ಸುದ್ದಿಮೂಲ ವಾರ್ತೆ
ಬೆಂಗಳೂರು,ಅ,14; ಮುಂಬರುವ ರಾಷ್ಟ್ರೀಯ ಕ್ರೀಡಾಕೂಟ, ಏಷ್ಯಾ ಕ್ರೀಡಾ ಕೂಟಕ್ಕೆ ರಾಜ್ಯದ ಪ್ರತಿಭೆಗಳನ್ನು ಶೋಧಿಸುವ ಸಲುವಾಗಿ ಟೇಬಲ್ ಟೆನಿಸ್ ಗೆ ಹೆಚ್ಚಿನ ಆದ್ಯತೆ ನೀಡಲು ಕರ್ನಾಟಕ ಟೇಬಲ್ ಟೆನಿಸ್ ಅಸೋಸಿಯೇಷನ್ ನಿರ್ಧರಿಸಿದೆ.
ನಗರದಲ್ಲಿಂದು ಯುವ ಕಾಂಗ್ರೆಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ಕರ್ನಾಟಕ ಟೇಬಲ್ ಟೆನಿಸ್ ಅಸೋಸಿಯೇಷನ್ ಅಧ್ಯಕ್ಷ ಎಂ.ಎಸ್. ರಕ್ಷಾ ರಾಮಯ್ಯ ಅಧ್ಯಕ್ಷತೆಯಲ್ಲಿ ಅಸೋಸಿಯೇಷನ್ ನ ಮೊದಲ ಸಾಮಾನ್ಯ ವಾರ್ಷಿಕ ಸಭೆ ನಡೆಯಿತು.
ಬಳಿಕ ಮಾಹಿತಿ ನೀಡಿದ ರಕ್ಷಾ ರಾಮಯ್ಯ, ರಾಜ್ಯದಲ್ಲಿ ಟೇಬಲ್ ಟೆನಿಸ್ ಗೆ ಉಜ್ವಲ ಭವಿಷ್ಯವಿದ್ದು, ಉತ್ತಮ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡಲಾಗುವುದು. ಶಾಲಾ, ಕಾಲೇಜು ಹಂತದಲ್ಲಿ ಪ್ರತಿಭೆಗಳನ್ನು ಪತ್ತೆಮಾಡಿ ಮುಂಬರುವ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ರಾಜ್ಯದಿಂದ ಉತ್ತಮ ಟೇಬಲ್ ಟೆನಿಸ್ ಆಟಗಾರರನ್ನು ನಿರ್ಮಿಸಲು ಒತ್ತು ನೀಡಲಾಗುತ್ತದೆ. ಇದಕ್ಕಾಗಿ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದಲ್ಲಿ ಟೇಬಲ್ ಟೆನಿಸ್ ಟೂರ್ನಿಗಳನ್ನು ಆಯೋಜಿಸಲಾಗುವುದು ಎಂದು ಹೇಳಿದರು.
ಟೇಬಲ್ ಟೆನಿಸ್ ಗೆ ಒತ್ತು ನೀಡುವಂತೆ ಕರ್ನಾಟಕ ಒಲಿಂಪಿಕ್ ಅಸೋಸಿಯೆಷನ್ ಗೆ ಮನವಿ ಸಲ್ಲಿಸಲಾಗುವುದು. ಕ್ರೀಡೆಗೆ ಉತ್ತೇಜನ ಕೊಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜೊತೆ ಸಮಾಲೋಚನೆ ನಡೆಸುವುದಾಗಿ ಹೇಳಿದರು.
ಈ ಸಂದರ್ಭದಲ್ಲಿ ಕಾರ್ಯಾಧ್ಯಕ್ಷರಾದ ರಮೇಶ್ ಶಾಸ್ತ್ರಿ, ಉಪಾಧ್ಯಕ್ಷರಾದ ರೋಹಿತ್ ಆರ್, ಶಿವಕುಮಾರ್ ಎಂ.ಕೆ, ಗೌತಮ್ ಶೆಟ್ಟಿ, ವಾದಿರಾಜ್ ಎಸ್. ಕಟ್ಟಿ ಹಾಗೂ ಆರ್.ಕೆ.ಜಯಚಂದ್ರ ರಾವ್, ಕಾರ್ಯದರ್ಶಿ ಕೆ.ಆರ್.ಮಂಜುನಾಥ್, ಜಂಟಿ ಕಾರ್ಯದರ್ಶಿಗಳಾದ ರವಿಕುಮಾರ್ ಎಸ್.ನಾಯಕ, ಜಿ.ಎ.ಅಂಬೇಕರ, ತಾಹಿರ್ ಸನದಿ, ಖಜಾಂಚಿ ಸಂಗಮ್ ಶ್ಯಾಮ್ ರವರು, ಜಾಹೀರಾತು ಕಾರ್ಯಕಾರಿ ಸಮಿತಿ ಸದಸ್ಯ ಗುಣಲನ್ ಉಪಸ್ಥಿತರಿದ್ದರು.