ಸುದ್ದಿಮೂಲ ವಾರ್ತೆ
ಮೈಸೂರು, ನ.08 : ದೆಹಲಿಯಲ್ಲಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು, ಬಿಜೆಪಿಯಿಂದ ಹಲವು ಮಂದಿ ತಮ್ಮ ಪಕ್ಷಕ್ಕೆ ಸೇರ್ಪಡೆ ಆಗುತ್ತಾರೆ ಎಂದು ಹೇಳುತ್ತಿದ್ದಂತೆ ಇತ್ತ ಮೈಸೂರಿನಲ್ಲಿ ಬುಧವಾರ ಮಾಜಿ ಸಚಿವ ಎಸ್.ಟಿ. ಸೋಮಶೇಖರ್ ಅವರು, ತಮ್ಮ ಪಕ್ಷದ ಬಿಜೆಪಿ ಮುಖಂಡರ ವಿರುದ್ಧ ಕೆಂಡದಂತೆ ಕಾರಿದ್ದಾರೆ. ಇದು ಅವರು ಬಿಜೆಪಿ ತೊರೆದು ಕಾಂಗ್ರೆಸ್ ಸೇರುವ ಮುನ್ಸೂಚನೆ ಎಂಬ ಮಾತುಗಳು ರಾಜ್ಯ ರಾಜಕೀಯದ ಪಡಸಾಲೆಯಲ್ಲಿ ಕೇಳಿ ಬರುತ್ತಿದೆ.
ಸೋಮಶೇಖರ್ ಕಾಂಗ್ರೆಸ್ ಸೇರುವುದು ಖಚಿತ. ಆದರೆ, ಅವರೊಡನೆ ಇನ್ಯಾರ್ಯಾರು ಸೇರುತ್ತಾರೆ ಎಂಬುದು ಕೆಲವೇ ದಿನಗಳಲ್ಲಿ ತಿಳಿಯಲಿದ್ದು, ಸೋಮಶೇಖರ್ ಅವರೊಡನೆ ಯಶವಂತಪುರ ವಿಧಾನ ಕ್ಷೇತ್ರದ ಆನೇಕ ಮುಖಂಡರು ಪಕ್ಷ ತೊರೆಯುವುದು ಗ್ಯಾರಂಟಿ ಎಂದು ಹೇಳಲಾಗುತ್ತಿದೆ.
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸೋಮಶೇಖರ್, ಬಿಜೆಪಿ ಮುಖಂಡರ ಬಗ್ಗೆ ಆಕ್ರೋಶ ವ್ತಕ್ತಪಡಿಸಿದರಲ್ಲದೇ, ಇದೇ ವೇಳೆ ಕೆ.ಎಸ್. ಈಶ್ವರಪ್ಪನವರ ವಿರುದ್ಧ ಕೆಂಡಮಂಡಲವಾದರು.
ಬಿಜೆಪಿಯವರು ಪಕ್ಷಕ್ಕೆ ಬರುವಾಗ ಜಾಮೂನು ಕೊಡುತ್ತಾರೆ, ಅಧಿಕಾರ ಮುಗಿದ ಮೇಲೆ ವಿಷ ಕೊಡುತ್ತಾರೆ ಎಂದು ಪಕ್ಷದ ವಿರುದ್ಧವೇ ಆಕ್ರೋಶ ಹೊರ ಹಾಕಿದರು. ನಾನು ಕಾಂಗ್ರೆಸ್ ನಲ್ಲಿದ್ದೆ, ಅವರಾಗಿಯೇ ಪಕ್ಷಕ್ಕೆ ಸೇರಿಸಿಕೊಂಡರು. ಈಗ ಎಸ್. ಟಿ ಸೋಮಶೇಖರ್ ಹೋದರೆ ಹೋಗಲಿ ಎಂದು ಮಾತನಾಡುತ್ತಿದ್ದಾರೆ.
ನನ್ನನ್ನು ಪಕ್ಷ ಬಿಡಿಸಲು ರೆಡಿಯಾಗಿದ್ದಾರೆ. ನನ್ನ ಕ್ಷೇತ್ರದ ಅಭಿವೃದ್ಧಿಗೆ ಸಿಎಂ ಮತ್ತು ಡಿಸಿಎಂ ಬಳಿ ಹೋಗುತ್ತೇನೆ. ಇದರಲ್ಲಿ ತಪ್ಪೇನು. ನಾನು ಸಿಎಂ, ಡಿಸಿಎಂರನ್ನು ಹೊಗಳುವುದನ್ನು ಸಹಿಸುವುದಿಲ್ಲ. ನನ್ನ ಕಚೇರಿಯಿಂದ ಕಾಂಗ್ರೆಸ್ ಗ್ಯಾರಂಟಿ ಫಾಲೋ ಅಪ್ ಮಾಡುತ್ತೇನೆ. ಕಾಂಗ್ರೆಸ್ ಗ್ಯಾರಂಟಿಗೆ ನೀವೇಕೆ ಉತ್ತೇಜನ ನೀಡುತ್ತೀರಿ ಎಂದು ಬಿಜೆಪಿಯವರು ನನ್ನನ್ನು ಪ್ರಶ್ನೆ ಮಾಡುತ್ತಾರೆ.
ಬಿಜೆಪಿ ಬರ ಅಧ್ಯಯನ ಮಾಡಿರೇ ಏನು ಫಲ ?
ಬಿಜೆಪಿ ಬರ ಅಧ್ಯಯನದಿಂದ ಏನು ಪ್ರಯೋಜನವಿಲ್ಲ.ಕೇಂದ್ರದಲ್ಲಿ ನಮ್ಮದೇ ಸರ್ಕಾರ ಇದೆ, ಅಧಿಕಾರಿಗಳು ಬರ ಅಧ್ಯಯನ ಮಾಡಿ ಹೋಗಿದ್ದಾರೆ. ನಾವು ಇಲ್ಲಿನ ಪರಿಸ್ಥಿತಿಯನ್ನು ಕೇಂದ್ರದವರಿಗೆ ಮನವರಿಕೆ ಮಾಡಿಕೊಡಬೇಕು. ಅದನ್ನು ಬಿಟ್ಟು ಬರ ಅಧ್ಯಯನ ಪ್ರವಾಸ ಮಾಡಿದರೆ ಯಾವುದೇ ಅನುಕೂಲ ಇಲ್ಲ.
ಈಶ್ವರಪ್ಪನವರಿಗೆ ಬೆಲೆ ಇಲ್ಲ
ಪಕ್ಷದಲ್ಲಿ ಮಾಜಿ ಸಚಿವ ಈಶ್ವರಪ್ಪನವರಿಗೆ ಕಿಂಚಿತ್ತೂ ಬೆಲೆ ಇಲ್ಲ. ಬೆಲೆ ಇಲ್ಲದವರ ಹೇಳಿಕೆಗಳಿಗೆ ನಾನು ತಲೆ ಕೆಡಿಸಿಕೊಳ್ಳುವುದಿಲ್ಲ. ನನ್ನನ್ನು ಪಕ್ಷದಿಂದ ಬಿಟ್ಟುಹೋಗು ಅಂತ ಹೇಳಲು ಈಶ್ವರಪ್ಪ ಯಾರು. ಈಶ್ವರಪ್ಪನವರೇನು ರಾಜ್ಯಾಧ್ಯಕ್ಷರೇ. ನಾನು ಈಶ್ವರಪ್ಪ ಅವರನ್ನು ನಂಬಿ ಪಕ್ಷಕ್ಕೆ ಬರಲಿಲ್ಲ. ಯಡಿಯೂರಪ್ಪನವರನ್ನು ನಂಬಿ ಪಕ್ಷಕ್ಕೆ ಬಂದಿದ್ದೇನೆ. ಈ ರೀತಿಯ ಬೆಳವಣಿಗೆಯಾದ ಮೇಲೆ ನಾನು ಯಡಿಯೂರಪ್ಪ ಜೊತೆ ಮಾತನಾಡಿದ್ದೇನೆ. ಅವರು ಯಾವುದೇ ಕಾರಣಕ್ಕೂ ಪಕ್ಷ ಬಿಡಬೇಡ ಎಂದು ಹೇಳಿದ್ದಾರೆ. ಅವರ ಮಾತಿಗೆ ಬೆಲೆ ಕೊಟ್ಟು ನಾನು ಪಕ್ಷದಲ್ಲಿದ್ದೇನೆ. ಈಗ ಯಾರೋ 5 ಜನ ಮಾತನಾಡುತ್ತಿರುವವರ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ.
ಊಹಾಪೋಹ
ನಾನು ಬಿಜೆಪಿ ಪಕ್ಷ ಬಿಟ್ಟು ಹೋಗುವುದಿಲ್ಲ.ಮಾನಸಿಕವಾಗಿ, ದೈಹಿಕವಾಗಿ ನಾನು ಪಕ್ಷದಲ್ಲೇ ಇದ್ದೇನೆ. ಕಾಂಗ್ರೆಸ್ ಸೇರುತ್ತೇನೆ ಎಂಬುದೆಲ್ಲ ಊಹಾಪೋಹ. ಯಡಿಯೂರಪ್ಪ ಅವರ ಮಾತು ನಂಬಿ ಬಿಜೆಪಿಯಲ್ಲಿದ್ದೇನೆ. ಆದರೆ, ಪಕ್ಷದ ಒಳಗೆ ನನ್ನನ್ನು ಓಡಿಸುವ ಕೆಲಸ ಮಾಡುತ್ತಿದ್ದಾರೆ. ಕಳೆದ ಚುನಾವಣೆಯಲ್ಲಿ ನಮ್ಮ ಪಕ್ಷದವರೇ ನನ್ನ ವಿರುದ್ಧ ಕೆಲಸ ಮಾಡಿದ್ದರು. ಈ ಬಗ್ಗೆ ದೂರು ಕೊಟ್ಟರು ಏನೂ ಪ್ರಯೋಜನವಾಗಲಿಲ್ಲ. ಅವರ ಹುಟ್ಟು ಹಬ್ಬವನ್ನೇ ಕ್ಷೇತ್ರದಲ್ಲಿ ಅದ್ಧೂರಿಯಾಗಿ ಮಾಡಿದರು. ಇದರ ಅರ್ಥವೇನು ಎಂದು ಪ್ರಶ್ನಿಸಿದರು.