ಬೆಳಗಾವಿ, ಅ.30: ಮಹಾರಾಷ್ಟ್ರ ಮಾದರಿಯಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರವೂ ಪತನವಾಗಬಹುದು ಎಂದು ಭವಿಷ್ಯ ನುಡಿದಿರುವ ಮಾಜಿ ಸಚಿವ ರಮೇಶ್ ಜಾರಕಿಹೊಳಿ, ಡಿ.ಕೆ. ಶಿವಕುಮಾರ್ ಅವರು ಶೀಘ್ರದಲ್ಲಿಯೇ ಮಾಜಿ ಸಚಿವರಾಗಲಿದ್ದಾರೆ ಎನ್ನುವ ಮೂಲಕ ಗಂಭೀರ ಹೇಳಿಕೆ ನೀಡಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯನವರ ಕ್ಯಾಬಿನೆಟ್ನಲ್ಲಿ ಸಚಿವ ಸತೀಶ್ ಜಾರಕಿಹೊಳಿ ಅವರಿಗೆ ಹಿಂಸೆಯಾಗುತ್ತಿದೆ. ಸಿದ್ದರಾಮಯ್ಯ ಸಿಎಂ ಇದ್ದಾಗಲೇ ಸತೀಶ್ಗೆ ಇಂಥ ಪರಿಸ್ಥಿತಿ ಬಂದಿದೆ. ಬೇರೆ ಯಾರಾದರೂ ಸಿಎಂ ಆದರೆ ಸತೀಶ್ ಪರಿಸ್ಥಿತಿ ಏನು? ಎಂದು ರಮೇಶ್ ಜಾರಕಿಹೊಳಿ ಇತ್ತೀಚೆಗೆ ಹೇಳಿಕೆ ನೀಡಿದ್ದರು. ಅದರ ಬೆನ್ನಲ್ಲೇ ಬೆಳಗಾವಿಯಲ್ಲಿ ಸೋಮವಾರ ಸುದ್ದಿಗೋಷ್ಠಿ ನಡೆಸಿ ಡಿಸಿಎಂ ಡಿಕೆ ಶಿವಕುಮಾರ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
‘ನಾವು ಬಿಜೆಪಿಯವರು ಆಪರೇಷನ್ ಕಮಲದ ಬಗ್ಗೆ ಮಾತನಾಡುತ್ತಿಲ್ಲ, ಅದನ್ನೂ ಮಾಡುವುದೂ ಇಲ್ಲ. ಆಪರೇಷನ್ ಕಮಲ ಮತ್ತು ಶಾಸಕರಿಗೆ 50 ಕೋಟಿ ಆಮಿಷ ನೀಡುತ್ತಿರುವ ಬಗ್ಗೆ ಮಾತನಾಡುತ್ತಿರುವುದು ಡಿ.ಕೆ. ಶಿವಕುಮಾರ್ ಅವರ ನಾಟಕ ಕಂಪನಿಯವರು. ಒಂದು ವೇಳೆ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಿದ್ದರೆ ಅದಕ್ಕೆ ಡಿಕೆಶಿಯೇ ಕಾರಣ’ ಎಂದು ಹೇಳಿದರು.
2019ರಲ್ಲಿ ಡಿಕೆ ಶಿವಕುಮಾರ್ ಸರ್ವಾಧಿಕಾರಿ ಧೋರಣೆಯಿಂದ ನಾವು ಬಂಡಾಯ ಎದ್ದು ಅಂದಿನ ಜೆಡಿಎಸ್- ಕಾಂಗ್ರೆಸ್ ಸರ್ಕಾರವನ್ನು ಕಿತ್ತೊಗೆದೆವು. ಅಂದು ಅದರ ಅಗತ್ಯವಿತ್ತು. ಆದರೆ, ಅದಕ್ಕಾಗಿ ಬಿಜೆಪಿಯವರು ಯಾವುದೇ ಹಣದ ಆಮಿಷ ಒಡ್ಡಿದ್ದಿಲ್ಲ ಎಂದು ಸ್ಪಷ್ಟಪಡಿಸಿದರು.
ತಮ್ಮ ಸುಳ್ಳು ಮತ್ತು ಸುಳ್ಳು ಗ್ಯಾರಂಟಿ ಯೋಜನೆಗಳ ಮೂಲಕ ಕಾಂಗ್ರೆಸ್ ಎಲ್ಲಾ ರಂಗಗಳಲ್ಲಿ ವಿಫಲವಾಗಿದೆ. ಜನರ ಗಮನವನ್ನು ಬೇರೆಡೆ ಸೆಳೆಯಲು ಕಾಂಗ್ರೆಸ್ ಸುಳ್ಳುಗಳನ್ನು ಹಬ್ಬಿಸುತ್ತಿದೆ. ಮಹಾರಾಷ್ಟ್ರದ ಮಾದರಿಯಲ್ಲಿ ರಾಜ್ಯದಲ್ಲಿಯೂ ರಾಜಕೀಯ ಬೆಳವಣಿಗೆಗಳು ನಡೆದರೆ ಒಂದೇ ರಾತ್ರಿಯಲ್ಲಿ ಸರ್ಕಾರ ಪತನವಾಗುತ್ತದೆ ಎಂದು ಹೇಳಿದರು.
ಆಪರೇಷನ್ ಕಮಲದ ಬಗ್ಗೆ ಡಿಕೆ ಶಿವಕುಮಾರ್ ಯಾಕೆ ಮಾತನಾಡುತ್ತಿದ್ದಾರೆ? ಅದರ ಹಿಂದೆ ಹತ್ತಾರು ಲೆಕ್ಕಾಚಾರಗಳು ಇವೆ. ಡಿಕೆ ಶಿವಕುಮಾರ್ ಜೊತೆಗೆ 16 ವರ್ಷ ಕಳೆದಿದ್ದೇನೆ. ಆತ ಏನು ಎನ್ನುವುದು ನನಗೆ ಚೆನ್ನಾಗೇ ಗೊತ್ತು. ನೇರಾನೇರ ರಾಜಕಾರಣ ಅವನಿಗೆ ಗೊತ್ತಿಲ್ಲ, ಪುಕ್ಕಲ. ಹಿಂಬಾಗಿಲ ರಾಜಕಾರಣ ಮಾಡುತ್ತಾನೆ. ಶೀಘ್ರದಲ್ಲಿಯೇ ಮಾಜಿ ಮಂತ್ರಿ ಆಗುತ್ತಾನೆ ಎಂದು ಏಕವಚನದಲ್ಲೇ ವಾಗ್ದಾಳಿ ನಡೆಸಿದರು.
ಅಕ್ರಮ ಆಸ್ತಿಗಳಿಕೆ ಆರೋಪಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ನಲ್ಲಿ ಹಿನ್ನಡೆ ಸೇರಿದಂತೆ ಇನ್ನಿತರ ಕಾರಣಗಳಿಂದಾಗಿ ಡಿಸಿಎಂ ಡಿ.ಕೆ.ಶಿವಕುಮಾರ್ ಶೀಘ್ರವೆ ಮಾಜಿ ಆಗಲಿದ್ದಾರೆ. ಒಂದು ರೂಪಾಯಿ ತಿಂದವರನ್ನೆ ಜೈಲಿಗೆ ಹಾಕುತ್ತಾರೆ. ಡಿ.ಕೆ.ಶಿವಕುಮಾರ್ ಅವರದ್ದು ನೂರಾರು ಕೋಟಿ ರೂ.ಗಳ ಅಕ್ರಮ ಇದೆ. ಐದು ವರ್ಷದಲ್ಲಿ ಇವರ ಆಸ್ತಿ ಐದು ಪಟ್ಟು ಹೆಚ್ಚಾಗಿದ್ದು ಹೇಗೆ ಎಂಬುದನ್ನು ಅವರು ನ್ಯಾಯಾಲಯಕ್ಕೆ ತಿಳಿಸಬೇಕಲ್ಲ ಎಂದು ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡರು.