ಸುದ್ದಿಮೂಲ ವಾರ್ತೆ
ತುಮಕೂರು, ಮೇ 11: ನಗರದ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು, ವಿಶ್ವವಿದ್ಯಾಲಯ ಕಲಾ ಕಾಲೇಜು,
ವಿಶ್ವವಿದ್ಯಾಲಯ ವಿಜ್ಞಾನ ಕಾಲೇಜಿನಲ್ಲಿ ಸ್ಥಾಪಿಸಿರುವ ಭದ್ರತಾ ಕೊಠಡಿಗಳಲ್ಲಿಟ್ಟಿರುವ ಇವಿಎಂ ಮತಪೆಟ್ಟಿಗೆಗಳಿಗೆ ಬಿಗಿ ಭದ್ರತೆಯನ್ನು ಒದಗಿಸಲಾಗಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ವೈ.ಎಸ್.ಪಾಟೀಲ ತಿಳಿಸಿದ್ದಾರೆ.
ಭದ್ರತಾ ಕೊಠಡಿಗಳ ಸುತ್ತ ಮೊದಲ ಹಂತದಲ್ಲಿ ಶಸ್ತ್ರ ಸಜ್ಜಿತ ಕೇಂದ್ರೀಯ ರಕ್ಷಣಾ ಪಡೆಗಳು, ದ್ವಿತೀಯ ಹಂತದಲ್ಲಿ ಶಸ್ತ್ರ ಸಜ್ಜಿತ ಪೊಲೀಸ್ ಸಿಬ್ಬಂದಿ ಹಾಗೂ ಮೂರನೇ ಹಂತದಲ್ಲಿ ಜಿಲ್ಲಾಧಿಕಾರಿಗಳಿಂದ ನೇಮಕವಾದ ಕಾರ್ಯನಿರ್ವಾಹಕ ದಂಡಾಧಿಕಾರಿಗಳು 24×7 ಭದ್ರತೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.
ಭದ್ರತಾ ಕೊಠಡಿಗೆ ಶಸ್ತ್ರ ಸಜ್ಜಿತ ಕೇಂದ್ರೀಯ ಭದ್ರತಾ ದಳದ 4 ತುಕಡಿ, ಕೆ.ಎಸ್.ಆರ್.ಪಿ.ಯ 6 ಪ್ಲಾಟೂನ್ ಹಾಗೂ ಇಬ್ಬು ಡಿವೈಎಸ್ಪಿ, 6 ಮಂದಿ ಇನ್ಸ್ಪೆಕ್ಟರ್, 16 ಸಬ್ ಇನ್ಸ್ಪೆಕ್ಟರ್, 46 ಸಹಾಯಕ ಸಬ್ಇನ್ಸ್ಪೆಕ್ಟರ್, 100 ಮಂದಿ ಪೊಲೀಸರು, 14 ಮಹಿಳಾ ಪೊಲೀಸ್ ಸಿಬ್ಬಂದಿಗಳನ್ನು ಹಾಗೂ 18 ಜನ ಕಾರ್ಯನಿರ್ವಾಹಕ
ದಂಡಾಧಿಕಾರಿಗಳನ್ನು ನಿಯೋಜಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.