ನವದೆಹಲಿ, ಮೇ 25: ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಹೇಳಿದಂತೆ ಕಾನೂನು ಕೈಗೆತ್ತಿಕೊಳ್ಳುವ ಸಂಘಟನೆಗಳ ವಿರುದ್ಧ ಕ್ರಮಕೈಗೊಳ್ಳುತ್ತೇವೆ ಎಂದು ವಿಧಾನಸೌಧದಲ್ಲಿ ನೂತನ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.
ಯಾವುದೇ ಸಂಘಟನೆ ಅಥವಾ ಸಮುದಾಯಕ್ಕೆ ಸೇರಿದವರಿರಲಿ. ಕೋಮು ದ್ವೇಷಕ್ಕೆ ಪ್ರೇರೇಪಿಸುವ ಕೆಲಸ ಮಾಡಿದರೆ ನಮ್ಮ ಸರ್ಕಾರ ಕಡಿವಾಣ ಹಾಕಲಿದೆ. ರಾಜ್ಯ ಸರ್ಕಾರ ಸ್ಪಷ್ಟವಾದ ನಿಲುವು ತೆಗೆದುಕೊಂಡಿದೆ. ಯಾವುದೇ ಸಂಘಟನೆ ಇರಬಹುದು ರಾಜಕೀಯ, ಸಾಮಾಜಿಕ, ನಮ್ಮ ರಾಜ್ಯದ ನೆಮ್ಮದಿ, ಶಾಂತಿ ಕೆಡಿಸಿದರೆ ಕಟ್ಟಿ ಹಾಕುತ್ತೇವೆ. ಕಾನೂನು ಚೌಕಟ್ಟಿನಲ್ಲಿ, ಸಂವಿಧಾನಾತ್ಮಕವಾಗಿ ನಿಯಂತ್ರಿಸುತ್ತೇವೆ. ಅದು ಬಜರಂಗದಳ, ಪಿಎಫ್ಐ, ಆರ್ಎಸ್ಎಸ್ ಇರಬಹುದು ನಿಷೇಧ ಮಾಡೋದಕ್ಕೂ ನಾವು ಹಿಂದೇಟು ಹಾಕೋದಿಲ್ಲ.
ಅಸಂವಿಧಾನಿಕ ಚಟುವಟಿಕೆ, ಕಾನೂನು ಬಾಹಿರ ಚಟುವಟಿಕೆ, ಕೋಮು ವಿಷ ಬೀಜ ಬಿತ್ತಿ ರಾಜಕೀಯ ಬೇಳೆ ಬೇಯಿಸಿಕೊಂಡರೆ ಕಾನೂನು ಮೂಲಕ ಏನು ಕ್ರಮ ಕೈಗೊಳ್ಳಬೇಕು ತಗೋತೀವಿ ಎಂದರು.
ಮತ್ತೊಂದೆಡೆ ಇದೇ ವಿಚಾರವಾಗಿ ಸಚಿವ ಡಾ.ಜಿ. ಪರಮೇಶ್ವರೂ ಸಹ ಪ್ರತಿಕ್ರಿಯಿಸಿದ್ದು, ಆರೆಸ್ಸೆಸ್, ಬಜರಂಗ ದಳ ನಿಷೇಧದ ಬಗ್ಗೆ ಯಾವುದೇ ಚರ್ಚೆ ಮಾಡಿಲ್ಲ. ಒಂದು ವೇಳೆ ಅವರು ಶಾಂತಿ ಕದಡುವ ಕೆಲಸ ಮಾಡಿದರೆ ಅವರ ಮೇಲೆ ಕ್ರಮ ತೆಗೆದುಕೊಳ್ಳುತ್ತೇವೆ. ಆದರೆ ಇಂತಹ ವಿಚಾರದ ಬಗ್ಗೆ ಕೆಲವರು ವೈಯಕ್ತಿಕವಾಗಿ ಅವರ ಅಭಿಪ್ರಾಯ ಹೇಳಿರಬಹುದು. ಆದರೆ ಇದೆಲ್ಲ ಚರ್ಚೆ ಅಗತ್ಯವಿದೆ ಎಂದು ಹೇಳಿದ್ದಾರೆ.
ಗೋ ಹತ್ಯೆ ಸೇರಿದಂತೆ ಬಿಜೆಪಿ ಅವಧಿಯ ಕಾಯಿದೆಗಳ ನಿಷೇಧ ವಿಚಾರವಾಗಿ ಕೇಳಿದಾಗ, ʻʻಯಾವುದು ಸಮಾಜದ ವಿರುದ್ಧ ಇದೆಯೋ, ಸಮಾಜದ ಶಾಂತಿ ಕದಡುವ ವಿಚಾರಗಳು ಇವೆಯೋ?, ಜನರ ವಿರೋಧಿ ಕಾಯ್ದೆಗಳು ಇವೆಯೋ.. ಅಂತಹ ನಿಯಮಗಳನ್ನು ಪರಿಶೀಲನೆ ಮಾಡುತ್ತೇವೆ. ಜನಪರ ಆಡಳಿತ ಕೊಡಲು ಬೇಕಾದ ತೀರ್ಮಾನ ತೆಗೆದುಕೊಳ್ಳುತ್ತೇವೆʼʼ ಎಂದು ಹೇಳಿದರು.
ರೋಹಿತ್ ಚಕ್ರತೀರ್ಥ ನೇತೃತ್ವದಲ್ಲಿ ರಚನೆಯಾದ ಪಠ್ಯ ಪುಸ್ತಕ ರದ್ದು ವಿಚಾರವೂ ಚರ್ಚೆ ಆಗಿಲ್ಲ. ಸರ್ಕಾರ ಸಂಪೂರ್ಣವಾಗಿ ತೀರ್ಮಾನ ತೆಗೆದುಕೊಳ್ಳುವಂತಹ ಹಂತಕ್ಕೆ ಬರಬೇಕು. ವಿಧಾನಸೌಧದಲ್ಲಿ ಸಂಪೂರ್ಣವಾದ ಸರ್ಕಾರ ಕೂತ ಮೇಲೆ, ಖಾತೆ ಹಂಚಿಕೆ ಆದಮೇಲೆ, ಯಾರು ಶಿಕ್ಷಣ ಸಚಿವರಾಗುತ್ತಾರೋ ಅವರು ಅಭ್ಯಾಸ ಮಾಡುತ್ತಾರೆ. ನಂತರ ಕ್ಯಾಬಿನೆಟ್ ನಲ್ಲಿ ತೀರ್ಮಾನ ಆಗಬೇಕು. ಒಬ್ಬೊಬ್ಬರೇ ಹೇಳಿಕೆ ಕೊಟ್ಟ ತಕ್ಷಣ ತೀರ್ಮಾನ ಆಗುವುದಿಲ್ಲ ಎಂದರು.
ಸಮಸ್ಯೆ ಮೈಗೆಳೆದುಕೊಳ್ಳಬೇಡಿ: ಮಹೇಶ್ ಟೆಂಗಿನಕಾಯಿ
ಪಿಎಫ್ಐ , ಎಸ್ಡಿಪಿಐ ಜೊತೆ ಬಜರಂಗದಳ ಹಾಗೂ ಆರ್ಎಸ್ಎಸ್ ಹೋಲಿಸಿ ಅನಗತ್ಯವಾಗಿ ಸಮಸ್ಯೆ ಮೈಗೆಳೆದುಕೊಳ್ಳಬೇಡಿ ಎಂದು ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಹುಬ್ಬಳ್ಳಿ ಧಾರವಾಡ ಕೇಂದ್ರ ಬಿಜೆಪಿ ಶಾಸಕ ಮಹೇಶ್ ಟೆಂಗಿನಕಾಯಿ ತಿರುಗೇಟು ನೀಡಿದ್ದಾರೆ.
ರಾಜ್ಯದ ಜನತೆ ನಿಮಗೆ ಬಹುಮತ ಕೊಟ್ಟಿದ್ದಾರೆ. ಚುನಾವಣೆ ಸಂದರ್ಭದಲ್ಲಿ ನೀವು ನೀಡಿರುವ ಗ್ಯಾರಂಟಿ ಬಗ್ಗೆ ಮಾತಾಡಿ. 10 ಕೆಜಿ ಅಥವಾ 15 ಕೆಜಿ ಅಕ್ಕಿ ಕೊಡುತ್ತೀರೋ, ವಿದ್ಯುತ್ ಕೊಡುತ್ತೀರೋ ಹೇಳಿ. ಅದು ಬಿಟ್ಟು ಗ್ಯಾರಂಟಿ ಜಾರಿ ಮಾಡದೆ ವಿಷಯಾಂತರ ಮಾಡಲು ಪ್ರಯತ್ನಿಸಬೇಡಿ. ಬಜರಂಗದಳ, ಆರ್ಎಸ್ಎಸ್ ನಿಷೇಧಿಸುತ್ತೇವೆ ಅನ್ನೋದು ಸರಿಯಲ್ಲ. ರಾಜ್ಯದ ಜನ ನಿಮಗೆ ನೀಡಿರುವ ಅವಕಾಶವನ್ನು ಸರಿಯಾಗಿ ಬಳಸಿಕೊಳ್ಳಿ ಎಂದು ಹೇಳಿದರು.