ಸುದ್ದಿಮೂಲ ವಾರ್ತೆ
ಬೆಂಗಳೂರು, ಜು 28 : ಸಾರ್ವಜನಿಕರಿಗೆ ಆರಾಮದಾಯಕ ಪರಿಸರ- ಸ್ನೇಹಿ ಪ್ರಯಾಣವನ್ನು ಕಲ್ಪಿಸಲು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು 921 ಟಾಟಾ ಎಲೆಕ್ಟ್ರಿಕ್ ಬಸ್ಸುಗಳನ್ನು ರಸ್ತೆಗೆ ಇಳಿಸಲಿದೆ. ಪ್ರಯಾಣಿಕರು ಶೀಘ್ರದಲ್ಲೇ ಆರಾಮದಾಯಕ ಮತ್ತು ಪರಿಸರ ಸ್ನೇಹಿ ಪ್ರಯಾಣವನ್ನು ಆನಂದಿಸಲು ಸಾಧ್ಯವಾಗಲಿದೆ.
ಟಾಟಾ ಮೋಟಾರ್ಸ್ ಎಲೆಕ್ಟ್ರಿಕ್ ಬಸ್ ನ ಪ್ರಥಮ ಪ್ರೊಟೊಟೈಪ್ ಮಾದರಿ ಬಸ್ ಇದಾಗಿದೆ. ಬಿ.ಎಂ.ಟಿ.ಸಿ ಯ ನೂತನ ವಿದ್ಯುತ್ ವಾಹನಗಳು ಸಂಚಾರ ಮಾಡಲಿದ್ದು, ಕೊಂಚ ಮಟ್ಟಿಗೆ ಮಾಲಿನ್ಯ ರಹಿತ ನಗರದ ಅನುಭವವನ್ನು ಪ್ರಯಾಣಿಕರು ಪಡೆಯಲಿದ್ದಾರೆ. ನೂತನ 921 ಎಲೆಕ್ಟ್ರಿಕ್ ಬಸ್ಸುಗಳನ್ನು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ವರ್ಷದೊಳಗಾಗಿ ಹಂತ-ಹಂತವಾಗಿ ಸೇರ್ಪಡೆ ಮಾಡಲಿದೆ. ಈ ನೂತನ 921 ಟಾಟಾ ವಿದ್ಯುತ್ ವಾಹನಗಳನ್ನು ಭಾರತ ಸರ್ಕಾರದ ಫೇಮ್-2 ಯೋಜನೆಯಡಿಯಲ್ಲಿ ಜಿ.ಸಿ.ಸಿ ಆಧಾರದ ಮೇಲೆ ಕಾರ್ಯಾಚರಣೆ ನಡೆಸಲಿದೆ.
ಬಸ್ ನ ವಿಶೇಷತೆಗಳು : ಈ ಬಸ್ಸುಗಳು 12.0 ಮೀಟರ್ ಉದ್ದದ,ಎಲೆಕ್ಟ್ರಿಕ್ ಬಸ್ಸುಗಳಾಗಿರುತ್ತದೆ ಹಾಗೂ ಲೋ ಫ್ಲೋರ್ ಮತ್ತು 400 mm ಎತ್ತರ ಇರಲಿದೆ.
ಈ ಬಸ್ 35 ಪ್ರಯಾಣಿಕರಿಗೆ ಆರಾಮದಾಯಕ ಆಸನ ಮತ್ತು ಅದರ ಕೆಳ-ಮಹಡಿ ಸಂರಚನೆಯೊಂದಿಗೆ ಸುಲಭ ಪ್ರವೇಶ ಮತ್ತು ಹೊರಹೋಗುವಿಕೆಯಂತಹ ವೈಶಿಷ್ಟ್ಯಗಳನ್ನು ಹೊಂದಿದೆ.
ಪ್ರತಿ ಬಸ್ಸನ್ನು45 ನಿಮಿಷ ಚಾರ್ಜಿಂಗ್ ಮಾಡಲಾಗುವುದು.
ಈ ಎಲೆಕ್ಟ್ರಿಕ್ ಬಸ್ಸುಗಳು ಮುಂದಿನ ದಿನಗಳಲ್ಲಿ ಕಾರ್ಯಾಚರಣೆ ನಡೆಸಲು 10 ಘಟಕಗಳನ್ನು ಗುರುತಿಸಲಾಗಿದೆ. ಶಾಂತಿನಗರ, ಜಯನಗರ, ಹೆಣ್ಣೂರು, ದೀಪಾಂಜಲಿನಗರ.ರಾಜರಾಜೇಶ್ವರಿನಗರ, ಪೀಣ್ಯ 2ನೇ ಹಂತ, ಜಿಗಣಿ, ಕೆ.ಆರ್.ಪುರಂ, ಸೀಗೇಹಳ್ಳಿ, ಹೊಸಕೋಟೆ ಮಾರ್ಗಗಳಲ್ಲಿ ಕಾರ್ಯಾಚರಣೆ ಮಾಡಲಿದೆ.
ಪ್ರಾಯೋಗಿಕ ಕಾರ್ಯಚರಣೆ : 96-ಎ ಮಾರ್ಗದಲ್ಲಿ ಕೆಂಪೇಗೌಡ ಬಸ್ ನಿಲ್ದಾಣ, ಸುಜಾತ ಟಾಕೀಸ್, ಇಂಡಸ್ಟ್ರಿಯಲ್ ಟೌನ್ ರಾಜಾಜಿನಗರ, ಹಾವನೂರು ವೃತ್ತ, ಮೋದಿ ಆಸ್ಪತ್ರೆ, ಹರಿಶ್ಚಂದ್ರ ಘಾಟ್, ಸೆಂಟ್ರಲ್, ಕೆಂಪೇಗೌಡ ಬಸ್ ನಿಲ್ದಾಣಕ್ಕೆ ಮರಳಲಿದೆ.