾದ ಪ್ರದೇಶವೆಂದು ಘೋಷಣೆ ಮಾಡಿ ಪರಿಹಾರ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಹೇಳಿದರು.
ವಿಧಾನಸೌಧದ ಬಳಿ ಪ್ರತಿಭಟನೆ
ಸೆ. 30 ರ ಒಳಗಾಗಿ ಕಬ್ಬಿನ ಹೆಚ್ಚುವರಿ ದರ 150 ರೂ. ಬಾಕಿ ಕೂಡಿಸದಿದ್ದರೆ , ಪ್ರಸಕ್ತ ಸಾಲಿನ ಕಬ್ಬಿನ ಎಫ್ ಎಫ್ ಆರ್ ಪಿ ದರ ಏರಿಕೆ ಮಾಡದಿದ್ದರೆ. ಬೆಂಗಳೂರು ವಿಧಾನಸೌಧದ ಎದುರು ಕಬ್ಬು ಬೆಳೆಗಾರರ ನಿರಂತರ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ರಾಜ್ಯದ 30 ಲಕ್ಷ ಕಬ್ಬು ಬೆಳೆಗಾರರು ಬರಗಾಲದಿಂದ ಸಂಕಷ್ಟ ಎದುರಿಸುತ್ತಿದ್ದಾರೆ. ಕಬ್ಬು ಬೆಳೆ ಒಣಗುತ್ತಿದೆ ಶೇ. 40ರಷ್ಟು ಇಳುವರಿ ಕಡಿಮೆಯಾಗಿದೆ. ಕಬ್ಬಿಗಾಗಿ ಸಕ್ಕರೆ ಕಾರ್ಖಾನೆಗಳು ರೈತರಿಂದ ಖರೀದಿಸಲು ಪೈಪೋಟಿ ನಡೆಸುತ್ತಿದ್ದಾರೆ. ಸಕ್ಕರೆ ಉತ್ಪಾದನೆ ಕಡಿಮೆಯಾಗಿರುವ ಕಾರಣ ಕೇಂದ್ರ ಸರ್ಕಾರ ಸಕ್ಕರೆ ರಫ್ತು ನಿಷೇಧ ಹೇರಿದ್ದಾರೆ, ಆದರೆ, ಕಬ್ಬಿನ ಎಫ್ ಆರ್ ಪಿ ದರವನ್ನು ಕಳೆದ ವರ್ಷಕ್ಕಿಂತ ಕೇವಲ 100 ರೂ. ಮಾತ್ರ ಏರಿಕೆ ಮಾಡಿ 3150 ನಿಗದಿ ಮಾಡಿ ಅನ್ಯಾಯ ಮಾಡಿದೆ, ಸಕ್ಕರೆ ಕಾರ್ಖಾನೆಗಳು ಕಬ್ಬಿನಿಂದ ಎಥೆನಾಲ್ ಉತ್ಪಾದನೆ ಮಾಡಿ ಹೆಚ್ಚು ಲಾಭ ಗಳಿಸುತ್ತಿದ್ದಾರೆ ಎಂದರು.
ಆದರೆ, ಕಬ್ಬು ಬೆಳೆಗಾರರು ಬೆಲೆ ಕಡಿಮೆ ಎಂದು ಪ್ರತಿಭಟನೆ ನಡೆಸಿದಾಗ ರಾಜ್ಯ ಸರ್ಕಾರ ಎರಡು ಸಭೆ ನಡೆಸಿತ್ತು. ಯಾವುದೇ ನಿರ್ಧಾರ ಪ್ರಕಟಿಸಿಲ್ಲ. ಇನ್ನು 15 ದಿನ ಕಾದು ನೋಡುತ್ತೇವೆ. ನಿರ್ಲಕ್ಷ್ಯ ಮಾಡಿದರೆ ಹೋರಾಟದ ಮುಖಾಂತರ ಸರ್ಕಾರಕ್ಕೆ ಬಿಸಿ ಮುಟ್ಟಿಸಬೇಕಾಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮೇಕೆದಾಟು, ಬಿಳುಗುಂಡ್ಲು ಭಾಗದ ವಸ್ತು ಸ್ಥಿತಿಯ ಅರಿಯಲು ಕರ್ನಾಟಕ ಜಲ ಸಂರಕ್ಷಣ ಸಮಿತಿಯ ಹತ್ತು ಜನರ ಪರಣಿತರ ನಿಯೋಗ ಸದ್ಯದಲ್ಲಿಯೇ ಸ್ಥಳಕ್ಕೆ ಭೇಟಿ ನೀಡಿ ನೀರಿನ ಲಭ್ಯತೆ ,ರೈತರ ಬೆಳೆ ನಷ್ಟ ಅಂದಾಜು, ಅಧ್ಯಯನ ನಡೆಸಲಿದೆ ಅಂತಿಮ ವರದಿಯ ನಂತರ ಮಾಹಿತಿಯನ್ನು ಹಂಚಿಕೊಳ್ಳಲಾಗುವುದು ಎಂದು ಹೇಳಿದರು.
ಸರಳ ದಸರಾ ಇರಲಿ
ರೈತರು ಕೂಲಿ ಕಾರ್ಮಿಕರು ಬರಗಾಲದ ಬೇಗೆಯಲ್ಲಿರುವ ಕಾರಣ ರಾಜ್ಯ ಸರ್ಕಾರ ಸಾಂಪ್ರದಾಯಿಕ ಸರಳ ದಸರಾ ಆಚರಣೆ ಮಾಡುವುದು ಸೂಕ್ತ. ಹೊಟ್ಟೆಗೆ ಇಟ್ಟಿಲ್ಲ ಜುಟ್ಟಿಗೆ ಮಲ್ಲಿಗೆ ಹೂವು ಅನ್ನುವಂತಾಗಬಾರದು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಅತ್ತಹಳ್ಳಿ ದೇವರಾಜ್, ಬರಡನಪುರ ನಾಗರಾಜ್, ಲಕ್ಷ್ಮೀಪುರ ವೆಂಕಟೇಶ್, ಹೆಗ್ಗೂರು ರಂಗರಾಜ್,ಕಾಟೂರು ಮಹದೇವಸ್ವಾಮಿ, ಮಾರ್ಬಳ್ಳಿ ನೀಲಕಂಠಪ್ಪ ಇದ್ದರು.