ಸುದ್ದಿಮೂಲ ವಾರ್ತೆ
ಬೆಂಗಳೂರು, ನ.15: ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ತಮ್ಮ ಮನೆಗೆ ದೀಪಾವಳಿ ವಿದ್ಯುತ್ ಅಲಂಕಾರಕ್ಕೆ ವಿದ್ಯುತ್ ಕಳ್ಳತನ ಮಾಡಿದ್ದಾರೆ ಎಂದು ಆರೋಪಿಸಿ ಬೆಸ್ಕಾಂನಿಂದ ಎಫ್ಐಆರ್ ದಾಖಲಿಸಲಾಗಿದೆ. ಇದು ಜೆಡಿಎಸ್ ಮತ್ತು ಕಾಂಗ್ರೆಸ್ ಮಧ್ಯೆ ವಾಕ್ಸಮರಕ್ಕೆ ಕಾರಣವಾಗಿದೆ.
ಕುಮಾರಸ್ವಾಮಿ ಅವರ ಜೆಪಿ ನಗರ ನಿವಾಸಕ್ಕೆ ದೀಪಾಲಂಕಾರಕ್ಕೆ ನೇರವಾಗಿ ವಿದ್ಯುತ್ ಕಂಬದಿಂದ ಅಕ್ರಮವಾಗಿ ವಿದ್ಯುತ್ ಸಂಪರ್ಕ ಪಡೆದಿದ್ದಾರೆ ಎಂದು ಬೆಸ್ಕಾಂ ಎಇಇ ಪ್ರಶಾಂತ್ ಕುಮಾರ್ ಅವರು ನೀಡಿದ ದೀರಿನ ಮೇರೆಗೆ ಜಯನಗರ ಜಾಗೃತ ದಳ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಇದಕ್ಕೆ ಪ್ರತಿಕ್ರಿಯಿಸಿದ್ದ ಕುಮಾರಸ್ವಾಮಿ ನಾನು ತೋಟದ ಮನೆಯಲ್ಲಿ ಇದ್ದಾಗ ಅಚಾತುರ್ಯದಿಂದ ಈ ಘಟನೆ ನಡೆದಿದೆ. ಬೆಸ್ಕಾಂನವರು ನೋಟಿಸ್ ನೀಡಿದರೆ ದಂಡ ಕಟ್ಟಲು ನಾನು ಸಿದ್ಧ ಎಂದು ತಪ್ಪೊಪ್ಪಿಕೊಂಡಿದ್ದರು.
ಜೆಡಿಎಸ್ ಕಚೇರಿ ಗೋಡೆಗಳ ಮೇಲೆ ಪೋಸ್ಟರ್:
ಇದರ ಬೆನ್ನಲ್ಲೇ ಮಂಗಳವಾರ ರಾತ್ರಿ ಜೆಡಿಎಸ್ ಕಚೇರಿಯ ಗೋಡೆಗಳ ಮೇಲೆ ‘ಕರೆಂಟ್ ಕಳ್ಳ ಕುಮಾರಸ್ವಾಮಿ’, ‘ಕರೆಂಟ್ ಕದ್ದರೂ ಕುಮಾರಸ್ವಾಮಿ ಪ್ರಾಮಾಣಿಕತೆ ಮೆಚ್ಚಲೇಬೇಕು’ ಎಂಬ ಪೋಸ್ಟರ್ಗಳನ್ನು ಅಂಟಿಸಿರುವುದು ವಿವಾದಕ್ಕೆ ಕಾರಣವಾಗಿದೆ. ಇದು ಗಮನಕ್ಕೆ ಬಂದ ಕೂಡಲೇ ಪೊಲೀಸರು ಪೋಸ್ಟರ್ಗಳನ್ನು ತೆರವುಗೊಳಿಸಿದ್ದಾರೆ.
ಕುಮಾರಸ್ವಾಮಿ ಆಕ್ರೋಶ:
ಕೀಳು ಅಭಿರುಚಿಯ ಪೋಸ್ಟರ್ಗಳನ್ನು ಅಂಟಿಸಿರುವುದಕ್ಕೆ ಜೆಡಿಎಸ್ ಸಾಮಾಜಿಕ ಜಾಲತಣದ ಮೂಲಕ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದೆ.
ಕೊಳಕು ಮಂಡಲ ಕಾಂಗ್ರೆಸ್ ಪಕ್ಷಕ್ಕೆ ಅರ್ಜೆಂಟಾಗಿ ಜನರ ಗಮನ ಬೇರೆಡೆಗೆ ಸೆಳೆಯುವ ತುರ್ತು ಇತ್ತು. ಕಳೆದೊಂದು ವಾರದಿಂದ ಕುಮಾರಸ್ವಾಮಿ ಅವರು ನಡೆಸಿದ ಸರ್ಜಿಕಲ್ ಸ್ಟ್ರೈಕ್ʼಗೆ ಕೈ ಪಡೆ ಪತರಗುಟ್ಟಿ ಹೋಗಿತ್ತು. ಅವರ ಭಾನುವಾರದ ಮಾಧ್ಯಮಗೋಷ್ಠಿ ಒಂದರಿಂದಲೇ ಅದರ ನವರಂಧ್ರಗಳು ಆಸ್ಫೋಟಗೊಂಡಿವೆ ಎಂದು ಹೇಳಿದೆ.
ಕುಮಾರಸ್ವಾಮಿ ಅವರು ಸ್ಪಷ್ಟನೆ ಕೊಟ್ಟ ಮೇಲೂ ಕಾಂಗ್ರೆಸ್ ವಿಕೃತಿ ಮಿತಿಮೀರಿದೆ. ಬೆಸ್ಕಾಂ ವಿದ್ಯುತ್ ವೇಗದಲ್ಲಿ ಎಫ್ ಐಆರ್ ದಾಖಲಿಸಿದೆ. ಕುಮಾರಸ್ವಾಮಿ ಅವರು ತಿಹಾರ್ ಜೈಲಿಗೆ ಹೋಗುವ ತಪ್ಪೇನೂ ಮಾಡಿಲ್ಲ. ಈಡಿ, ಸಿಬಿಐ, ಐಟಿ ಅವರ ಬೆನ್ಹತ್ತಿಲ್ಲ. ಪುಡಿರೌಡಿ ‘ಕಿಡಿಗೇಡಿಕುಮಾರ’ನ ಕೈಚಳಕಕ್ಕೆ ಹೆದರುವ ಪ್ರಶ್ನೆಯೂ ಇಲ್ಲ ಎಂದು ಟಾಂಗ್ ನೀಡಲಾಗಿದೆ.
ಜೆಡಿಎಸ್ ಹತಾಶೆಯ ಟೀಕೆ
“ಕೊಳಕು ಮಂಡಲ ಎಂಬ ಟೀಕೆಯನ್ನು ಯಾರೋ ಕಾರ್ಯಕರ್ತರು ಅಥವಾ ಸಿಬ್ಬಂದಿ ಮಾಡಿರಬಹುದು. ಇಂತಹ ಟೀಕೆ ಸರಿಯಲ್ಲ. ಹತಾಶೆಯಲ್ಲಿ ಟೀಕೆ ಮಾಡಿರುತ್ತಾರೆ. ಈ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ” ಎಂದು ಡಿಸಿಎಂ ಡಿ ಕೆ ಶಿವಕುಮಾರ್ ಅವರು ತಿಳಿಸಿದರು.
ಜೆಡಿಎಸ್ ಪಕ್ಷದ ಎಕ್ಸ್ ಖಾತೆಯಲ್ಲಿ ನಿಮ್ಮನ್ನು ಕೊಳಕು ಮಂಡಲ ಹಾವು ಎಂಬ ವೈಯಕ್ತಿಕ ಟೀಕೆ ಮಾಡಲಾಗಿದೆ ಎಂದು ಮಾಧ್ಯಮಗಳು ಹೇಳಿದಾಗ ಶಿವಕುಮಾರ್ ಅವರು ಈ ರೀತಿ ಪ್ರತಿಕ್ರಿಯೆ ವ್ಯಕ್ತಪಡಿಸಿದರು.
“ಇದನ್ನು ಅವರ ಪಕ್ಷದ ನಾಯಕರೇ ಮಾತನಾಡಿದ್ದಾರೆ ಎಂದು ಹೇಳುವುದಿಲ್ಲ. ಈ ಬಗ್ಗೆ ಹೆಚ್ಚು ಮಾತನಾಡುವುದಿಲ್ಲ. ಕರೆಂಟ್ ಅಕ್ರಮವಾಗಿ ಬಳಸಿದ್ದ ಬಗ್ಗೆ ಕುಮಾರಸ್ವಾಮಿ ಅವರು ತಪ್ಪೊಪ್ಪಿಕೊಂಡಿದ್ದಾರೆ. ಅದು ಅವರ ದೊಡ್ಡತನ” ಎಂದರು.
ಬೆಸ್ಕಾಂ ಸಿಬ್ಬಂದಿ ದೂರು ದಾಖಲಿಸಿಕೊಂಡಿರುವ ಬಗ್ಗೆ ಪ್ರಶ್ನೆ ಕೇಳಿದಾಗ, “ಈ ಬಗ್ಗೆ ನನಗೆ ಗೊತ್ತಿಲ್ಲ. ಅವರು ದಂಡ ಕಟ್ಟುತ್ತೇನೆ ಎಂದು ಹೇಳಿದ ವಿಚಾರ ಮಾಧ್ಯಮಗಳ ಮೂಲಕ ತಿಳಿದಿದ್ದೇನೆ”ಎಂದು ತಿಳಿಸಿದರು.