ಸುದ್ದಿಮೂಲ ವಾರ್ತೆ
ರಾಮನಗರ,ಜೂ.19: ನಮ್ಮ ಮುಂದಿನ ಭವಿಷ್ಯಕ್ಕೆ ಪರಿಸರ ರಕ್ಷಣೆ ಅಗತ್ಯವಾಗಿದೆ ಎಂದು ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಗಂಗಾಧರ್ ಹೇಳಿದರು.
ಪರಿಸರ ದಿನಾಚರಣೆಯ ಅಂಗವಾಗಿ ತಾಲೂಕಿನ ಕೋಡಿಯಾಲ ಕರೇನಹಳ್ಳಿಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ರಾಮನಗರ ತಾಲೂಕು ಘಟಕ ಹಮ್ಮಿಕೊಂಡಿದ್ದ, ಪರಿಸರ ಮಾಹಿತಿ ಹಾಗೂ ಸಸಿ ನೆಡುವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಅವರು ಮಾತನಾಡಿದರು.
ಪರಿಸರ ದಿನಾಚರಣೆಯ ನೆನಪಿಗೆ ಸಸಿ ನೆಡಲಾಗುತ್ತಿದೆ. ಆದರೆ ಅದನ್ನು ಮರವನ್ನಾಗಿ ಬೆಳೆಸುವುದು ಶಾಲೆಯ ಪ್ರತಿಯೊಬ್ಬ ವಿದ್ಯಾರ್ಥಿಯ ಕರ್ತವ್ಯ. ಪರಿಸರದಿಂದಲೇ ಜೀವಿಗಳ ಬದುಕು ಎಂಬುದನ್ನು ಮರೆಯಬೇಡಿ. ಪರಿಸರವನ್ನು ಕಲುಷಿತಗೊಳಿಸಬೇಡಿ ಎಂದು ವಿದ್ಯಾರ್ಥಿಗಳಲ್ಲಿ ತಿಳುವಳಿಕೆ ಮೂಡಿಸಿದರು.
ಪರಿಸರ ದಿನಾಚರಣೆಯ ಅಂಗವಾಗಿ ಶಾಲಾ ಮಕ್ಕಳಿಗೆ ಭಾಷಣ, ಪ್ರಬಂಧ, ಪರಿಸರ ಗೀತೆ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಶಾಲಾ ಮುಖ್ಯೋಪಾಧ್ಯಾಯ ಚಂದ್ರಶೇಖರ ಮೂರ್ತಿ, ಗ್ರಾಮಾಭಿವೃದ್ದಿ ಯೋಜನಾಧಿಕಾರಿಯಾದ ಮುರುಳಿಧರ್ , ಗ್ರಾಮ ಪಂಚಾಯಿತಿ ಸದಸ್ಯೆ ಆಶಾ, ಮೇಲ್ವಿಚಾರಕರಾದ ವಿನೋದ್, ಉಮೇಶ್, ಸೇವಾಪ್ರತಿನಿಧಿ ನಾರಾಯಣಮ್ಮ ಉಪಸ್ಥಿತರಿದ್ದರು.