ಸುದ್ದಿಮೂಲ ವಾರ್ತೆ
ಚೇಳೂರು ಅ. 20 : ಚಿಕ್ಕಬಳ್ಳಾಪುರದ ನೂತನ ಚೇಳೂರು ತಾಲ್ಲೂಕು ಘೋಷಣೆಗೆ ಮಾತ್ರ ಸೀಮಿತವಾಗದೆ, ವಿವಿಧ ಇಲಾಖೆಗಳನ್ನು ತೆರೆಯಬೇಕು ಎಂದು ತಾಲೂಕಿನ ಜನರ ಅಭಿಪ್ರಾಯವಾಗಿದೆ.
2019 ರಲ್ಲಿ ಆದ ತಾಲೂಕು ಘೋಷಣೆ ನಂತರ ಇಲ್ಲಿಯವರೆಗೂ ಯಾವುದೇ ತರಹ ಆಡಳಿತ ಕಚೇರಿಯಾಗಲಿ, ಅಧಿಕಾರಿಗಳಾಗಲಿ ಇಲ್ಲಿ ಕಾರ್ಯನಿರ್ವಹಿಸಲು ನೇಮಕಗೊಂಡಿಲ್ಲ. ಇದು ನತದೃಷ್ಟ ನಮ್ಮ ನೂತನ ತಾಲೂಕು ಚೇಳೂರಿನ ಕಥೆ.
ಕ್ಷೇತ್ರದ ಶಾಸಕರು ಕ್ಷೇತ್ರದ ಬೇರೆ ತಾಲೂಕುಗಳಿಗೆ ನೂರಾರು ಕೋಟಿ ಅನುದಾನ ಕೊಟ್ಟು ಕಟ್ಟಡಗಳಿಗೆ ಗುದ್ದಲಿ ಪೂಜೆ ಮಾಡುತ್ತಿದ್ದಾರೆ. ಆದರೆ, ಇಲ್ಲಿ ಏಕೆ ನಡೆಯುತ್ತಿಲ್ಲ ಇಲ್ಲಿನ ನಾಯಕರು ಏಕೆ ಸುಮ್ಮನಿದ್ದಾರೆ, ಶಾಸಕರ ಬಳಿ ಹೋಗಿ ಕೇಳುವಷ್ಟು ಧೈರ್ಯ ಇಲ್ಲಿನ ಯಾವೊಬ್ಬ ನಾಯಕನಿಗೆ ಇಲ್ಲವಾ, ಎಂಬ ಪ್ರಶ್ನೆ ಇಲ್ಲಿನ ಜನರದ್ದು.
ಕನಿಷ್ಠ ಪಕ್ಷ ತೆರೆದಿರುವ ತಾಲೂಕು ಕಚೇರಿಗೆ ಅಧಿಕಾರಿಗಳನ್ನು ನೇಮಕ ಮಾಡಿದರೆ ಅರ್ಧ ಜನರ ಸಮಸ್ಯೆ ನೀಗಿಸುವ ಕೆಲಸ ಆಗುತ್ತದೆ. ಚೇಳೂರು ತಾಲೂಕಿನ ಕಂದಾಯ ವೃತ್ತಕ್ಕೆ ಸಂಬಂದಿಸಿದ ತಕರಾರು ಅರ್ಜಿ ಕೇಸುಗಳಿಗೆ ತಿರುಗಾಡಲು ಜನರು ಪಡುವ ಕಷ್ಟ ಅಷ್ಟಿಷ್ಟಲ್ಲ.
ವಿವಿಧ ರೀತಿಯ ಕೇಸುಗಳಲ್ಲಿ ಭಾಗಿಯಾಗಲು ಚೇಳೂರಿನಿಂದ ಬಾಗೇಪಲ್ಲಿ ತಹಸೀಲ್ದಾರ್ ಕಛೇರಿಗೆ ಹೋಗಬೇಕು. ಚೇಳೂರಿನಿಂದ ಸುಮಾರು ನಲವತ್ತು ಕಿಮೀ ದೂರ ಅದರಲ್ಲೂ ಬಸ್ ಅನುಕೂಲ ಕಡಿಮೆ. ಬೆಳಿಗ್ಗೆ ಎದ್ದು ಹಾಗೋ-ಹೀಗೋ ಬಾಗೇಪಲ್ಲಿ ತಾಲೂಕು ಕಚೇರಿಗೆ ಹೋದರೆ ಅಲ್ಲಿ ತಹಸೀಲ್ದಾರ್ ಮಧ್ಯಾಹ್ನ ಮೂರು ಘಂಟೆಯ ಮೇಲೆ ವಿಚಾರಣೆ ಮಾಡುವುದು ಕೇಸುಗಳು, ವಿಚಾರಣೆ ಮುಗಿಯುವುದು ಸಾಯಂಕಾಲ ಐದರಿಂದ, ಆರು ಘಂಟೆ ಆಗಬಹುದು. ಆಗ ಚೇಳೂರಿಗೆ ಬಸ್ ಇರುವುದಿಲ್ಲ. ಆಗ ಮನೆಗಳಿಗೆ ತಲುಪಲು ರೈತರು ಹೈರಾಣಾಗುತ್ತಾರೆ.
ಚೇಳೂರು ತಾಲೂಕಿಗೆ ಸಂಬಂದಿಸಿದ ಜಮೀನು ಕೇಸುಗಳು ಚೇಳೂರು ತಾಲೂಕು ಕಚೇರಿನಲ್ಲೇ ತೆಗೆದುಕೊಳ್ಳಲು ತಹಸೀಲ್ದಾರ್ ಗೆ ನಿರ್ದೇಶನ ಕೊಡಿ, ಇಲ್ಲಿನ ಕಚೇರಿನಲ್ಲಿ ಕೇಸುಗಳು ತೆಗೆದುಕೊಂಡರೆ ರೈತರಿಗೆ ಬಾಗೇಪಲ್ಲಿ ತಾಲೂಕು ಕಚೇರಿಗೆ ಅಳೆಯುವ ಅಲ್ಪ ಬಾಧೆ ತಪ್ಪುತ್ತದೆ ಎಂದು ತಾಲೂಕಿನ ಶಾಸಕರಲ್ಲಿ ಮನವಿ ಮಾಡಿದ್ದಾರೆ.
(ಬಾಕ್ಸ್ ನಲ್ಲಿ) ಚೇಳೂರು ನೂತನ ತಾಲೂಕನ್ನಾಗಿ ಘೋಷಣೆ ಮಾಡಬೇಕು ಎಂದು ಹೋರಾಟ ಮಾಡಿದವರ ಪೈಕಿ ನಮ್ಮ ರೈತರ ಸಂಘ ಕೂಡ ಒಂದು. ನಾನು ಅಂದಿನ ಮುಖ್ಯಮಂತ್ರಿಗಳಾದ ಹೆಚ್.ಡಿ ಕುಮಾರಣ್ಣ ಬಲಿ ತೆರಳಿ ಅವರ ಕಚೇರಿನಲ್ಲಿ ಭೇಟಿ ಮಾಡಿ. ಚೇಳೂರನ್ನ ತಾಲೂಕನ್ನಾಗಿ ಘೋಷಣೆ ಮಾಡಬೇಕಾಗಿ ವಿನಂತಿ ಮಾಡಿದ್ದೆ. ಅಂದು ಭರವಸೆ ಕೊಟ್ಟಿದ್ದರು, ಅದರಂತೆ ತಮ್ಮ ಮೊದಲ ಬಜೆಟ್ನಲ್ಲಿ ಚೇಳೂರನ್ನ ತಾಲೂಕಾಗಿ ಘೋಷಣೆ ಮಾಡಿದರು. ಘೋಷಣೆ ಮಾಡಿ ನಾಲ್ಕು ವರ್ಷ ಕಳೆದರು ಇಲ್ಲಿಯವರಿಗೂ ಯಾವುದೇ ಇಲಾಖೆಗಳು ಹಾಗೂ ಅಧಿಕಾರಿಗಳು ಕಾರ್ಯನಿರ್ವಹಿಸಲು ನೇಮಕಮಾಡಲು ಆಗದೆ ಇರುವುದಕ್ಕೆ ಬೇಸರ ತಂದಿದೆ.