ಸುದ್ದಿಮೂಲ ವಾರ್ತೆ
ಹೊಸಕೋಟೆ,ಸೆ.6:ಜಗತ್ತಿನ ಮಹತ್ತರ ಬದಲಾವಣೆಗೆ ಶಿಕ್ಷಕರ ಪಾತ್ರ ಅನನ್ಯವಾಗಿದ್ದು, ಸಮಾನತೆಯ ಹಾಗೂ ಗುಣಮಟ್ಟದ ಶಿಕ್ಷಣ ನೀತಿ ಜಾರಿ ಮಾಡುವುದು ಅತ್ಯಗತ್ಯವಾಗಿದೆ ಎಂದು ನಿ. ನ್ಯಾ. ನಾಗಮೋಹನ್ ದಾಸ್ ತಿಳಿಸಿದರು.
ಹೊಸಕೋಟೆ ನಗರದ ಖಾಸಗಿ ಸಭಾ ಭವನದಲ್ಲಿ ಆಯೋಜನೆ ಮಾಡಲಾಗಿದ್ದ ಜಿಲ್ಲಾ ಮಟ್ಟದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ದಿಕ್ಸೂಚಿ ಭಾಷಣದಲ್ಲಿ ಮಾತನಾಡಿದರು.
ಇಂದಿನ ಶಿಕ್ಷಣ ನೀತಿಗೆ ಯುವ ಶಾಸಕರು ಧ್ವನಿ ಎತ್ತುವ ಕೆಲಸ ಆಗಬೇಕು. ಪ್ರಮುಖವಾಗಿ ಶಿಕ್ಷಣ ಕ್ಷೇತ್ರದಲ್ಲಿ ಗುತ್ತಿಗೆ ಪದ್ದತಿ ರದ್ದು ಮಾಡಿ, ಖಾಲಿ ಸ್ಥಾನಗಳಿಗೆ ಶಿಕ್ಷಕರ ನೇಮಕಾತಿ ಮಾಡಬೇಕು. ದೇಶದಲ್ಲಿ ಸಮಸ್ಯೆಗಳಿವೆ, ಸವಾಲುಗಳಿವೆ ಎಲ್ಲವನ್ನೂ ಸರಿಮಾಡಬೇಕಾದರೆ ಹೊಸಪೀಳಿಗೆ ಬರಬೇಕು. ಹೊಸ ಪೀಳಿಗೆಗೆ ಸತ್ರ್ಪಜೆಗಳನ್ನು ರೂಪಿಸುವ ದೊಡ್ಡ ಜವಾಬ್ದಾರಿ ಶಿಕ್ಷಕರ ಮೇಲಿದೆ ಎಂದರು.
ಜಿಲ್ಲಾ ಉಸ್ತುವಾರಿ ಸಚಿವ ಕೆ.ಹೆಚ್.ಮುನಿಯಪ್ಪ ಮಾತನಾಡಿ, ಗುಣಮಟ್ಟದ ಶಿಕ್ಷಣವನ್ನು ಸರ್ಕಾರಿ ಶಾಲೆಗಳಲ್ಲಿ ನೀಡುವ ಉದ್ದೇಶದಿಂದ ಸರ್ಕಾರ ಎಲ್ಲಾ ರೀತಿಯ ಸೌಲಭ್ಯಗಳನ್ನು
ಕಲ್ಪಿಸುವ ಕಾರ್ಯವನ್ನು ಮಾಡುತ್ತಿದೆ. ಜಿಲ್ಲೆಯಲ್ಲಿ ಶಿಕ್ಷಣ ಕ್ಷೇತ್ರದ ಸುಧಾರಣೆಗೆ ಅಗತ್ಯವಾದ ಸೌಲಭ್ಯಗಳನ್ನು ಸರ್ಕಾರದಿಂದ ಕಲ್ಪಿಸಲು ಸದಾ ಬದ್ದನಾಗಿದ್ದು, ಸಿಎಂ ಬಳಿ ಚರ್ಚಿಸಿ ಅಗತ್ಯವಾದ ಅನುದಾನ ಕೊಡಿಸುತ್ತೇನೆ. ಶಿಕ್ಷಕರು ಮಕ್ಕಳ ಶೈಕ್ಷಣಿಕ ಪ್ರಗತಿ ಹೆಚ್ಚಿಸಲು ಶ್ರಮಿಸಬೇಕು. ಪ್ರಮುಖವಾಗಿ
ಗಾಂಧಿ ಜಯಂತಿ ವೇಳೆ ಜಿಲ್ಲೆಯ ಪ್ರತಿ ತಾಲೂಕಿನಲ್ಲಿ ಎರಡೆರಡು ಶಾಲೆಗಳಲ್ಲಿ ಕಾಂಪೌಂಡ್, ನೀರು, ಸ್ವಚ್ವತೆ, ಉತ್ತಮ ಕೊಠಡಿ ವ್ಯವಸ್ಥೆಯೊಂದಿಗೆ ಮಾದರಿ ಶಾಲೆಯನ್ನಾಗಿ ಮಾಡಬೇಕು ಎಂದರು.
ಜಿಲ್ಲಾಧಿಕಾರಿ ಶಿವಶಂಕರ್, ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ, ಜಿಪಂ ಸಿಇಒ ಅನುರಾಧ, ತಹಶೀಲ್ದಾರ್ ವಿಜಯ್ಕುಮಾರ್, ಶಿಕ್ಷಣ ಇಲಾಖೆ ಜಿಲ್ಲಾ ಉಪನಿರ್ದೇಶಕ ಶ್ರೀಕಂಠ, ಕ್ಷೇತ್ರ ಶಿಕ್ಷಣಾಧಿಕಾರಿ ಪದ್ಮನಾಭ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಶ್ರೀನಿವಾಸಪ್ಪ, ಇಒ ಚಂದ್ರಶೇಖರ್ ಸೇರಿದಂತೆ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪದಾಧಿಕಾರಿಗಳು ಹಾಜರಿದ್ದರು.
ಗುರುಭವನಕ್ಕೆ ೨.೫ಕೋಟಿ ಅನುದಾನಕ್ಕೆ ಮನವಿ
ತಾಲೂಕಿನಲ್ಲಿ ಕಳೆದ ಭಾರಿ ನಡೆದ ಶಿಕ್ಷಕರ ದಿನಾಚರಣೆಯಲ್ಲಿ ಮುಂದಿನ ಭಾರಿ ಗುರುಭವನ ನಿರ್ಮಿಸಿ ಅಲ್ಲೇ ಶಿಕ್ಷಕರ ದಿನಾಚರಣೆ ಮಾಡುವ ಭರವಸೆ ನೀಡಿದ್ದೆ. ಆದರೆ, ಅಂದಿನ ರಾಜಕೀಯ ತೊಳಲಾಟದ ಕ್ಲಿಷ್ಟ ಪರಿಸ್ಥಿತಿಯಲ್ಲಿ ಅದನ್ನು ಸಾಕಾರ ಮಾಡಲು ಆಗಿಲ್ಲ. ಆದ್ದರಿಂದ ಈ ಬಾರಿ ಗುರು ಭವನ ನಿರ್ಮಾಣಕ್ಕೆ 2.5 ಕೋಟಿ ಅನುದಾನವನ್ನು ಸರ್ಕಾರದಿಂದ ಬಿಡುಗಡೆ ಮಾಡಿಸಿಕೊಡಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಹೆಚ್.ಮುನಿಯಪ್ಪ ಅವರಿಗೆ ಶಾಸಕ ಶರತ್ಬಚ್ಚೇಗೌಡ ಮನವಿ ಮಾಡಿದರು.