ಸುದ್ದಿಮೂಲ ವಾರ್ತೆ
ಶಿಡ್ಲಘಟ್ಟ, ಸೆ.28: ಜಗತ್ತಿನಲ್ಲಿ ಶಾಂತಿ, ಸೌಹಾರ್ದತೆ ನೆಲೆಸಲು ಅವತರಿಸಿದ ಪ್ರವಾದಿ ಮಹಮ್ಮದ್ ಪೈಗಂಬರ್ ಅವರ ಜನ್ಮದಿನಾಚರಣೆಯನ್ನು ರೇಷ್ಮೆಯ ನಗರ ಶಿಡ್ಲಘಟ್ಟದಲ್ಲಿ ಸಹಸ್ರಾರು ಮುಸ್ಲಿಂ ಬಾಂಧವರು ಶ್ರದ್ಧಾಭಕ್ತಿಯಿಂದ ಆಚರಿಸಿದರು.
ಇಡೀ ಜಗತ್ತಿನಲ್ಲಿ ಶಾಂತಿ ಸೌಹಾರ್ದತೆಯನ್ನು ನೆಲೆಸಲು ಅವತರಿಸಿದ ಪ್ರವಾದಿ ಮಹಮ್ಮದ್ ಪೈಗಂಬರ್ ಅವರ ಹುಟ್ಟು ಹಬ್ಬದ ಅಂಗವಾಗಿ ನಗರದ ಪ್ರಮುಖ ಬೀದಿಗಳನ್ನು ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು ಜೊತೆಗೆ ಕೆಲವಡೆ ಮೆಕ್ಕಾ ಮದೀನಾ ಸ್ತಬ್ಧಚಿತ್ರಗಳನ್ನು ಸಿದ್ಧಪಡಿಸಿ ಅದರ ಮೂಲಕ ಸಂಭ್ರಮವನ್ನು ವ್ಯಕ್ತಪಡಿಸಿದರು.
ಈದ್ ಮಿಲಾದ್ ಅಂಗವಾಗಿ ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ರೋಗಿಗಳಿಗೆ ಪೀರ್ ಝಾದಾ ಸೈಯದ್ ಮಝಹರ್ ಉಲ್ ಹಖ್ ಫಿದಾಉಲ್ ಲತೀಫಿ ಶಾ ಆಮೀರಿ ಅವರು ಹಣ್ಣು ಹಂಪಲಗಳನ್ನು ವಿತರಿಸಿ ಸಮಾಜದಲ್ಲಿರುವ ಪ್ರತಿಯೊಬ್ಬರು ಪ್ರವಾದಿ ಮೊಹ್ಮದ್ ಪೈಗಂಬರ್ ಅವರ ಜೀವನ ಆದರ್ಶಗಳನ್ನು ಅಳವಡಿಸಿಕೊಂಡು ಶಾಂತಿ, ಸೌಹಾರ್ದತೆಯನ್ನು ಸಾರಿ ಪರಸ್ಪರ ಪ್ರೀತಿ ವಿಶ್ವಾಸದಿಂದ ಬದುಕಬೇಕೆಂದು ಕರೆ ನೀಡಿದರು.
ನಗರದ ಕೋಟೆ ವೃತ್ತದಲ್ಲಿ ಪ್ರವಾದಿ ಮಹಮ್ಮದ್ ಪೈಗಂಬರ್ ಅವರ ಆರಾಧಕರು ಬೆಳಗಿನ ತಿಂಡಿ ಮಧ್ಯಾಹ್ನದ ಊಟದ ವ್ಯವಸ್ಥೆಯನ್ನು ಮಾಡುವ ಜೊತೆಗೆ ನಗರದ ಈದ್ಗಾ ಮೈದಾನದ ಬಳಿ ಸಿಹಿ ಪಾಯಸವನ್ನು ವಿತರಿಸಿ ಪ್ರವಾದಿ ಮಹಮ್ಮದ್ ಪೈಗಂಬರ್ ಅವರ ಹುಟ್ಟುಹಬ್ಬವನ್ನು ವಿಶಿಷ್ಟವಾಗಿ ಆಚರಿಸಿದರು.
ಸಂಪ್ರದಾಯದಂತೆ ನಗರದ ಮಿಲಾದ್ ಬಾಗ್ ಈದ್ಗಾ ಮೈದಾನದಲ್ಲಿ ಸಹಸ್ರಾರು ಮುಸ್ಲಿಮರು ಸಾಮೂಹಿಕವಾಗಿ ಪ್ರಾರ್ಥನೆ ಸಲ್ಲಿಸಿದರು ಜಾಮೀಯಾ ಮಸೀದಿಯ ಧರ್ಮಗುರು ಹಝರತ್ ಗುಲಾಂ ಜೀಲಾನಿ ಮಿಸ್ಬಾಹೀ ಅವರು ಪ್ರವಾದಿ ಜೀವನ ಚರಿತ್ರೆ ಕುರಿತು ಉಪನ್ಯಾಸ ನೀಡಿದರು.
ಕಾರ್ಯಕ್ರಮದ ಮುನ್ನ ನಗರದ ಪ್ರಮುಖ ಬೀದಿಗಳನ್ನು ಹಸಿರು ಬಣ್ಣದ ಧ್ವಜಗಳನ್ನು ಅಲಂಕರಿಸಲಾಗಿತ್ತು ಯುವಕರು ತಮ್ಮ ತಮ್ಮ ದ್ವಿಚಕ್ರ ವಾಹನಗಳನ್ನು ಹಸಿರು ಬಣ್ಣದ ಬಾವುಟಗಳಿಂದ ಶೃಂಗರಿಸಿದರು ನಗರದ ಟಿ.ಬಿ.ರಸ್ತೆಯಲ್ಲಿ ಮುಸ್ಲಿಂ ಯುವಕರು ಪ್ರತಿಯಿಬ್ಬರಿಗೆ ಸಿಹಿ ಹಂಚಿಕೆ ಮಾಡಿದರು.