ಸುದ್ದಿಮೂಲ ವಾರ್ತೆ
ಬೆಂಗಳೂರು, ನ.17: ಕಳೆದ ವಿಧಾನಸಭಾ ಚುನಾವಣೆಯಲ್ಲಿ ಮುಸ್ಲಿಮರಲ್ಲಿ 17 ಮಂದಿಗೆ ಟಿಕೆಟ್ ನೀಡಲಾಗಿತ್ತು. ಈ ಪೈಕಿ 7 ಮಂದಿ ಶಾಸಕರಾಗಿ ಆಯ್ಕೆಯಾಗಿದ್ದು, ಅದರಲ್ಲಿ 5 ಜನರಿಗೆ ಕಾಂಗ್ರೆಸ್ ಅಧಿಕಾರ ನೀಡಿದೆ. ಈಗ ಬಿಜೆಪಿಯ ದೊಡ್ಡ ದೊಡ್ಡ ನಾಯಕರು ಮುಸ್ಲಿಂ ಸ್ಪೀಕರ್ ಯುಟಿ ಖಾದರ್ಗೆ ಕೈಮುಗಿದು ನಮಸ್ಕರಿಸುತ್ತಾರೆ ಎಂದು ಸಚಿವ ಜಮೀರ್ ಅಹ್ಮದ್ ಖಾನ್ ಹೈದರಾಬಾದ್ನಲ್ಲಿ ಹೇಳುವ ಮೂಲಕ ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ.
ವಸತಿ ಸಚಿವ ಜಮೀರ್ ಅಹಮ್ಮದ್ ಖಾನ್ ಅವರು ತೆಲಂಗಾಣ ವಿಧಾನಸಭಾ ಚುನಾವಣೆಯ ಅಖಾಡಕ್ಕಿಳಿದಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿಗಳ ಪರ ಭರ್ಜರಿ ಮತಯಾಚಿಸುತ್ತಿರುವ ಅವರು, ನನಗೆ 3 ಖಾತೆ ನೀಡಿ ಮಂತ್ರಿ ಮಾಡಿದೆ. ರಹೀಂ ಖಾನ್ ಮಂತ್ರಿಯಾಗಿದ್ದಾರೆ. ಸಲೀಂ ಅಹ್ಮದ್ ವಿಧಾನ ಪರಿಷತ್ನಲ್ಲಿ ವಿಪ್ ಆಗಿದ್ದಾರೆ. ನಸೀರ್ ಅಹ್ಮದ್ ಮುಖ್ಯಮಂತ್ರಿ ಅವರ ರಾಜಕೀಯ ಕಾರ್ಯದರ್ಶಿಯಾಗಿದ್ದಾರೆ ಎಂದು ಹೈದರಾಬಾದ್ನಲ್ಲಿ ನಡೆದ ಚುನಾವಣಾ ಪ್ರಚಾರದ ವೇಳೆ ರಾಜ್ಯ ಕಾಂಗ್ರೆಸ್ನಲ್ಲಿ ಮುಸ್ಲಿಂ ಸಮುದಾಯಕ್ಕೆ ನೀಡಿರುವ ಸ್ಥಾನಮಾನಗಳನ್ನು ಒತ್ತಿ ಒತ್ತಿ ಹೇಳಿದ್ದಾರೆ.
ರಾಜಕೀಯ ಇತಿಹಾಸದಲ್ಲಿ ಮುಸ್ಲಿಂ ವ್ಯಕ್ತಿಯನ್ನು ಸ್ಪೀಕರ್ ಮಾಡಿರಲಿಲ್ಲ. ಈಗ ಮೊದಲ ಬಾರಿಗೆ ಮುಸ್ಲಿಂ ವ್ಯಕ್ತಿಯನ್ನು ಸ್ಪೀಕರ್ ಮಾಡಿದ್ದು ಕಾಂಗ್ರೆಸ್ ಪಕ್ಷ. ಈಗ ದೊಡ್ಡ ದೊಡ್ಡ ಬಿಜೆಪಿ ನಾಯಕರು ಕೂಡಾ ಸ್ಪೀಕರ್ ಯುಟಿ ಖಾದರ್ ಅವರಿಗೆ ‘ನಮಸ್ಕಾರ್ ಸಾಬ್’ ಎನ್ನುತ್ತಾರೆ. ಇದನ್ನು ಮಾಡಿದ್ದು ಯಾರು? ಕಾಂಗ್ರೆಸ್ ಪಕ್ಷ ಎಂದು ಹೇಳಿಕೆ ನೀಡಿ ವಿವಾದ ಸೃಷ್ಟಿಸಿದ್ದಾರೆ.
ಕ್ಷಮೆ ಯಾಚನೆಗೆ ಬಿಜೆಪಿ ಆಗ್ರಹ:
ಸಚಿವ ಜಮೀರ್ ಅಹಮದ್ ಕೂಡಲೇ ಕ್ಷಮೆಯಾಚಿಸಬೇಕು ಎಂದು ಬಿಜೆಪಿ ಆಗ್ರಹಿಸಿದ್ದು, ಸಚಿವರ ಹೇಳಿಕೆಯನ್ನು ಅನೇಕ ನಾಯಕರು ಖಂಡಿಸಿದ್ದಾರೆ.
ಸಂವಿಧಾನಕ್ಕೆ ಅಗೌರವ ನೀಡುವಂಥ ಹೇಳಿಕೆ ನೀಡಿದ ಸಚಿವ ಜಮೀರ್ ಅಹಮ್ಮದ್ ಅವರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕರೆದು ಬುದ್ಧಿಮಾತು ಹೇಳಬೇಕು ಎಂದು ಮಾಜಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ಆಗ್ರಹಿಸಿದರು.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯದಲ್ಲಿ ಮಾತನಾಡಿದ ಅವರು, ವ್ಯಕ್ತಿಗತವಾಗಿ ಆ ಪೀಠದಲ್ಲಿ ಯು.ಟಿ.ಖಾದರ್ ಕುಳಿತುಕೊಳ್ಳುತ್ತಾರೋ ಅಥವಾ ಯಾರು ಕುಳಿತುಕೊಳ್ಳುತ್ತಾರೆ ಎಂಬುದು ಪ್ರಜಾಪ್ರಭುತ್ವದ ವ್ಯವಸ್ಥೆಯಂತೆ ನಡೆಯುತ್ತದೆ. ಬಿಜೆಪಿ ಶಾಸಕರು, ಮುಖಂಡರು ಕೈಮುಗಿದು ತಲೆಬಾಗಿ ನಮಸ್ಕರಿಸುತ್ತಾರೆ ಎಂಬ ಮಾದರಿಯಲ್ಲಿ ಸಚಿವರು ಹೇಳಿದ್ದು, ಅದು ಸ್ಪೀಕರ್ ಸ್ಥಾನಕ್ಕೆ ಕೊಡುವ ಗೌರವ. ಪ್ರಜಾಪ್ರಭುತ್ವದಲ್ಲಿ ವಿಧಾನಸಭೆ ಮತ್ತು ವಿಧಾನಪರಿಷತ್ನಲ್ಲಿ ಸ್ಪೀಕರ್ ಸ್ಥಾನ ಬಹಳ ದೊಡ್ಡದು ಮತ್ತು ಗೌರವಯುತವಾದುದು ಎಂದು ನುಡಿದರು.
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ಕಾಂಗ್ರೆಸ್ ಸರ್ಕಾರದ ಸಚಿವರಿಗೆ ಅಧಿಕಾರದ ಮದ ಏರಿದೆ ಎಂದು ಜರಿದರೆ, ಮಾಜಿ ಸಚಿವ ಆರಗ ಜ್ಞಾನೇಂದ್ರ, ಸಚಿವ ಜಮೀರ್ ಅಹ್ಮದ್ ಹೇಳಿರುವುದು ಮೂರ್ಖತನದ್ದು ಎಂದು ಟೀಕಿಸಿದ್ದಾರೆ.
ಅಗೌರವದಿಂದ ಮಾತನಾಡಿಲ್ಲ: ಜಮೀರ್ ಸ್ಪಷ್ಟನೆ
ತೆಲಂಗಾಣ ವಿಧಾನಸಭೆ ಚುನಾವಣೆ ಸ್ಟಾರ್ ಪ್ರಚಾರಕನಾದ ನಾನು ಹೈದರಾಬಾದ್ನಲ್ಲಿ ಯಾವುದೇ ವ್ಯಕ್ತಿ ಅಥವಾ ಪಕ್ಷದ ಶಾಸಕರ ಬಗ್ಗೆ ಅಗೌರವವಾಗಿ ಮಾತನಾಡಿಲ್ಲ. ಕರ್ನಾಟಕದಲ್ಲಿ ಮುಸ್ಲಿಂ ಸಮುದಾಯಕ್ಕೆ ಕಾಂಗ್ರೆಸ್ ಅತ್ಯುನ್ನತ ಗೌರವ ನೀಡಿದೆ. ರಾಜ್ಯದ ಇತಿಹಾಸದಲ್ಲಿ ಮೊದಲ ಬಾರಿಗೆ ಸ್ಪೀಕರ್ ಸ್ಥಾನ ನೀಡಿದೆ. ವಿಧಾನಸಭೆಯಲ್ಲಿ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಸೇರಿ ನಾವೆಲ್ಲರೂ ಅವರನ್ನು ಸನ್ಮಾನ್ಯ ಸಭಾಧ್ಯಕ್ಷರೇ ಎಂದು ಕರೆಯುತ್ತೇವೆ. ಅಷ್ಟೊಂದು ಉನ್ನತ ಹುದ್ದೆ ಏರುವ ಅವಕಾಶ ನೀಡಲಾಗಿದೆ ಎಂದಷ್ಟೇ ಹೇಳಿದ್ದೆ ಎಂದು ಸಚಿವ ಜಮೀರ್ ಅಹಮದ್ ಸ್ಪಷ್ಟನೆ ನೀಡಿದ್ದಾರೆ.
ನಾನು ಕಾಂಗ್ರೆಸ್ ಪಕ್ಷ ಮುಸ್ಲಿಂ ಸಮುದಾಯಕ್ಕೆ ಎರಡು ಸಚಿವ ಸ್ಥಾನ, ಪರಿಷತ್ನಲ್ಲಿ ಮುಖ್ಯ ಸಚೇತಕ, ಮುಖ್ಯಮಂತ್ರಿ ಅವರ ರಾಜಕೀಯ ಕಾರ್ಯದರ್ಶಿ, ಎಲ್ಲದಕ್ಕಿಂತ ಹೆಚ್ಚಾಗಿ ಸ್ಪೀಕರ್ ಸ್ಥಾನ ನೀಡಿದೆ ಎಂದಷ್ಟೇ ಹೇಳಿದ್ದೇನೆ ಎಂದು ಮತ್ತೊಮ್ಮೆ ಸ್ಪಷ್ಟ ಪಡಿಸುತ್ತೇನೆ. ಕಾಂಗ್ರೆಸ್ ನಮ್ಮ ಸಮಾಜಕ್ಕೆ ನೀಡಿರುವ ಗೌರವ ಸ್ಮರಿಸುವುದು
ತಪ್ಪೇ ಎಂದು ಪ್ರೆಶ್ನೆ ಮಾಡಿದ್ದಾರೆ.