ಸುದ್ದಿಮೂಲ ವಾರ್ತೆ
ಬೆಂಗಳೂರು,ಏ.27: ಪ್ರಧಾನಿ ನರೇಂದ್ರ ಮೋದಿಯವರು ಅಭಿವೃದ್ಧಿ ಕಾರ್ಯಗಳು ಮತ್ತು ಜನಪರ ಯೋಜನೆಗಳ ಮೂಲಕ ಜನರನ್ನು ತಲುಪುವುದು ಹೇಗೆನ್ನುವುದನ್ನು ತೋರಿಸಿ ಕೊಟ್ಟಿದ್ದಾರೆ. ನಾವು ಇದರ ಆಧಾರದ ಮೇಲೆಯೇ ಜನತಾ ಅದಾಲತ್ಗೆ ಹೋಗುತ್ತಿದ್ದು, ಸ್ಪಷ್ಟ ಬಹುಮತ ಪಡೆಯಲಿದ್ದೇವೆ ನಮ್ಮ ಪಕ್ಷವು ಕಾಂಗ್ರೆಸ್ಸಿನಂತೆ ಹುಸಿ ಭರವಸೆಗಳನ್ನು ನೀಡಿ, ಜನರಿಗೆ ಮೋಸ ಮಾಡುವುದಿಲ್ಲ ಎಂದು ಮಲ್ಲೇಶ್ವರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮತ್ತು ಸಚಿವ ಡಾ.ಸಿ ಎನ್ ಅಶ್ವತ್ಥನಾರಾಯಣ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಗುರುವಾರ ಅವರು ವೈಯಾಲಿಕಾವಲ್ನ ಮುನಿವೀರಪ್ಪ ಬ್ಲಾಕ್ನಲ್ಲಿ ಪಾದಯಾತ್ರೆ ಮೂಲಕ ಮತಯಾಚನೆ ಮಾಡಿದ ಬಳಿಕ, ಬೂತ್ ಬಿಜೆಪಿ ಅಧ್ಯಕ್ಷ ಪರಮೇಶ್ವರ ಅವರ ಮನೆಯಲ್ಲಿ ಮೋದಿಯವರು ಪಕ್ಷದ ಕಾರ್ಯಕರ್ತರೊಂದಿಗೆ ನಡೆಸಿದ ಸಂವಾದವನ್ನು ವೀಕ್ಷಿಸಿ ಮಾತನಾಡಿದರು.
ಮೋದಿಯವರ ಇಂದಿನ ಭಾಷಣದಿಂದ ಬಿಜೆಪಿ ಕಾರ್ಯಕರ್ತರ ಉತ್ಸಾಹ ಇಮ್ಮಡಿಸಿದೆ. ಇದರಿಂದ ಚುನಾವಣೆಯ ದಿಕ್ಕುದೆಸೆಯೇ ಬದಲಾಗಲಿದ್ದು, ಈಗಾಗಲೇ ಇರುವ ಬಿಜೆಪಿ ಪರ ಒಲವು ಮತ್ತಷ್ಟು ಪ್ರಚಂಡವಾಗಲಿದೆ. ಉಳಿದ ಪಕ್ಷಗಳು ಏನೇ ಭರವಸೆ ಕೊಟ್ಟರೂ ಜನ ಅದಕ್ಕೆ ಮರುಳಾಗುವ ಕಾಲ ಈಗ ಇಲ್ಲ ಎಂದು ಅವರು ಹೇಳಿದ್ದಾರೆ.
ಕಾಂಗ್ರೆಸ್ ಮೊದಲಿನಿಂದಲೂ ಓಲೈಕೆ ರಾಜಕಾರಣ ಮಾಡುತ್ತ ಬಂದಿದೆ ಎನ್ನುವ ಅಮಿತ್ ಷಾ ಮಾತು ಸತ್ಯವಾಗಿದೆ. ಪಿಎಫ್ಐ ಕಾರ್ಯಕರ್ತರ ಮೇಲಿದ್ದ ಪ್ರಕರಣಗಳನ್ನೆಲ್ಲ ವಾಪಸ್ ತೆಗೆದುಕೊಂಡಿದ್ದು, ಯಾರು ಎನ್ನುವುದಕ್ಕೆ ಕಾಂಗ್ರೆಸ್ ಉತ್ತರಿಸಬೇಕು. ಚುನಾವಣೆ ಸಮಯ ಅಂತ ಬಾಯಿಗೆ ಬಂದಂತೆ ಮಾತನಾಡಿದರೆ ನಡೆಯುವುದಿಲ್ಲ ಎಂದು ಅವರು ತೀಕ್ಷ್ಣವಾಗಿ ನುಡಿದರು.
ಸಿದ್ದರಾಮಯ್ಯ ಈಗ ಮೀಸಲಾತಿ ಹೆಚ್ಚಳದ ಬಗ್ಗೆ ಮಾತನಾಡುತ್ತಿದ್ದಾರೆ. ಅದರೆ ಅವರು ಮುಖ್ಯಮಂತ್ರಿಯಾಗಿದ್ದಾಗ ಏನನ್ನೂ ಮಾಡದೆ ಕಾಲ ತಳ್ಳಿದರು. ನಾವು ಸಮುದಾಯಗಳ ಜನಸಂಖ್ಯೆಗೆ ಅನುಗುಣವಾಗಿಯೇ ಮೀಸಲಾತಿ ಪರಿಷ್ಕರಿಸಿ, ಒಳಮೀಸಲಾತಿಯನ್ನೂ ತಂದಿದ್ದೇವೆ. ಇದನ್ನು ಜಾರಿಗೆ ತಂದೇ ತೀರುತ್ತೇವೆ ಎಂದು ಅವರು ಭರವಸೆ ನೀಡಿದರು.
ಸಮಾಜಘಾತಕರು ಮತ್ತು ದೇಶದ್ರೋಹಿಗಳನ್ನು ಹೇಗೆ ಮಟ್ಟ ಹಾಕಬೇಕು ಎನ್ನುವುದನ್ನು ಉತ್ತರಪ್ರದೇಶದಲ್ಲಿ ಯೋಗಿ ಆದಿತ್ಯನಾಥ್ ತೋರಿಸಿಕೊಟ್ಟಿದ್ದಾರೆ. ಅಂತಹ ಜನಪರ ಕಾನೂನುಗಳು ಕರ್ನಾಟಕದಲ್ಲೂ ಜಾರಿಗೆ ಬರಲಿವೆ. ಐವತ್ತು ವರ್ಷಗಳ ಕಾಲ ರಾಜ್ಯ ಆಳಿರುವ ಕಾಂಗ್ರೆಸ್ಸಿನ ಅಸಲಿ ಬಣ್ಣ ಎಲ್ಲರಿಗೂ ಗೊತ್ತಿದೆ ಎಂದು ಅಶ್ವತ್ಥನಾರಾಯಣ ಪ್ರತಿಪಾದಿಸಿದರು.
ಸಚಿವರ ಜತೆಯಲ್ಲಿ ಬಿಬಿಎಂಪಿ ಮಾಜಿ ಕಾರ್ಪೊರೇಟರ್ ಹೇಮಲತಾ, ವಾರ್ಡ್ ಬಿಜೆಪಿ ಅಧ್ಯಕ್ಷ ಕುಮಾರ್ ಮುಂತಾದವರಿದ್ದರು.