ಸುದ್ದಿಮೂಲ ವಾರ್ತೆ
ರಾಮನಗರ,ಜೂ.19: ಇಲ್ಲಿನ ನಗರಸಭಾ ಸದಸ್ಯರ ಪೈಕಿ ಒಟ್ಟು 11 ಮಂದಿ ಸ್ಥಾಯಿ ಸಮಿತಿಗೆ ಆಯ್ಕೆಯಾಗಿದ್ದಾರೆ.
ನಗರಸಭೆಯ ಅಧ್ಯಕ್ಷೆ ಬಿ.ಕೆ.ಪವಿತ್ರ ಅವರ ಅಧ್ಯಕ್ಷತೆಯಲ್ಲಿ ನಗರಸಭೆಯ ಪ್ರಶಸ್ತಿ ಭವನದಲ್ಲಿ ನಡೆದ ವಿಶೇಷ ಸಭೆಯಲ್ಲಿ ಸ್ಥಾಯಿ ಸಮಿತಿ ಸದಸ್ಯರ ಆಯ್ಕೆ ಪ್ರಕ್ರಿಯೆ ನಡೆಯಿತು.
ಎರಡನೇ ವಾರ್ಡಿನ ಸದಸ್ಯ ಶಿವಸ್ವಾಮಿ, 4ನೇ ವಾರ್ಡಿನ ಸದಸ್ಯೆ ತೇಜಸ್ವೀನಿ, 10ನೇ ವಾರ್ಡ್ ಸದಸ್ಯೆ, ಮಜ್ಹತ್ ಜಹಾ, 14ನೇ ವಾರ್ಡ್ ಸದಸ್ಯ ನಿಜಾಮುದ್ದೀನ್ ಷರೀಫ್, 15ನೇ ವಾರ್ಡ್ ಸದಸ್ಯೆ ಅಸ್ಮಾಬಾನು, 17ನೇ ವಾರ್ಡ್ ಸದಸ್ಯೆ ಗಿರಿಜಮ್ಮ, 20ನೇ ವಾರ್ಡ್ ಸದಸ್ಯೆ ಆಯಿಷಾ ಬಾನು, 22ನೇ ವಾರ್ಡ್ ಸದಸ್ಯ ಅಜ್ಮತ್ ಉಲ್ಲಾ ಖಾನ್, 25ನೇ ವಾರ್ಡ್ ಸದಸ್ಯ ಮುತ್ತುರಾಜು, 26ನೇ ವಾರ್ಡ್ ಸದಸ್ಯ ನರಸಿಂಹ ಮೂರ್ತಿ, 29ನೇ ವಾರ್ಡ್ ಸದಸ್ಯ ಸೈಯದ್ ಫಯಾಜ್ ಅವರ ಹೆಸರುಗಳನ್ನು ಘೋಷಣೆ ಮಾಡಲಾಗಿದೆ.
ಅನುದಾನ ಕ್ರಿಯಾ ಯೋಜನೆಗೆ ಅನುಮೋದನೆ
15ನೇ ಹಣಕಾಸಿನ ಯೋಜನೆಯ 4.40 ಕೋಟಿ ಹಾಗೂ ಪರಿಶಿಷ್ಟ ಜಾತಿ-ಪಂಗಡದ ಎಸ್ಸಿಪಿ 34 ಲಕ್ಷ ರೂ. ಅನುದಾನ ಕ್ರಿಯಾಯೋಜನೆಗೆ ವಿಶೇಷ ಸಭೆಯಲ್ಲಿ ಅನುಮೋದನೆ ದೊರೆಯಿತು.
ಈ ವೇಳೆ ಲೆಕ್ಕ ಅಧೀಕ್ಷಕರಾದ ಶಿವಣ್ಣ ಮಾತನಾಡಿ, ನಗರಸಭೆಯ ಖಾಯಂ ಸಿಬ್ಬಂದಿಗೆ ಪ್ರತಿ ತಿಂಗಳು 33 ಲಕ್ಷ ಸಂಬಳ ಸರ್ಕಾರದಿಂದ ವೇತನ ಪಾವತಿಯಾಗುತ್ತಿದೆ. ಆದರೆ ಏಪ್ರಿಲ್ನಿಂದ 7ನೇ ವೇತನ ಆಯೋಗದ ಪೇಸ್ಕೇಲ್ ಜಂಪ್ ಆಗುವವರೆಗೆ ಶೇ 17 ರಷ್ಟು ಮೊತ್ತವನ್ನು ನಗರಸಭೆಯ ಸ್ವಂತ ಮೂಲ ಹಣದಲ್ಲಿ ಭರಿಸುವಂತೆ ಸರ್ಕಾರ ಆದೇಶಿಸಿದೆ. ರಾಮನಗರ ನಗರಸಭೆಗೆ ಸುಮಾರು ಆಸ್ತಿ ತೆರಿಗೆ ಸೇರಿದಂತೆ ಒಟ್ಟು 6 ಕೋಟಿ ಸ್ಥಳೀಯ ಸಂಪನ್ಮೂಲ ಸಂಗ್ರಹವಾಗಲಿದೆ. ಅದರಲ್ಲಿ ಶೇ17ರಷ್ಟು ಅಂದರೆ ಸುಮಾರು 7 ಲಕ್ಷ ರೂ. ವೇತನಕ್ಕೆ ಪಾವತಿಯಾಗಬೇಕಾಗಿದೆ ಎಂದು ಸಭೆಗೆ ಮಾಹಿತಿ ಕೊಟ್ಟರು.
ಇದಕ್ಕೆ ಪ್ರತಿಕ್ರಿಯಿಸಿದ ಸದಸ್ಯ ಕೆ.ಶೇಷಾದ್ರಿ, ನಗರದ ಜನರ ಹಿತದೃಷ್ಟಿಯಿಂದ ಅದು ಸಾಧ್ಯವಿಲ್ಲ. ಸಭೆಯ ನಿರ್ಣಯ ಕೈಗೊಂಡಿರುವ ಬಗ್ಗೆ ಸರ್ಕಾರಕ್ಕೆ ಪತ್ರ ಬರೆಯುವಂತೆ ಅಧಿಕಾರಿಗಳಿಗೆ ಸಲಹೆ ನೀಡಿದರು.
ಕ್ಷೇತ್ರದ ಶಾಸಕರಾಗಿ ಇಕ್ಬಾಲ್ ಹುಸೇನ್ ಆಯ್ಕೆ ಯಾಗಿದ್ದು ಪೌರಸನ್ಮಾನ ಮಾಡುವ ಸಂಬಂಧ ಕಾರ್ಯಕ್ರಮ ಆಯೋಜಿಸುವುದು, ನಗರದ ಶಕ್ತಿದೇವತೆ ಶ್ರೀ ಚಾಮುಂಡೇಶ್ವರಿ ಅಮ್ಮನವರ ಕರಗ ಮಹೋತ್ಸವ ಸಮಯದಲ್ಲಿ ನಗರ ವ್ಯಾಪ್ತಿಯಲ್ಲಿ ಸ್ವಚ್ಚತೆಯ ಬಗ್ಗೆ ಗಮನ ಹರಿಸುವಂತೆ ಸದಸ್ಯರು ಅಧಿಕಾರಿಗಳಿಗೆ ಸಲಹೆ ಕೊಟ್ಟರು.
ಸಭೆೆಯಲ್ಲಿ ನಗರಸಭೆಯ ಉಪಾಧ್ಯಕ್ಷ ಸೋಮಶೇಖರ್, ಪೌರಾಯುಕ್ತ ನಾಗೇಶ್ ಉಪಸ್ಥಿತರಿದ್ದರು.