ಸುದ್ದಿಮೂಲ ವಾರ್ತೆ
ಬೆಂಗಳೂರು, ಏ.11: ವಿಧಾನಸಭಾ ಚುನಾವಣೆಗೆ ಬಿಜೆಪಿ ನಡೆಸುತ್ತಿರುವ ಪ್ರಯೋಗ ಹಿರಿಯ ನಾಯಕರಲ್ಲಿ ಅಸಮಾಧಾನ ಉಂಟು ಮಾಡಿದ್ದು, ಪಕ್ಷದ ವಿರುದ್ಧ ಸಿಡಿದೆದ್ದಿದ್ದಾರೆ. ಇದರ ಭಾಗವಾಗಿ ಹಿರಿಯ ನಾಯಕ ಕೆ.ಎಸ್. ಈಶ್ವರಪ್ಪ ಯಾವುದೇ ವಿವಾದ ಮಾಡಿಕೊಳ್ಳದೆ ಚುನಾವಣಾ ರಾಜಕೀಯದಿಂದ ನಿವೃತ್ತಿ ಘೋಷಿಸಿದರೆ, ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಹೈಕಮಾಂಡ್ ನಾಯಕರ ವಿರುದ್ಧ ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸುವ ಮೂಲಕ ಬಂಡಾಯದ ಘೋಷಣೆ ಮಾಡಿದ್ದಾರೆ.
ಬಿಜೆಪಿ ಟಿಕೆಟ್ ಹಂಚಿಕೆ ಅಕ್ಷರಶಃ ಗಜಪ್ರಸವವೇ ಆಗುತ್ತಿದೆ. ಕಳೆದ ನಾಲ್ಕು ದಿನಗಳಿಂದ ನಡೆಯುತ್ತಿರುವ ಚರ್ಚೆಯಲ್ಲಿ ಬಿಜೆಪಿಯ ಪ್ರಮುಖ ಐವರು ನಾಯಕರ ಜೊತೆಗೆ ಸುಮಾರು 21 ಶಾಸಕರಿಗೆ ಟಿಕೆಟ್ ಇಲ್ಲ ಎಂಬ ಸಂದೇಶ ರವಾನೆಯಾಗಿದೆ. ಟಿಕೆಟ್ ಕೈತಪ್ಪಿದ ಹಿರಿಯ ನಾಯಕರು ಮತ್ತು ಹಾಲಿ ಶಾಸಕರ ಕ್ಷೇತ್ರಗಳಲ್ಲಿ ಹೊಸ ಮುಖಗಳಿಗೆ ಅವಕಾಶ ನೀಡುವ ಮೂಲಕ ಬೇರೆ ರಾಜ್ಯಗಳಲ್ಲಿ ಮಾಡಿದ ಪ್ರಯೋಗವನ್ನು ಕರ್ನಾಟಕದಲ್ಲಿಯೂ ಮುಂದುವರಿಸಲು ಬಿಜೆಪಿ ಸಿದ್ಧತೆ ನಡೆಸಿದೆ. ಆದರೆ, ಪಕ್ಷಕ್ಕಾಗಿ ದುಡಿದವರಿಗೆ ಟಿಕೆಟ್ ಸಿಗುತ್ತಿಲ್ಲ ಎಂಬ ಸಂದೇಶ ರವಾನೆಯಾಗುತ್ತಿದ್ದಂತೆ ರಾಜ್ಯ ಬಿಜೆಪಿಯಲ್ಲಿ ಮೋಡ ಮುಸುಕಿದ ವಾತಾವರಣ ಆವರಿಸದಂತಾಗಿದೆ.
ಈ ಬಾರಿ ಟಿಕೆಟ್ ಕೈತಪ್ಪುವುದು ಖಚಿತವಾಗುತ್ತಿದ್ದಂತೆ ಶಿವಮೊಗ್ಗದಲ್ಲಿ ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಚುನಾವಣಾ ರಾಜಕೀಯದಿಂದ ಹಿಂದೆ ಸರಿಯುವ ನಿರ್ಧಾರ ಮಾಡಿದ್ದಾರೆ. ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರಿಗೆ ಕನ್ನಡದಲ್ಲಿ ಪತ್ರ ಬರೆದಿರುವ ಈಶ್ವರಪ್ಪ ಅವರು, ‘ನಾನು ಸ್ವ ಇಚ್ಛೆಯಿಂದ ಚುನಾವಣಾ ರಾಜಕೀಯದಿಂದ ನಿವೃತ್ತನಾಗಲು ಬಯಸಿದ್ದೇನೆ. ಹಾಗಾಗಿ ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ನನ್ನ ಹೆಸರನ್ನು ಯಾವುದೇ ಕ್ಷೇತ್ರಕ್ಕೆ ಪರಿಗಣಿಸಬಾರದಾಗಿ ವಿನಂತಿ. ಕಳೆದ 40ಕ್ಕೂ ಹೆಚ್ಚು ವರ್ಷದ ರಾಜಕೀಯ ಜೀವನದಲ್ಲಿ ಬೂತ್ ಮಟ್ಟದಿಂದ ರಾಜ್ಯದ ಉಪ-ಮುಖ್ಯಮಂತ್ರಿಯವರೆಗೆ ಗೌರವದ ಸ್ಥಾನಮಾನಗಳನ್ನು ನೀಡಿದ ಪಕ್ಷದ ಹಿರಿಯರಿಗೆ ನನ್ನ ಅನಂತ ಧನ್ಯವಾದಗಳು.’ ಎಂದು ಈಶ್ವರಪ್ಪ ಪತ್ರದಲ್ಲಿ ಹೇಳಿದ್ದಾರೆ.
ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣದಲ್ಲಿ ಸಚಿವ ಸ್ಥಾನದ ಹುದ್ದೆ ಕಳೆದುಕೊಂಡಿದ್ದ ಈಶ್ವರಪ್ಪ ಅವರು ಮತ್ತೊಮ್ಮೆ ಸಚಿವರಾಗಿ ಕಳಂಕ ರಹಿತವಾಗಬೇಕು ಎಂಬ ಹವಣಿಕೆಯಲ್ಲಿದ್ದರು. ಆದರೆ, ಅವರ ಬೊಮ್ಮಾಯಿ ಸರ್ಕಾರದ ಕೊನೆಯವರೆಗೂ ಈಡೇರಲೇ ಇಲ್ಲ. ಈಗ ಚುನಾವಣಾ ರಾಜಕೀಯದಿಂದಲೇ ನಿವೃತ್ತಿ ಆಗುವ ಮೂಲಕ ತಮ್ಮ ಮೇಲಿನ ಕಪ್ಪುಚುಕ್ಕೆ ಇಟ್ಟುಕೊಂಡೇ ಸಾರ್ವಜನಿಕ ಕ್ಷೇತ್ರದಿಂದ ಹೊರನಡೆದಿದ್ದಾರೆ.
ರೆಬಲ್ ಆದ ಶೆಟ್ಟರ್:
ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರಿಗೆ ಹೈಕಮಾಂಡ್ ಟಿಕೆಟ್ ನಿರಾಕರಿಸಿರವುದರಿಂದ ಬಿಜೆಪಿ ಪಾಲಿಗೆ ಶೆಟ್ಟರ್ ರೆಬಲ್ ಆಗುವ ಮುನ್ಸೂಚನೆ ನೀಡಿದ್ದಾರೆ.
ಪ್ರಚಾರದಲ್ಲಿದ್ದ ಜಗದೀಶ್ ಶೆಟ್ಟರ್ ಅವರು ಹುಬ್ಬಳ್ಳಿಯಲ್ಲಿ ತುರ್ತು ಪತ್ರಿಕಾಗೋಷ್ಠಿ ನಡೆಸಿದರು. ಪಕ್ಷದ ವರಿಷ್ಠರು ನನಗೆ ಕರೆ ಮಾಡಿ ನೀವು ಸೀನಿಯರ್ ಇದ್ದೀರಿ. ಕಿರಿಯರಿಗೆ ಅವಕಾಶ ಮಾಡಿಕೊಡಿ ಎಂದು ಹೇಳಿದರು. ಆದರೆ, ನಾನು ಕಳೆದ 30 ವರ್ಷಗಳಿಂದ ಉತ್ತರ ಕರ್ನಾಟದಲ್ಲಿ ಪಕ್ಷ ಸಂಘಟನೆ ಮಾಡಿದ್ದೇನೆ. ನನ್ನ ಮೇಲೆ ಯಾವುದೇ ಕಳಕಂಕಗಳೂ ಇಲ್ಲ. ಅಲ್ಲದೆ, ಪಕ್ಷ ನಡೆಸಿದ ಸಮೀಕ್ಷೆಯಲ್ಲಿಯೂ ಸಹ ನನಗೆ ಪಾಸಿಟಿವ್ ಆದ ವರದಿಯೇ ಇದೆ. ಹೀಗಿದ್ದ ಮೇಲೆ ಯಾಕೆ ಟಿಕೆಟ್ ನಿರಾಕರಿಸಿದ್ದಾರೆ ಗೊತ್ತಿಲ್ಲ. ಅದೂ ಅಲ್ಲದೆ, ನನ್ನಂತಹ ಹಿರಿಯ ನಾಯಕನಿಗೆ ಮೊದಲೇ ಯಾವುದೇ ಸೂಚನೆ ನೀಡದೆ ನಾಮಪತ್ರ ಸಲ್ಲಿಕೆಗೆ ಒಂದೆರಡು ದಿನ ಬಾಕಿ ಇರುವಾಗಿ ಈ ರೀತಿ ಕರೆ ಮಾಡಿ ಹೇಳುವುದು ನನಗೆ ಮನಸ್ಸಿಗೆ ನೋವಾಗಿದೆ, ತೀವ್ರ ಬೇಸರ ಉಂಟು ಮಾಡಿದೆ ಎಂದು ಜಗದೀಶ್ ಶೆಟ್ಟರ್ ತಮ್ಮ ಅಸಮಾಧಾನ ಹೊರಹಾಕಿದ್ದಾರೆ.
ನಾನು ಇನ್ನೂ 10 ವರ್ಷಗಳ ಕಾಲ ರಾಜಕೀಯದಲ್ಲಿ ಸಕ್ರಿಯವಾಗಿರಬೇಕೆಂದು ತೀರ್ಮಾನ ಮಾಡಿದ್ದೇನೆ. ಹಾಗಾಗಿ ಬಿಜೆಪಿ ಟಿಕೆಟ್ ಕೊಡದಿದ್ದರೂ ಸರಿ ನಾನು ಈ ಬಾರಿ ಚುನಾವಣೆಯಲ್ಲಿ ಸ್ಪರ್ಧೆ ಮಾಡಿಯೇ ತೀರುತ್ತೇನೆ ಎಂದು ಶೆಟ್ಟರ್ ಹೈಕಮಾಂಡ್ ನಾಯಕರಿಗೆ ಸವಾಲು ಹಾಕಿದ್ದಾರೆ.
ಇನ್ನೂ ಕೆಲ ಹಿರಿಯರಿಗೆ ಕೊಕ್?
ಕೆ.ಎಸ್. ಈಶ್ವರಪ್ಪ, ಜಗದೀಶ್ ಶೆಟ್ಟರ್ ಜೊತೆಗೆ ಇನ್ನೂ ಕೆಲ ಪ್ರಮುಖ ನಾಯಕರಿಗೆ ಈ ಬಾರಿ ಬಿಜೆಪಿ ಟಿಕೆಟ್ ನಿರಾಕಿರಿಸುವ ಮುನ್ಸೂಚನೆ ನೀಡಿದೆ.
ಅದರಲ್ಲಿ ಪ್ರಮುಖವಾಗಿ ಬೆಂಗಳೂರು ಭಾಗದ ಪ್ರಮುಖ ಒಕ್ಕಲಿಗ ನಾಯಕ ಆರ್. ಅಶೋಕ್, ವಿಧಾನಸಭಾ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಮತ್ತು ಬೆಂಗಳೂರು ರಾಜಾಜಿನಗರ ವಿಧಾನಸಭಾ ಕ್ಷೇತ್ರದ ಶಾಸಕ ಎಸ್. ಸುರೇಶ್ಕುಮಾರ್ ಅವರೂ ಸಹ ಸೇರಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ, ಇದು ಊಹಾಪೋಹ ಮಾತ್ರ ಇದ್ದು, ಪಕ್ಷದಿಂದ ಯಾವುದೇ ಮಾಹಿತಿ ಹೊರಬಿದ್ದಿಲ್ಲ.
ಇದಲ್ಲದೆ, ಸಿಡಿ ಪ್ರಕರಣದಲ್ಲಿ ಸಚಿವ ಸ್ಥಾನ ಕಳೆದುಕೊಂಡಿರುವ ರಮೇಶ್ಜಾರಕಿಹೊಳಿ ಮತ್ತು ವಯೋಮಿತಿ ಕಾರಣಕ್ಕಾಗಿ ಚಿತ್ರದುರ್ಗದ ಜಿ.ಎಚ್. ತಿಪ್ಪಾರೆಡ್ಡಿ ಅವರಿಗೂ ಸಹ ಟಿಕೆಟ್ ಇಲ್ಲ ಎಂಬ ಮಾತುಗಳು ಕೇಳಿಬರುತ್ತಿವೆ.