ಸುದ್ದಿಮೂಲ ವಾರ್ತೆ
ತುಮಕೂರು,ನ.7: ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ಬಿಜೆಪಿ ಕಾರ್ಯಕರ್ತರ ತಂಡ, ತುಮಕೂರು ಜಿಲ್ಲೆಯಲ್ಲಿ ಬರ ಅಧ್ಯಯನ ಪ್ರವಾಸ ನಡೆಸಿತು.
ಜಿಲ್ಲೆಯ ಮಧುಗಿರಿ ತಾಲೂಕು ಕೊಡ್ಲಾಪುರ ಗ್ರಾಮದ ಜಮೀನಿಗೆ ಭೇಟಿ ನೀಡಿದ ತಂಡ, ಅಲ್ಲಿಯ ಶೇಂಗಾ, ಮುಸುಕಿನಜೋಳ ಬೆಳೆಯ ಪರಿಸ್ಥಿತಿಯನ್ನು ವೀಕ್ಷಿಸಿತು. ತುಮಕೂರು ಜಿಲ್ಲೆಯ ಎಲ್ಲ ಹತ್ತು ತಾಲೂಕುಗಳಲ್ಲಿ ಮಳೆ ಕೊರತೆಯಿಂದ ಬರ ಪರಸ್ಥಿತಿ ಎದುರಾಗಿದ್ದು, ಜಾನುವಾರುಗಳಿಗೆ ಮೇವು- ನೀರು ಅಭಾವ ಪರಿಸ್ಥಿತಿ ಎದುರಾಗಿದೆ. ಸೂಕ್ತ ಪರಿಹಾರಕ್ಕೆ ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯ ರೈತರು ತಂಡಕ್ಕೆ ಮನವಿ ಮಾಡಿದರು. ಬಳಿಕ ಮಾತನಾಡಿದ ಅವರು, ಜಿಲ್ಲೆಯಲ್ಲಿ ಇಬ್ಬರು ಸಚಿವರು ಇದ್ದರೂ ಕೈಗಾರಿಕೋದ್ಯಮಿಗಳ ಸಮಸ್ಯೆ ಆಲಿಸಿಲ್ಲ, ಬರ ವೀಕ್ಷಣೆ ಮಾಡಿಲ್ಲ. ಅನಗತ್ಯ ಉಚಿತ ಭಾಗ್ಯ ಕೊಟ್ಟು ಸರ್ಕಾರ ದಿವಾಳಿಯಾಗುತ್ತಿದೆ. ವಿದ್ಯುತ್ ಕಣ್ಣಾಮುಚ್ಚಾಲೆ, ತೆರಿಗೆ ಜಾಸ್ತಿ ಮಾಡಿ ಸಂಕಷ್ಟ ತಂದಿದ್ದಾರೆ ಎಂದು ಹರಿಹಾಯ್ದರು.