ಸುದ್ದಿಮೂಲ ವಾರ್ತೆ ಸಿಂಧನೂರು, ಫೆ. 11:
ಕಠಿಣ ಪರಿಶ್ರಮದಿಂದ ಅಧ್ಯಯನ ಮಾಡಿದರೆ ಯಾವುದೇ ಕ್ಷೇತ್ರದಲ್ಲಾದರೂ ಸಾಧನೆ ಮಾಡಲು ಸಾಧ್ಯ. ಸಾಧನೆಗೆ ಪ್ರರಿಶ್ರಮವೇ ಹೊರತು ಅನ್ಯಮಾರ್ಗವಿಲ್ಲ ಎಂದು ಶ್ರೀ ಕೃಷ್ಣದೇವರಾಯ ವಿದ್ಯಾಸಂಸ್ಥೆಯ ಪ್ರಾಂಶುಪಾಲ ಡಾ.ಮೊಹ್ಮದ್ ಅಸ್ಲಾಂ ಖಾನ್ ಹೇಳಿದರು.
ನಗರದ ಗಂಗಾವತಿ ರಸ್ತೆಯಲ್ಲಿರುವ ಶ್ರೀ ಕೃಷ್ಣದೇವರಾಯ ವಿದ್ಯಾಸಂಸ್ಥೆಯಲ್ಲಿ ಶನಿವಾರ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು. ಪ್ರಸ್ತುತ ದಿನಗಳಲ್ಲಿ ಅಂಕಗಳ ಜೊತೆಗೆ ಜೀವನದ ಮೌಲ್ಯಗಳ ಬೆಳೆಸಿಕೊಳ್ಳಬೇಕಾದ ಅಗತ್ಯವಿದೆ. ವಿದ್ಯಾರ್ಥಿಗಳು ಯಾವುದೇ ಕಾರಣಕ್ಕೂ ನಿರಾಶೆಯಾಗಬಾರದು. ಆತ್ಮವಿಶ್ವಾಸ ಬೆಳೆಸಿಕೊಳ್ಳಬೇಕು. ಕಠಿಣ ಪರಿಸ್ಥಿತಿ ಎದುರಿಸುವ ಛಲ ವಿದ್ಯಾರ್ಥಿಗಳು ರೂಢಿಸಿಕೊಳ್ಳಬೇಕು ಎಂದರು.
ಸಂಸ್ಥೆಯ ಹಿರಿಯ ಉಪಪ್ರಾಂಶುಪಾಲ ಚಂದ್ರಕಲಾ ಪ್ರಕಾಶ ಮಾತನಾಡಿ, ವಿದ್ಯಾರ್ಥಿ ಜೀವನದಲ್ಲಿ ಶಿಸ್ತು ಬಹಳ ಪ್ರಮುಖವಾಗಿರುತ್ತದೆ. ಸಮಸ್ಯೆಗಳನ್ನು ಅರ್ಥ ಮಾಡಿಕೊಳ್ಳಬೇಕು. ಸಕರಾತ್ಮಕ ಚಿಂತನೆಗಳ ಮೈಗೂಡಿಸಿಕೊಳ್ಳಬೇಕು. ಆತ್ಮವಿಶ್ವಾಸದಿಂದ ಮುನ್ನಡೆದರೆ ಜೀವನದಲ್ಲಿ ಏನನ್ನಾದರೂ ಸಾಧಿಸಬಹುದು. ಗುರಿ ಸಾಧನೆ ಮಾಡಬೇಕಾದರೆ ನಿರಂತರ ಪ್ರಯತ್ನ ಅಗತ್ಯವಾಗಿದೆ. ಮಕ್ಕಳ ಬಗ್ಗೆ ಪಾಲಕರು ಬಹಳಷ್ಟು ನಿರೀಕ್ಷೆಗಳನ್ನಟ್ಟಿಕೊಂಡಿರುತ್ತಾರೆ. ಪಾಲಕರು ಮಕ್ಕಳ ಮನಸ್ಸು ಅರ್ಥಮಾಡಿಕೊಳ್ಳಬೇಕು. ಮಕ್ಕಳಿಗೆ ಯಾವ ಕ್ಷೇತ್ರದಲ್ಲಿ ಆಸಕ್ತಿಯಿದೆಯೋ ಆದೇ ಕ್ಷೇತ್ರದಲ್ಲಿ ಅವರನ್ನು ಪ್ರೋತ್ಸಾಹಿಸಬೇಕು. ಅಂದಾಗ ಮಾತ್ರ ಮಕ್ಕಳು ನಿಶ್ಚಿತ ಗುರಿ ತಲುಪುತ್ತಾರೆ ಎಂದರು.
ಸಾರ್ವಜನಿಕ ಆಸ್ಪತ್ರೆಯ ಹಿರಿಯ ಔಷಧಿಕಾರ ಶಶಿಧರ ವಿ.ಹಳ್ಳಿ ಅವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಿ ಗೌರವಿಸಲಾಯಿತು. ಗಾಂಧಿನಗರದ ಮೊನಾಲಿಸಾ ಪಬ್ಲಿಕ್ ಶಾಲೆಯ ಸಂಸ್ಥಾಪಕ ಮಣಿಮಾರನ್, ಗ್ಲೋರಿ ಶಾಲೆಯ ಕಾರ್ಯದರ್ಶಿ ಜಾಯ್ ಲುಕಾಸ್, ಸಂಸ್ಥೆಯ ಉಪಪ್ರಾಂಶುಪಾಲ ರಾಜು ರಾಗಿ, ವಾಣಿಜ್ಯ ವಿಭಾಗದ ಮುಖ್ಯಸ್ಥ ಸಂತೋಷಕುಮಾರ ವೇದಿಕೆಯಲ್ಲಿದ್ದರು.