ಸುದ್ದಿಮೂಲ ವಾರ್ತೆ
ಕೆ.ಆರ್.ಪುರ,ಆ.10:ಕೆ.ಆರ್.ಪುರ ಮತ ಕ್ಷೇತ್ರದಲ್ಲಿ ಪಕ್ಷಾಂತರ ಪರ್ವ ಆರಂಭವಾಗಿದ್ದು, ಪ್ರಮುಖ ಮೂವರು ಪಾಲಿಕೆ ಸದಸ್ಯರು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಡಿ.ಕೆ.ಮೋಹನ್ಬಾಬು ನೇತೃತ್ವದಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಸಮ್ಮುಖದಲ್ಲಿ ಬಿಜೆಪಿ ಪಕ್ಷ ತೊರೆದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು.
ಮೊದಲಿನಿಂದಲೂ ಶಾಸಕ ಬೈರತಿ ಬಸವರಾಜ ಹಾಗೂ ಮಾಜಿ ಶಾಸಕ ನಂದೀಶ್ ರೆಡ್ಡಿ ಬಣಗಳ ಎಲ್ಲವೂ ಸರಿಯಿಲ್ಲ ಎಂಬುದು ಎಲ್ಲರಿಗೂ ತಿಳಿದಿದ್ದ ವಿಚಾರ, ಶಾಸಕ ಬೈರತಿ ಬಸವರಾಜ ಕಾಂಗ್ರೆಸ್ ಪಕ್ಷದಿಂದ ಬಿಜೆಪಿಗೆ ವಲಸೆ ಬಂದ ನಂತರ ಮೂಲ ಬಿಜೆಪಿ ಕಾರ್ಯಕರ್ತರನ್ನು ಕಡೆಗಣಿಸಲಾಗುತ್ತಿದೆ ಪಾಲಿಕೆ ಸದಸ್ಯರಿಂದ ಆರೋಪ ಕೇಳಿ ಬಂದಿತ್ತು. ಈಗ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಮಾಜಿ ಶಾಸಕ ನಂದೀಶ್ ರೆಡ್ಡಿ ಅಪ್ತರಾಗಿ ಗುರುತಿಸಿಕೊಂಡಿದ್ದ ಮೂವರು ಪಾಲಿಕೆ ಮಾಜಿ ಸದಸ್ಯರಾದ ಕಲ್ಕೆರೆ ಶ್ರೀನಿವಾಸ್, ವೀರಣ್ಣ ಹಾಗೂ ಬಂಡೆ ರಾಜಣ್ಣ ತಮ್ಮ ಅಪಾರ ಬೆಂಬಲಿಗರೊಂದಿಗೆ ಕಾಂಗ್ರೆಸ್ ಪಕ್ಷದ ತತ್ವ ಸಿದ್ದಾಂತ ಮೆಚ್ಚಿ ಸೇರ್ಪಡೆಯಾಗುವ ಮೂಲಕ ಬಿಜೆಪಿ ಶಾಸಕ ಬೈರತಿ ಬಸವರಾಜ ಅವರಿಗೆ ಶಾಕ್ ನೀಡಿದ್ದಾರೆ.
ಇದೀಗ ಶಾಸಕ ಬೈರತಿ ಬಸವರಾಜರವರನ್ನು ಎದುರಿಸಲು ಅವರದೇ ಪಕ್ಷದಲ್ಲಿ ಉಳಿದುಕೊಂಡು ಎದುರಿಸಲು ಸಾಧ್ಯವಿಲ್ಲ ಎಂದು ಅರಿತು ಮತ್ತೊಂದು ರಾಷ್ಟ್ರೀಯ ಪಕ್ಷವಾದ ಕಾಂಗ್ರೆಸ್ಗೆ ಸೇರಿದ್ದಾರೆ. ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಡಿ.ಕೆ.ಮೋಹನ್ಬಾಬು ಅವರ ನೇತೃತ್ವದಲ್ಲಿ ಈ ಮೂವರು ಪಾಲಿಕೆ ಮಾಜಿ ಸದಸ್ಯರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದು, ಕೆ.ಆರ್.ಪುರದಲ್ಲಿ ಕಾಂಗ್ರೆಸ್ ಪಕ್ಷವನ್ನು ಇನ್ನಷ್ಟು ಬಲಪಡಿಸುವ ಮೂಲಕ ಕಾಂಗ್ರೆಸ್ ತೆಕ್ಕೆಗೆ ತರಲು ಶ್ರಮ ವಹಿಸಲು ಸಿದ್ದರಾಗಿದ್ದಾರೆ.
ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ರವರು ಕಾಂಗ್ರೆಸ್ ಪಕ್ಷದ ತತ್ವ ಸಿದ್ದಾಂತ ಮೆಚ್ಚಿ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ.
ಕೆ.ಆರ್.ಪುರದಲ್ಲಿ ಮತ್ತೆ ಕಾಂಗ್ರೆಸ್ ಬಾವುಟ ಹಾರಿಸಲು ಹಾಗೂ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಳ್ಳುವಂತೆ ಮಾಜಿ ಕಾರ್ಪೋರೇಟರ್ಗಳಿಗೆ ಸೂಚಿಸಿದ್ದಾರೆ.
ಡಿ.ಕೆ.ಮೋಹನ್ಬಾಬು ಮಾತನಾಡಿ, ಕೆ.ಆರ್.ಪುರ ಕ್ಷೇತ್ರ ಕಾಂಗ್ರೆಸ್ ಭದ್ರಕೋಟೆ, ಈ ಕೋಟೆಯನ್ನು ಕಟ್ಟಲು ಪ್ರತಿಯೊಬ್ಬರೂ ಕೈ ಜೋಡಿಸುತ್ತಿದ್ದಾರೆ. ಮುಂದಿನ ಎಲ್ಲಾ ಚುನಾವಣೆಗಳನ್ನು ಕೆ.ಆರ್.ಪುರದಲ್ಲಿ ಕಾಂಗ್ರೆಸ್ ಗೆಲ್ಲಲಿದೆ ಎಂದು ಹೇಳಿದರು. ಸೇರ್ಪಡೆಗೊಂಡಿರುವ ಪಾಲಿಕೆ ಮಾಜಿ ಸದಸ್ಯರನ್ನು ಜೊತೆಯಲ್ಲಿಟ್ಟುಕೊಂಡು ಪಕ್ಷ ಸಂಘಟಿಸುವ ಕೆಲಸ ಮಾಡುತ್ತೇನೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಸಚಿವ ಬೈರತಿ ಸುರೇಶ್, ಕೆಪಿಸಿಸಿ ಪ್ರ.ಕಾರ್ಯದರ್ಶಿ ಡಿ.ಕೆ.ಮೋಹನ್ಬಾಬು, ಪಾಲಿಕೆ ಮಾಜಿ ಸದಸ್ಯರಾದ ವೀರಣ್ಣ, ಕಲ್ಕೆರೆ ಶ್ರೀನಿವಾಸ್, ಬಂಡೆರಾಜಣ್ಣ ಮತ್ತಿತರರಿದ್ದರು.