ಗ್ಯಾರಂಟಿ ಹೊರೆ: ಮದ್ಯಪ್ರಿಯರಿಗೆ ಬರೆ
ಸುದ್ದಿಮೂಲ ವಾರ್ತೆ
ಬೆಂಗಳೂರು, ಜೂ.10: ಚುನಾವಣೆ ಸಂದರ್ಭದಲ್ಲಿ ನೀಡಲಾದ ಗ್ಯಾರಂಟಿಗಳನ್ನು ಈಡೇರಿಸಲು ಮುಂದಾಗಿರುವ ಸರ್ಕಾರ ಅದರ ಭಾರವನ್ನು ಜನರ ಮೇಲೆಯೇ ಬೇರೆ ಬೇರೆ ರೀತಿಯಲು ಹಾಕಲು ಮುಂದಾಗಿದೆ.
ಸರ್ಕಾರಕ್ಕೆ ನಿಶ್ಚಿತ ಆದಾಯ ನೀಡುವ ಮದ್ಯಪ್ರಿಯರಿಗೆ ಗ್ಯಾರಂಟಿ ಹೊರೆ ಬಿದ್ದಿದೆ. ಸರ್ಕಾರ ಸದ್ದಿಲ್ಲದೇ ಮದ್ಯದ ಬೆಲೆ ಏರಿಕೆ ಮಾಡಿದ್ದು, ಬಿಯರ್ ಗೆ 10 ರೂ. ಏರಿಕೆ ಮಾಡಲಾಗಿದೆ. ಮತ್ತೊಂದೆಡೆ ಜೂನ್ ತಿಂಗಳ ವಿದ್ಯುತ್ ಬಿಲ್ ದುಪ್ಪಟ್ಟು ಬಂದಿದ್ದು, ಜನ ಗೊಂದಲಕ್ಕೆ ಒಳಲಾಗುತ್ತಿದ್ದಾರೆ.
ಬಿಯರ್ ಮೇಲೆ ಶೇ. 20 ರಷ್ಟು ತೆರಿಗೆ ವಿಧಿಸಲಾಗಿದೆ. ಆ ಮೂಲಕ ಬಿಯರ್ ಮಾರಾಟದಿಂದ ಸರ್ಕಾರದ ಬೊಕ್ಕಸಕ್ಕೆ ಅಂದಾಜು 500 ಕೋಟಿ ರೂ. ಹೆಚ್ಚುವರಿಯಾಗಿ ಬರಲಿದೆ ಎಂದು ನಿರೀಕ್ಷಿಸಲಾಗಿದೆ. ಇದರ ಜೊತೆಗೆ ಇತರ ಮದ್ಯದ ಮೇಲೂ ತೆರಿಗೆ ವಿಧಿಸಲಾಗಿದೆ. ಬಿಯರ್ ಹೊರತು ಪಡಿಸಿ ಇತರ ಮದ್ಯದ ಬೆಲೆಯನ್ನು ಶೇ. 15 ರಷ್ಟು ಹೆಚ್ಚಿಸಲಾಗಿದೆ. ಇದರಿಂದ ರಾಜ್ಯದ ಬೊಕ್ಕಸಕ್ಕೆ 3 ಸಾವಿರ ಕೋಟಿ ರೂ. ಸಂಗ್ರಹವಾಗಲಿದೆ. ರಾಜ್ಯ ಸರ್ಕಾರದ ಈ ನಡೆಗೆ ಮದ್ಯಪ್ರಿಯರು ಹಾಗೂ ಮದ್ಯದ ಸಂಘಗಳು ವಿರೋಧಿಸಿ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿವೆ.
ಕಿಂಗ್ ಫಿಶರ್, ಟ್ಯೂಬರ್ಗ್ 650 ಎಂಎಲ್ ಬಿಯರ್ ಗೆ 160 ರೂ.ನಿಂದ 170 ರೂ.ಗೆ ಏರಿಕೆಯಾಗಿದೆ. ಮ್ಯಾಕ್ ಡ್ಯೂನಾಲ್ಡ್ 180 ಎಂಎಲ್ 198 ರಿಂದ 220 ರೂ., ಟ್ಯೂಬರ್ಗ್ 160 ರಿಂದ 170 ರೂ.ಗೆ ಹೆಚ್ಚಳವಾಗಿದೆ. ಬಡ್ವೈಸರ್ 200 ರಿಂದ 220 ರೂ., ಪವರ್ ಕೂಲ್ 100 ರಿಂದ 110 ರೂ. ಹಾಗೂ ಬಕಾರ್ಡಿ 275 ಎಂಎಲ್ಗೆ 90 ರಿಂದ 105 ರೂ. ಏರಿಕೆಯಾಗಿದೆ.
ಲೈಸೆನ್ಸ್ ಶುಲ್ಕವೂ ಹೆಚ್ಚಳ? :
ಮದ್ಯದ ಬೆಲೆ ಏರಿಕೆಯಷ್ಟೇ ಅಲ್ಲ, ಮದ್ಯದ ಲೈಸೆನ್ಸ್ ಶುಲ್ಕವನ್ನೂ ಸಹ ಹೆಚ್ಚಿಸಲಾಗಿದೆ. ಲಿಕ್ಕರ್ ಲೈಸೆನ್ಸ್ ಶುಲ್ಕವನ್ನು ಶೇ 25 ರಷ್ಟು ಹೆಚ್ಚಿಸಲು ಸರ್ಕಾರ ಮುಂದಾಗಿದೆ. 2016 ರಿಂದ ಲಿಕ್ಕರ್ ಲೈಸೆನ್ಸ್ ದರ ಹೆಚ್ಚಿಸಿಲ್ಲ. ಹೀಗಾಗಿ ಶೇ. 25 ರಷ್ಟು ಹೆಚ್ಚಳಕ್ಕೆ ಸರ್ಕಾರ ಚಿಂತನೆ ನಡೆಸಿದೆ ಎಂದು ಹೇಳಲಾಗುತ್ತಿದೆ. ಇನ್ನು 2023-24 ರಲ್ಲಿ ಸರ್ಕಾರ ಈಗಾಗಲೇ 35 ಸಾವಿರ ಕೋಟಿ ರೂ. ಆದಾಯದ ಟಾರ್ಗೆಟ್ ಮಾಡಲಾಗಿದೆ. 39 ಸಾವಿರ ಕೋಟಿ ರೂ. ಸಂಗ್ರಹಿಸುವ ಗುರಿ ಇಟ್ಟುಕೊಂಡಿದೆ.
ವಿದ್ಯುತ್ ಬಿಲ್ ದ್ವಿಗುಣ:
ಗೃಹ ಜ್ಯೋತಿಗಾಗಿ ಕಾಯುತ್ತಿರುವವರಿಗೆ ವಿದ್ಯುತ್ ಪ್ರಸರಣ ಕಂಪನಿಗಳು ಬರೆ ಎಳೆದಿದೆ. ಜನರಿಗೆ ಒಂದೇ ತಿಂಗಳಲ್ಲಿ ದ್ವಿಗುಣ ವಿದ್ಯುತ್ ಬಿಲ್ ಬಂದಿದೆ. ರಾಜ್ಯದ ಎಲ್ಲಾ ವಿದ್ಯುತ್ ಪ್ರಸರಣ ಕಂಪನಿಗಳು ವಿದ್ಯುತ್ ದರವನ್ನ ಏರಿಕೆ ಮಾಡುವ ಮೂಲಕ ಸಾರ್ವಜನಿಕರಿಗೆ ಹೊರೆ ಹಾಕಿದೆ. ವಿದ್ಯುತ್ ಬಿಲ್ ಏರಿಕೆಯಾಗಿರುವುದರ ಬಗ್ಗೆ ಜನಸಾಮಾನ್ಯರು ಸಾಮಾಜಿಕ ಜಾಲತಾಣಗಳ ಮೂಲಕ ಆಕ್ರೋಶ ಹೊರಹಾಕುತ್ತಿದ್ದಾರೆ.
ಕಳೆದ ತಿಂಗಳ ಬಿಲ್ಗೆ ಹೋಲಿಸಿದರೆ ದುಪ್ಪಟ್ಟು ಏರಿಕೆಯಾಗಿದೆ. ಇನ್ನು ವಿದ್ಯುತ್ ಹೊಂದಾಣಿಕೆ ದರ, ಹಾಗೂ ಹೆಚ್ಚುವರಿ ಶುಲ್ಕದ ಹೆಸರಿನಲ್ಲಿ ಬಿಲ್ ಏರಿಕೆಯಾಗಿದ್ದು, ಬಿಲ್ ಗಳಲ್ಲಿ ಬಾಕಿ ಮೊತ್ತ ಎಂದು ನಮೂದಿಸಿ ಹೆಚ್ಚುವರಿ ಹಣ ವಸೂಲಿಗೆ ಇಳಿದಿದ್ದಾರೆ. ಇನ್ನು ಏಪ್ರಿಲ್ ತಿಂಗಳಿನಿಂದಲೇ ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗ ವಿದ್ಯುತ್ ದರ ಏರಿಕೆ ಮಾಡಿತ್ತು. ಇದಕ್ಕೆ ಚುನಾವಣೆ ಇರುವ ಹಿನ್ನಲೆ ಬಿಜೆಪಿ ಸರ್ಕಾರ ತಡೆ ಹಿಡಿದಿತ್ತು. ಈಗ ಹೊಸ ಸರ್ಕಾರ ಬರುತ್ತಿದ್ದಂತೆ ಏಪ್ರಿಲ್ ಮೇ ತಿಂಗಳ ಏರಿಕೆ ಮೊತ್ತವನ್ನ ಒಮ್ಮೆಗೆ ಬಿಲ್ ನಲ್ಲಿ ಸೇರಿಸಿದ್ದು, ಬಿಲ್ ನಲ್ಲಿ ಹಳೆ ಬಾಕಿ ಮೊತ್ತವೆಂದು ನಮೂದಿಸಲಾಗಿದೆ.
ಜೂನ್ 1ರಿಂದಲೇ ವಿದ್ಯುತ್ ದರ ಹೆಚ್ಚಳ ಜಾರಿ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿತ್ತು. ಇದೀಗ ಹೊಸ ಪರಿಷ್ಕೃತ ವಿದ್ಯುತ್ ದರ ಜೂನ್ 1ರಿಂದಲೇ ಜಾರಿ ಆಗಲಿದೆ ಎಂದು ಹೇಳಿತ್ತು. ಏಪ್ರಿಲ್ 1ರಿಂದ ಹೊಸ ದರ ಅನ್ವಯ ಎಂದು ಕರ್ನಾಟಕ ವಿದ್ಯುತ್ಚ್ಛಕ್ತಿ ನಿಯಂತ್ರಣ ಆಯೋಗ (ಕೆಇಆರ್ಸಿ) ಹೇಳಿತ್ತು. ಚುನಾವಣೆ ಘೋಷಣೆ ಹಿನ್ನೆಲೆ ದರ ಹೆಚ್ಚಳ ಆದೇಶಕ್ಕೆ ತಡೆಬಿದ್ದಿತ್ತು. ಇದೀಗ ಹಳೆ ಬಾಕಿ ಮೊತ್ತವನ್ನ ಸೇರಿಸಿ ಜನರಿಗೆ ದುಪ್ಪಟ್ಟು ಬಿಲ್ ನೀಡುವ ಮೂಲಕ ಬರೆ ಎಳೆದಿದ್ದಾರೆ.
ಕೆಇಆರ್ಸಿ ನಿರ್ಧಾರ
ವಿದ್ಯುತ್ ಬಿಲ್ ಹೆಚ್ಚು ಬರುತ್ತಿರುವ ಬಗ್ಗೆ ಸಾರ್ವಜನಿಕರು ದೂರುತ್ತಿದ್ದಾರೆ ಎಂಬ ಸುದ್ದಿಗಾರರ ಪ್ರಶ್ನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮೈಸೂರಿನಲ್ಲಿ ಶನಿವಾರ ಪ್ರತಿಕ್ರಿಯೆ ನೀಡಿದ್ದಾರೆ. ‘ವಿದ್ಯುತ್ ದರ ನಿಯಂತ್ರಣ ಮಾಡುವ ಕೆಇಆರ್ಸಿ ಪ್ರತಿ ವರ್ಷ ಮಾರ್ಚ್ ಅಥವಾ ಏಪ್ರಿಲ್ನಲ್ಲಿ ವಿದ್ಯುತ್ ದರ ಪರಿಷ್ಕರಣೆ ಮಾಡಿ ಜೂ.1 ರಿಂದ ಜಾರಿ ಮಾಡುತ್ತಾರೆ. ನಾವು ಅಧಿಕಾರಕ್ಕೆ ಬರುವ ಮುನ್ನವೇ ಇದು ಆಗಿದೆ. ಮಾರ್ಚ್ 29ಕ್ಕೆ ನೀತಿ ಸಂಹಿತೆ ಜಾರಿಯಾಗಿ ತಡೆಹಿಡಿದಿದ್ದರು ಎಂದರು.