ಸುದ್ದಿಮೂಲ ವಾರ್ತೆ
ತಿಪಟೂರು,ಆ.11: ನಿವೃತ್ತ ನೌಕರರು ಅನುಭವಿಗಳಾಗಿದ್ದು ವಯಸ್ಸಿನ ಬಗ್ಗೆ ಚಿಂತಿಸದೆ ಆದರ್ಶ ಬದುಕನ್ನು ನಡೆಸುವ ಮೂಲಕ ಸಮಾಜವನ್ನು ತಿದ್ದುವ ಮೂಲಕ ಯುವಜನರನ್ನು ಪ್ರೋತ್ಸಾಹಿಸುವ ಅವಶ್ಯಕತೆ ಇದೆ ಎಂದು ಪಠ್ಯಪುಸ್ತಕ ರಚನಾ ಸಲಹಾ ಸಮಿತಿಯ ಸದಸ್ಯರು ಹಾಗೂ ನಿವೃತ್ತ ಶಿಕ್ಷಕ ಕೊಳ್ಳೆಗಾಲದ ಶಿವಣ್ಣ ತಿಳಿಸಿದರು.
ನಗರದ ತಾಲೂಕು ನಿವೃತ್ತ ನೌಕರರ ಸಂಘದಲ್ಲಿ ನಡೆದ ಮಾಸಿಕ ಸಭೆಯಲ್ಲಿ ವಿಶ್ವ ಹಿರಿಯ ನಾಗರಿಕ ದಿನ, ಕಾರ್ಗಿಲ್ ವಿಜಯೋತ್ಸವ ಹಾಗೂ ವಿಶ್ವ ಸ್ನೇಹಿತರ ದಿನಾಚರಣೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಹಿರಿಯ ನಾಗರಿಕರು ಸಮಾಜದಲ್ಲಿ ಜವಾಬ್ದಾರಿಯುತ ಪ್ರಜೆಯಾಗಿ ನಡೆಯುವುದರೊಂದಿಗೆ ಆದರ್ಶ ಬದುಕನ್ನು ಸಾಗಿಸುತ್ತಾ ತಮ್ಮ ತನವನ್ನು ಬಿಟ್ಟುಕೊಡದೆ ಕುಟುಂಬದೊಂದಿಗೆ ನೆಮ್ಮದಿ ಜೀವನ ನಡೆಸಬೇಕು. ಇಂದಿನ ಯುವ ಪೀಳಿಗೆ ಹಾದಿ ತಪ್ಪುತ್ತಿದ್ದು, ಅವರನ್ನು ಸರಿದಾರಿಗೆ ತರುವ ಪ್ರಯತ್ನವನ್ನು ಹಿರಿಯರಾದ ನಾವುಗಳು ಮಾಡಬೇಕಿದೆ ಎಂದರು.
ಕಾರ್ಗಿಲ್ ವಿಜಯೋತ್ಸವದ ಅಂಗವಾಗಿ ಯೋಧ ಹರ್ಷಿತ್ ಮಾವಿನಕೆರೆ ಇವರನ್ನು ಸನ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ನನ್ನ ಬದುಕಿನ ಗುರಿ ದೇಶದ ಯೋಧನಾಗಿ ಸೇವೆ ಸಲ್ಲಿಸಬೇಕು ಎಂಬುದು. ಸತತ 21 ಬಾರಿ ಪ್ರಯತ್ನಿಸುವುದರೊಂದಿಗೆ ಯೋಧನಾಗಿ ಆಯ್ಕೆಯಾಗಿ ಸೇವೆಯಲ್ಲಿ ನಿರತನಾಗಿದ್ದೇನೆ. ತನ್ನ ವಿದ್ಯಾರ್ಥಿ ಜೀವನದ ಕ್ರೀಡಾಸಕ್ತಿ, ಕ್ರೀಡಾಸಾಧನೆ ಯೋಧನಾಗಿ ಆಯ್ಕೆಯಾಗಲು ಸಹಕಾರಿಯಾಯಿತು ಎಂದು ತಿಳಿಸಿದರು.
ಸಂಘದ ಕಾರ್ಯದರ್ಶಿ ಪಿ.ಆರ್. ಗುರುಸ್ವಾಮಿ ಮಾತನಾಡಿ ನಿವೃತ್ತರ ಆರೋಗ್ಯದ ದೃಷ್ಟಿಯಿಂದ ಆ.12ರಂದು ಸಾರ್ವಜನಿಕ ಆಸ್ಪತ್ರೆಯ ಸಹಯೋಗದಲ್ಲಿ ಬೆಳಗ್ಗೆ 10ರಿಂದ ಮಧ್ಯಾಹ್ನ 4ಗಂಟೆಯವರೆಗೆ ಸಂಘದ ಸದಸ್ಯರುಗಳಿಗೆ ಉಚಿತ ಆರೋಗ್ಯ ಶಿಬಿರವನ್ನು ರಾಜ್ಯ ಸರ್ಕಾರಿ ನೌಕಕರ ಸಮುದಾಯ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ.
ಶಿಬಿರದಲ್ಲಿ ರಕ್ತದೊತ್ತಡ, ಮಧುಮೇಹ, ನೇತ್ರ ತಪಾಸಣೆ, ಇಸಿಜಿ, ಹೃದಯ ತಪಾಸಣೆ,ಮಂಡಿನೋವು ಮತ್ತಿತರ ಕಾಯಿಗಳ ತಪಾಸಣೆ ನಡೆಯಲಿದ್ದು ಸಂಘದ ಸದಸ್ಯರು ಕಡ್ಡಾಯವಾಗಿ ಗುರುತಿನಿ ಚೀಟಿ ತರಬೇಕೆಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಹಿರಿಯ ಸದಸ್ಯ ಚನ್ನಬಸವಣ್ಣ, ದಾಸೋಹ ಸೇವಾಕರ್ತರಾದ ಅಂಬಿಕಮ್ಮ ಶಾಂತಕುಮಾರಸ್ವಾಮಿ, ನಿವೃತ್ತ ಪ್ರಾಂಶುಪಾಲ ಲೋಕೇಶ್, ಸದಸ್ಯರುಗಳಾದ ನರಸಿಂಹಮೂರ್ತಿ, ಮಲ್ಲಪ್ಪಾಚಾರ್, ಮರುಳಪ್ಪ ಸೇರಿದಂತೆ 200ಕ್ಕೂ ಹೆಚ್ಚು ಸದಸ್ಯರು ಭಾಗವಹಿಸಿದ್ದರು.