ಸುದ್ದಿಮೂಲ ವಾರ್ತೆ
ಮೈಸೂರು, ಸೆ.5:ಈಗ ನಾಡಹಬ್ಬ ದಸರಾಗೆ ಕಳೆಕಟ್ಟಿದೆ. ಮಂಗಳವಾರ, ದಸರಾ ಪ್ರಮುಖ ಆಕರ್ಷಣೆಯಾದ ವಿಜಯದಶಮಿಯಂದು ಚಿನ್ನದ ಅಂಬಾರಿ ಹೊತ್ತು ಹೆಸರಿಗೆ ತಕ್ಕಂತೆ ಗಜಗಾಂಭೀರ್ಯದಿಂದ ಸಾಗುವ ಅಭಿಮನ್ಯುವಿನ ಬಳಗ ರಾಜರ ಅರಮನೆಗೆ ಪ್ರವೇಶ ಮಾಡಿದೆ. ಅರಣ್ಯ ಭವನದಲ್ಲಿ ಬೀಡುಬಿಟ್ಟಿದ್ದ ಗಜಪಡೆ ಸರ್ವಾಲಂಕೃತವಾಗಿ ನಡೆದುಕೊಂಡು ಅರಮನೆಗೆ ಆಗಮಿಸಿದವು.
ಹೀಗೆ ರಸ್ತೆಯುದ್ದಕ್ಕೂ ಕಿಕ್ಕಿರಿದು ನೆರೆದಿದ್ದ ಜನರ ಜಯಘೋಷಗಳ ನಡುವೆ ಅರಮನೆಗೆ ಬಂದ ಗಜರಾಜರಿಗೆ ಜಿಲ್ಲಾಡಳಿತ ಮತ್ತು ಅರಮನೆ ಆಡಳಿತ ಮಂಡಳಿ ವತಿಯಿಂದ ಸಾಂಪ್ರದಾಯಿಕವಾಗಿ ಪೂಜೆ ನೆರವೇರಿಸಿ ಅದ್ಧೂರಿಯಾಗಿ ಸ್ವಾಗತಿಸಲಾಯಿತು. ಮಾಧ್ಯಾಹ್ನ 12.01 ರಿಂದ 12.51 ರ ಅಭಿಜಿನ್ ಲಗ್ನದಲ್ಲಿ ದಸರಾ ಗಜಪಡೆಗಳಿಗೆ ಅರ್ಚಕ ಪ್ರಹ್ಲಾದ್ ರಾವ್ ಅವರು ಸಾಂಪ್ರದಾಯಿಕ ಪೂಜಾ ವಿಧಿವಿಧಾನಗಳನ್ನು ಮಾಡಿದ ನಂತರ ಅರಮನೆಯ ಗೊಂಬೆ ತೊಟ್ಟಿಯಲ್ಲಿ ಮೈಸೂರಿನ ಅಧಿದೇವತೆ ಚಾಮುಂಡೇಶ್ವರಿದೇವಿಗೆ ಪೂಜೆ ಸಲ್ಲಿಸಿದರು.
ಪುಷ್ಪಾರ್ಚನೆ ಸಲ್ಲಿಸಿ ಸಚಿವ ಮಹದೇವಪ್ಪಸ್ವಾಗತ
ಗಜಪಡೆಗೆ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಸಾಂಪ್ರದಾಯಿಕವಾಗಿ ಪೂಜೆ ಸಲ್ಲಿಸಿ ಸ್ವಾಗತಿಸಿದರು. ಜ ಅರಮನೆಯ ಜಯಮಾರ್ತಾಂಡ ದ್ವಾರದಲ್ಲಿ ಅಂಬಾರಿ ಆನೆ ಅಭಿಮನ್ಯು ನರೆತೃತ್ವದ ವಿಜಯ, ವರಲಕ್ಷ್ಮಿ, ಧನಂಜಯ, ಮಹೇಂದ್ರ, ಭೀಮ, ಗೋಪಿ, ಕಂಜನ್ ಒಳಗೊಂಡ ಗಜಪಡೆಗೆ ಪಾದಪೂಜೆ, ದ್ವಾರಪಾಲಕ ಪೂಜೆ, ಚಾಮರಸೇವೆ ಮಾಡಿ ಪುಷ್ಪಾರ್ಚನೆ ಅರ್ಪಿಸಲಾಯಿತು.
ಜಾನಪದ ಕಲಾತಂಡಗಳ ನೃತ್ಯ, ಪೂರ್ಣಕುಂಭ ಸ್ವಾಗತ ಮತ್ತು ಮಂಗಳ ವಾದ್ಯ, ಪೊಲೀಸ್ ಬ್ಯಾಂಡ್ ನಿನಾದದೊಂದಿಗೆ ಜಯಮಾರ್ತಾಂಡ ದ್ವಾರದಿಂದ ಅರಮೆನೆಯ ಅಂಗಳಕ್ಕೆ ಬರಮಾಡಿಕೊಳ್ಳಲಾಯಿತು. ಅಭಿಮನ್ಯು ನೇತೃತ್ವದ ಗಜಪಡೆ ರಾಜಗಾಂಭೀರ್ಯದಿಂದ ಅರಮನೆ ಅಂಗಳಕ್ಕೆ ಹೆಜ್ಜೆ ಹಾಕಿದವು.
ಸಚಿವ .ಮಹದೇವಪ್ಪ ಅವರು ಗಜಪಡೆಯ ಕಾವಾಡಿಗರು ಮತ್ತು ಮಾವುತರಿಗೆ ಮೂಲಭೂತ ಸಾಮಾಗ್ರಿಗಳನ್ನು ವಿತರಿಸಿದರು. ದಸರಾವನ್ನು ಅತ್ಯುತ್ತಮವಾಗಿ ನಡೆಸಿಕೊಡುವಂತೆ ದಸರಾ ವಿಶೇಷ ಕರ್ತವ್ಯ ಅಧಿಕಾರಿಗಳಿಗೂ ಕೂಡ ಸಚಿವರು ತಾಂಬೂಲ ನೀಡಿದರು.
ಪರಂಪರೆಯ ವೈಭವ
ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ನಾಡಹಬ್ಬ ಮೈಸೂರು ದಸರವನ್ನು ಮೈಸೂರಿನ ಪರಂಪರೆ ಮತ್ತು ವಿಜಯನಗರದ ವೈಭವವನ್ನು ಪ್ರತಿಬಿಂಬಿಸುವಂತೆ ಅತ್ಯಂತ ಶಿಸ್ತುಬದ್ಧವಾಗಿ ಮತ್ತು ಅರ್ಥಪೂರ್ಣವಾಗಿ ಆಚರಿಸಲಾಗುವುದು. ಈ ಹಿನ್ನೆಲೆ ಜಿಲ್ಲಾಡಳಿತ, ಅರಮನೆ ಮಂಡಳಿ ಹಾಗೂ ಜಿಲ್ಲೆಯ ಪೊಲೀಸ್ ಇಲಾಖೆಗೆ ವಿಶೇಷ ಜವಾಬ್ದಾರಿ ನೀಡಲಾಗಿದೆ ಎಂದು ತಿಳಿಸಿದರು.
ಪ್ರತಿನಿತ್ಯ ಪೊಲೀಸ್ ಬಂದೋಬಸ್ತ್ಲಿನಲ್ಲಿ ಗಜಪಡೆಗೆ ತಾಲೀಮು ನಡೆಯಲಿದೆ. ದಸರಾ ಮಹೋತ್ಸವದಲ್ಲಿ ಭಾಗವಹಿಸುವ ಆನೆಗಳ ಮಾವುತರು ಹಾಗೂ ಕಾವಾಡಿಗಳು ಅವರ ಕುಟುಂಬಗಳ ವಾಸ್ತವ್ಯಕ್ಕೆ ಮೂಲಭೂತ ಸೌಕರ್ಯಗಳನ್ನು ಒದಗಿಸಲಾಗಿದೆ. ಈ ಹಿನ್ನೆಲೆ ಅರಮನೆ ಅಂಗಳದಲ್ಲಿ 30ಕ್ಕೂ ಹೆಚ್ಚು ಸುಸಜ್ಜಿತ ಶೆಡ್ ನಿರ್ಮಾಣ ಮಾಡಲಾಗಿದೆ. ಅವರಿಗೆ ವಿಶೇಷ ಭೋಜನದ ವ್ಯವಸ್ಥೆ ಮಾಡಲಾಗಿದೆ ಎಂದರು.
ಆನೆಗಳ ಜೊತೆ ಸರಿಸುಮಾರು ಎರಡು ತಿಂಗಳ ಕಾಲ ಅರಮನೆ ಆವರಣದಲ್ಲಿ ವಾಸವಿರುವ ಮಾವುತರು ಮತ್ತು ಕಾವಾಡಿಗರ ಕುಟುಂಬಕ್ಕೆ ಮೂಲ ಸೌಲಭ್ಯದ ಜೊತೆಗೆ ಅವರ ಮಕ್ಕಳಿಗೆ ತಾತ್ಕಾಲಿಕವಾಗಿ ಶಾಲೆ ಆರಂಭಿಸಲಾಗುವುದು. ಈ ಅವಧಿಯಲ್ಲಿ ಶಿಕ್ಷಕರನ್ನು ನೇಮಿಸಿ ಮಕ್ಕಳಿಗೆ ವಿದ್ಯಾಭ್ಯಾಸ ನೀಡಲಾಗುತ್ತದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಮೇಯರ್ ಶಿವಕುಮಾರ್, ಶಾಸಕರಾದ ಕೆ.ಹರೀಶ್ ಗೌಡ, ಶ್ರೀವತ್ಸ, ವಿಧಾನ ಪರಿಷತ್ ಸದಸ್ಯ ಸಿ.ಎನ್.ಮಂಜೇಗೌಡ, ಸಂಸದ ಪತಾಪ ಸಿಂಹ, ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ, ಜಿಲ್ಲಾ ಪಂಚಾಯ್ತಿ ಸಿಇಒ ಕೆ.ಎಂ.ಗಾಯಿತ್ರಿ, ನಗರ ಪೊಲೀಸ್ ಆಯುಕ್ತ ರಮೇಶ್ ಬಾನೂತ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೀಮಾ ಲಾಟ್ಕರ್, ಅರಣ್ಯ ಸಂರಕ್ಷಣಾಧಿಕಾರಿ ಮಾಲತಿ ಪ್ರಿಯಾ, ಉಪ ಅರಣ್ಯ ಸಂರಕ್ಷಣಾಧಿಕಾರಿ ಸೌರಭ್ ಕುಮಾರ್, ಅರಮನೆ ಮಂಡಳಿ ಉಪನಿರ್ದೇಶಕ ಸುಬ್ರಹ್ಮಣ್ಯ ಮತ್ತಿತರರು ಇದ್ದರು.