ಹಾಸನ, ಸೆ.6: ಎತ್ತಿನಹೊಳೆ ಎರಡನೇ ಹಂತ 2027ಕ್ಕೆ ಮುಗಿದು 7 ಜಿಲ್ಲೆಗಳ ಲಕ್ಷಾಂತರ ಮನೆಗಳಿಗೆ ಕುಡಿಯುವ ನೀರು ತಲುಪುವುದು ಶತಸಿದ್ಧ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದರು.
ಎತ್ತಿನಹೊಳೆ ಸಮಗ್ರ ಕುಡಿಯುವ ನೀರಿನ ಯೋಜನೆಯ ಹಂತ-1ಕ್ಕೆ ಸಕಲೇಶಪುರ ತಾಲ್ಲೂಕಿನ ಬೈಕೆರೆ ದೊಡ್ಡನಗರದ ಪಂಪ್ ಹೌಸ್ ನಲ್ಲಿ ಚಾಲನೆ ನೀಡಿದ ಬಳಿಕ, ಹೆಬ್ಬಹಳ್ಳಿಯ 4 ನೇ ವಿತರಣಾ ತೊಟ್ಟಿ ಬಳಿ ಯೋಜನೆಗೆ ಚಾಲನೆ ನೀಡಿ ಮಾತನಾಡಿದರು.
ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ರಾಮನಗರ, ತುಮಕೂರು, ಹಾಸನ, ಚಿಕ್ಕಮಗಳೂರು ಜಿಲ್ಲೆಗಳ 29 ತಾಲ್ಲೂಕುಗಳ ಬದುಕನ್ನೇ ಬದಲಾಯಿಸುವ ಈ ಮಹತ್ವಾಕಾಂಕ್ಷೆ ಯೋಜನೆಗೆ ಮುಖ್ಯಮಂತ್ರಿಗಳಿಂದ ಚಾಲನೆ ದೊರೆಯಿತು.
‘ಇದು ಎರಡು ಹಂತದ ಯೋಜನೆ. ಮೊದಲ ಹಂತ ಇಂದು ಉದ್ಘಾಟಿಸಲಾಗಿದೆ. ಎರಡನೇ ಹಂತ 2027ಕ್ಕೆ ಮುಕ್ತಾಯಗೊಂಡು ಇಡೀ ಯೋಜನೆ ಯಶಸ್ವಿ ಜಾರಿ ಆಗುತ್ತದೆ. ಲಕ್ಷಾಂತರ ಫಲಾನುಭವಿಗಳ ಯೋಜನೆಯ ಅನುಕೂಲ ತಲುಪಲಿದೆ. 7 ಜಿಲ್ಲೆಗಳ ಜನತೆಯ ಮನಗೆ ಕುಡಿಯುವ ನೀರು ತಲುಪುತ್ತದೆ. ಹತ್ತಾರು ಕೆರೆಗಳನ್ನು ತುಂಬಿಸಲಾಗುತ್ತದೆ’ ಎಂದು ಸ್ಪಷ್ಟ ಭರವಸೆ ನೀಡಿದರು.
ಹೀಗಿದ್ದರೂ ಕೆಲವರು, ನಿಮ್ಮ ಕಣ್ಣೆದುರಿಗೇ ಇರುವ ಸತ್ಯವನ್ನು ಸುಳ್ಳು ಎಂದು ಬಿಂಬಿಸಿ ನಿಮ್ಮನ್ನು ಬಕ್ರಾ ಮಾಡಲು ಕೆಲವರು ಯತ್ನಿಸುತ್ತಾರೆ. ಆದ್ದರಿಂದ ಅಪನಂಬಿಕೆ ಸೃಷ್ಟಿಸುವವರ ಮಾತುಗಳನ್ನು ಕೇಳಬೇಡಿ. ನಿಮ್ಮ ಕಣ್ಣೆದುರಿಗೆ ಇರುವುದನ್ನು ನಂಬಿ ಎಂದು ಮನವಿ ಮಾಡಿದರು.
ಎತ್ತಿನಹೊಳೆಗೆ ನನ್ನ ಕಾಲದಲ್ಲೇ ಭೂಮಿಪೂಜೆ ಆಗಿತ್ತು. ಮೊದಲ ಹಂತದ ಯೋಜನೆಯನ್ನೂ ನಾನೇ ಉದ್ಘಾಟಿಸಿದ್ದೇನೆ. ಎರಡನೇ ಹಂತದ ಯೋಜನೆಯನ್ನೂ ನಾನೇ ಉದ್ಘಾಟಿಸಿ ಯೋಜನೆಯನ್ನು ಪೂರ್ಣ ಮಾಡಿ ಕುಡಿಯುವ ನೀರನ್ನು ಕೊಟ್ಟೇ ಕೊಡ್ತೀವಿ. ಕೆರೆಗಳನ್ನು ತುಂಬಿಸಿಯೇ ತೀರುವುದೂ ಶತಸಿದ್ಧ ಎಂದು ಗ್ಯಾರಂಟಿ ಮಾತುಗಳನ್ನಾಡಿದರು.
ಕುಡಿಯುವ ನೀರಿನ ವಿಚಾರದಲ್ಲಿ ರೈತರಿಗೆ ಅರಣ್ಯಾಧಿಕಾರಿಗಳು ಯಾವುದೇ ತೊಂದರೆ ಕೊಡಬಾರದು ಎಂದು ಸ್ಪಷ್ಟ ಸೂಚನೆ ನೀಡಿದರು.
ಭಗೀರಥ ಪ್ರಯತ್ನ:
ಡಿಸಿಎಂ ಡಿ. ಕೆ. ಶಿವಕುಮಾರ್ ಮಾತನಾಡಿ, ಎತ್ತಿನಹೊಳೆ ಬಯಲು ಸೀಮೆಯ ಜನರ ಬದುಕಿನ ಜೇನಿನ ಹೊಳೆ, ಬಯಲು ಸೀಮೆ ಬರ ನೀಗಿಸುವ ಜೀವದ ಹೊಳೆ. ಗೌರಿ ಹಬ್ಬದಂದು ಗಂಗೆಗೆ ಬಾಗಿನ ಅರ್ಪಿಸಿ, 10 ವರ್ಷಗಳ ಭಗೀರಥ ಪ್ರಯತ್ನ ನಡೆಸಿ, ಎತ್ತಿನಹೊಳೆ ಏತ ನೀರಾವರಿ ಯೋಜನೆಯನ್ನು ನಮ್ಮ ಕಾಂಗ್ರೆಸ್ ಸರ್ಕಾರ ಸಾಕಾರಗೊಳಿಸಿದೆ ಎಂದು ಅವರು ಹೇಳಿದರು.
ಕರ್ನಾಟಕದ ನೀರಾವರಿ ಇತಿಹಾಸದಲ್ಲೇ ಇದೊಂದು ಮಹತ್ವದ ದಿನ. ನೂರಾರು ಟೀಕೆಗಳನ್ನು ಎದುರಿಸಿದ್ದಕ್ಕೆ ಸಕಲೇಶ್ವರನ ಪುಣ್ಯ ಕ್ಷೇತ್ರದಿಂದ ವಾಣಿವಿಲಾಸದ ತಾಯಿ ಕಣಿವೆ ಮಾರಮ್ಮನ ಸನ್ನಿಧಿಗೆ ನೀರು ಹರಿಯುತ್ತಿದೆ. ನನ್ನ ಬದುಕಿನಲ್ಲೇ ಎಂದೆಂದಿಗೂ ಮರೆಯಲಾಗದ ಚರಿತ್ರೆಯ ದಿನ. ಗಂಗಾ ಮಾತೆ ಗೌರಿ ಹಬ್ಬದಂದು ಘಟ್ಟ ಹತ್ತಿ ಇಳಿಯುತ್ತಿದ್ದಾಳೆ ಎಂದು ಹೇಳಿದಳು.
ಈ ಹಿಂದೆ ಮುಖ್ಯಮಂತ್ರಿಗಳು ಇಂಧನ ಇಲಾಖೆ ಜವಾಬ್ದಾರಿ ನೀಡಿದ್ದರು. ಈಗ ನೀರಾವರಿ ಇಲಾಖೆ ಜವಾಬ್ದಾರಿ ತೆಗೆದುಕೊಂಡ ಮೇಲೆ ಎತ್ತಿನಹೊಳೆ ಯೋಜನೆಯ ಮೊದಲ ಹಂತದ ಕಾಮಗಾರಿ ಮುಗಿಸಿದ್ದೇವೆ. 2027 ಕ್ಕೆ ಎಲ್ಲಾ ಕಾಮಗಾರಿ ಮುಗಿಸಿ ಇತಿಹಾಸ ನಿರ್ಮಿಸುತ್ತೇವೆ. ಇದು ನಮ್ಮ ತಪಸ್ಸು, ಸಂಕಲ್ಪ, ಪ್ರತಿಜ್ಞೆ ಎಂದು ಹೇಳಿದರು.
ಬಯಲು ಸೀಮೆಯ 7 ಜಿಲ್ಲೆಗಳ 6,657 ಗ್ರಾಮಗಳ 75 ಲಕ್ಷ ಜನರ ಬಾಯಾರಿಕೆ ನೀಗಿಸುವ ಈ ಯೋಜನೆಯ ವಿರುದ್ಧ ಅನೇಕ ಜನರು ಎನ್ ಜಿಟಿಗೆ ಅರ್ಜಿ ಹಾಕಿದ್ದರು. ಎಲ್ಲಾ ತಕರಾರುಗಳನ್ನು ವಜಾ ಮಾಡಿ ನಮ್ಮ ಪರವಾಗಿ ಎನ್ ಜಿಟಿ ತೀರ್ಪು ನೀಡಿತು. ಇದರಿಂದ 527 ಕೆರೆಗಳಿಗೆ ನೀರನ್ನು ತುಂಬಿಸಲಾಗುತ್ತದೆ. ಏನಾದರೂ ಕೆಲಸ ಮಾಡುವ ಮುನ್ನ ವಜ್ರ ಯಾವುದು, ಕೆಸರು ಯಾವುದು ಎಂದು ತಿಳಿಯಬೇಕು. ವಜ್ರದಿಂದ ವಜ್ರವನ್ನು ಕತ್ತರಿಸಬಹುದು. ಆದರೆ ಕೆಸರಿನಿಂದ, ಕೆಸರನ್ನು ಸ್ವಚ್ಚ ಮಾಡಲು ಆಗುವುದಿಲ್ಲ. ವಜ್ರ ಯಾವುದು ಕೆಸರು ಯಾವುದು ಎಂಬುದನ್ನು ನೀವೇ ನಿರ್ಧಾರ ಮಾಡಿ ಎಂದರು.
ಉಸ್ತುವಾರಿ ಸಚಿವರುಗಳಿಂದ ಚಾಲನೆ
ಎತ್ತಿನಹೊಳೆ, ಕಾಡುಮನೆಹೊಳೆ, ಕೇರಿಹೊಳೆ, ಹೊಂಗದಹಳ್ಳಗಳಲ್ಲಿ ಇರುವ ಏಳು ವಿಯರ್ ಗಳನ್ನು ಫಲಾನುಭವಿ ಜಿಲ್ಲೆಗಳ ಉಸ್ತುವಾರಿ ಸಚಿವರು ಚಾಲನೆ ನೀಡಿದರು.
ಶುಕ್ರವಾರ (ಸೆ. 6 ರಿಂದ) 60 ದಿನಗಳ ಕಾಲ ನಿರಂತರವಾಗಿ ಸುಮಾರು 5 ಟಿಎಂಸಿ ನೀರನ್ನು ಎತ್ತಿ ವೇದಾ ವ್ಯಾಲಿ ಮೂಲಕ ವಾಣಿ ವಿಲಾಸ ಅಣೆಕಟ್ಟಿಗೆ ಹರಿಸಲಾಗುವುದು.
ಈ ವೇಳೆ ಸಚಿವರಾದ ಜಿ. ಪರಮೇಶ್ವರ್, ಕೆ.ಎಚ್ ಮುನಿಯಪ್ಪ, ಎಂ.ಬಿ ಪಾಟೀಲ್, ಎನ್.ಎಸ್. ಬೋಸರಾಜು, ಬೈರತಿ ಸುರೇಶ್, ಕೆ.ಎನ್ ರಾಜಣ್ಣ, ಮಾಜಿ ಮುಖ್ಯಮಂತ್ರಿಗಳಾದ ವೀರಪ್ಪ ಮೊಯ್ಲಿ, ಕರ್ನಾಟಕ ಸರ್ಕಾರದ ದೆಹಲಿ ವಿಶೇಷ ಪ್ರತಿನಿಧಿ ಟಿ.ಬಿ ಜಯಚಂದ್ರ, ಪ್ರಕಾಶ್ ಹುಕ್ಕೇರಿ, ಶಾಸಕರಾದ ಎಸ್.ಮಂಜುನಾಥ್, ಶರತ್ ಬಚ್ಚೇಗೌಡ, ಹೆಚ್.ಡಿ ರಂಗನಾಥ್, ಪ್ರದೀಪ್ ಈಶ್ವರ್, ಹೆಚ್.ಸಿ ಬಾಲಕೃಷ್ಣ, ಕೆ.ಎಂ ಶಿವಲಿಂಗೇಗೌಡ, ಪುಟ್ಟಸ್ವಾಮಿ ಗೌಡ, ಕೆ. ಷಡಕ್ಷರಿ, ಕೆ.ಎಸ್ ಆನಂದ್, ಕೊತ್ತೂರು ಮಂಜುನಾಥ್, ವಿಧಾನ ಪರಿಷತ್ ಸದಸ್ಯರಾದ, ನಜೀರ್ ಅಹಮದ್, ಎಸ್. ರವಿ, ಸಂಸದರಾದ ಶ್ರೇಯಸ್ ಪಟೇಲ್ ಮತ್ತಿತರ ಶಾಸಕರು, ಮುಖಂಡರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.