ಸುದ್ದಿಮೂಲ ವಾರ್ತೆ
ಬೆಂಗಳೂರು, ಜು.13: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಲ್ಲಿ ಹಂಚಿಕೆಯಾದ ನಿವೇಶನಗಳು ಅತಿಕ್ರಮಣ ಆಗಿರುವುದು ಸೇರಿದಂತೆ ಸಂಪೂರ್ಣ ಅಕ್ರಮಗಳ ತನಿಖೆಗೆ ತಜ್ಞರ ತಂಡ ರಚನೆ ಮಾಡುವುದಾಗಿ ನಗರಾಭಿವೃದ್ದಿ ಸಚಿವ ಡಿ.ಕೆ. ಶಿವಕುಮಾರ್ ವಿಧಾನ ಪರಿಷತ್ತಿಗೆ ತಿಳಿಸಿದರು.
ಪ್ರಶ್ನೋತ್ತರ ವೇಳೆಯಲ್ಲಿ ಮರಿತಿಬ್ಬೇಗೌಡ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ಬಿಬಿಎಂಪಿಯಲ್ಲಿ ನಡೆದಿರುವ ಅಕ್ರಮಗಳ ತನಿಖೆಗೆ ಐವರು ತಜ್ಞರ ತಂಡ ರಚಿಸಿದ್ದು, ಅದೇ ಮಾದರಿಯಲ್ಲಿ ಬಿಡಿಎ ಅಕ್ರಮಗಳ ತನಿಖೆಗೆ ಸಹ ಸದಸ್ಯರು ಕೋರಿದ್ದು, ಈ ಬಗ್ಗೆ ಕ್ರಮ ವಹಿಸಲಾಗುವುದು ಎಂದು ತಿಳಿಸಿದರು.
ಬಿಡಿಎಗೆ ಸೇರಿದ ಸುಮಾರು 25 ಕೋಟಿ ರೂ. ಮೌಲ್ಯದ ನಿವೇಶನವನ್ನು ಕೆಐಎಡಿಬಿ ಅವರು ಖಾಸಗಿ ವ್ಯಕ್ತಿ ಹೆಸರಿಗೆ ಪರಿಹಾರ ನೀಡಿದ್ದು, ಇದರಲ್ಲಿ ಕೆಐಎಡಿಬಿ ಮತ್ತು ಬಿಡಿಎ ಅಧಿಕಾರಿಗಳು ಶಾಮೀಲಾಗಿದ್ದಾರೆ. ಇವರ ವಿರುದ್ಧ ಕ್ರಮ ಕೈಗೊಳ್ಳಬೇಕು ಮತ್ತು ಹಣ ಪಡೆದ ವ್ಯಕ್ತಿಯ ವಿರುದ್ಧ ಸಹ ಕ್ರಮ ಜರುಗಿಸಲಾಗುವುದು ಎಂದು ಭರವಸೆ ನೀಡಿದರು.
ಬಿಡಿಎನಲ್ಲಿ ನಡೆದ ಅಕ್ರಮಗಳ ಬಗ್ಗೆ ದಾಖಲೆ ಸಮೇತ ಲಿಖಿತ ದೂರುಗಳು ನೀಡಿ. ಸೂಕ್ತ ಕ್ರಮ ಜರುಗಿಸಲಾಗುವುದು ಎಂದು ಮರಿತಿಬ್ಬೇಗೌಡರಿಗೆ ಸಚಿವ ಡಿ.ಕೆ. ಶಿವಕುಮಾರ್ ಭರವಸೆ ನೀಡಿದರು.
ಇದಕ್ಕೂ ಮುನ್ನ ಮರಿತಿಬ್ಬೇಗೌಡ ಮಾತನಾಡಿ, ಖಾಸಗಿ ವ್ಯಕ್ತಿಗೆ ಬಿಡಿಎ ನಿವೇಶನದ ಪರಿಹಾರ ನೀಡಲಾಗಿದೆ. ಇದರ ಬಗ್ಗೆ ತನಿಖೆ ನಡೆಸಬೇಕು. ಬಿಡಿಎ ಸಮಗ್ರ ಅಕ್ರಮ ತನಿಖೆಗೆ ತಂಡ ರಚಿಸಬೇಕು ಎಂದು ಮನವಿ ಮಾಡಿದರು.
ಇದೇ ವೇಳೆ ಶರವಣ ಅವರ ಮತ್ತೊಂದು ಪ್ರಶ್ನೆಗೆ ಉತ್ತರಿಸಿದ ಡಿ.ಕೆ. ಶಿವಕುಮಾರ್, ಬಿಡಿಎದಿಂದ ಬದಲಿ ನಿವೇಶನಗಳ ಹಂಚಿಕೆಯಲ್ಲಿ ನಡೆದ ಅಕ್ರಮ ಮತ್ತು ವಿಳಂಬದ ಬಗ್ಗೆ ಕ್ರಮ ವಹಿಸಲಾಗುವುದು. ಇದರಲ್ಲಿ ಏನಾದರೂ ನಿರ್ಧಿಷ್ಟ ದೂರುಗಳು ಇದ್ದರೆ ದಾಖಲೆ ಸಮೇತ ದೂರು ನೀಡಿ. ಕ್ರಮ ವಹಿಸಲಾಗುವುದು ಎಂದರು.
ಶರವಣ ಮಾತನಾಡಿ, ಇದರಲ್ಲಿ ಅಧಿಕಾರಿಗಳು ಮತ್ತು ರಾಜಕಾರಣಿಗಳು ಶಾಮೀಲಾಗಿದ್ದಾರೆ. ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು.
ಯು.ಬಿ. ವೆಂಕಟೇಶ್ ಅವರ ಮತ್ತೊಂದು ಪ್ರಶ್ನೆಗೆ ಉತ್ತರ ನೀಡಿದ ಸಚಿವ ಡಿಕೆಶಿ, ಬೆಂಗಳೂರಿನ ಬಸವನಗುಡಿ ವಿಧಾನಸಭಾ ಕ್ಷೇತ್ರದ ಎನ್.ಆರ್. ಕಾಲೋನಿಯ ಬಿಬಿಎಂಪಿ ಕಟ್ಟಡವನ್ನು ಖಾಸಗಿ ಸ್ಫೋರ್ಟ್ಸ್ ಕ್ಲಬ್ನವರು ನಿರ್ವಹಣೆ ಮಾಡುತ್ತಿದ್ದು ಅವರು ಹಣ ವಸೂಲಿ ಮಾಡುತ್ತಿದ್ದಾರೆ. ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಜೊತೆಗೆ ಬೆಂಗಳೂರಿನಾದ್ಯಂತ ಬಿಡಿಎ ಅಥವಾ ಬಿಬಿಎಂಪಿಗೆ ಸೇರಿದ ಯಾವುದಾದರೂ ಕಟ್ಟಡ ಸಾರ್ವಜನಿಕ ಉದ್ದೇಶಕ್ಕೆ ಪಡೆದ ಬಗ್ಗ ಸಂಪೂರ್ಣ ಮಾಹಿತಿ ನೀಡುವಂತೆ ಅಧಿಖಾರಿಗಳಿಗೆ ಸೂಚಿಸಿದ್ದೇನೆ. ಬಳಿಕ ಇವುಗಳ ಸದುಪಯೋಗದ ಬಗ್ಗೆ ಪರಿಶೀಲಿಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.