ಸುದ್ದಿಮೂಲ ವಾರ್ತೆ
ಚಿಕ್ಕಬಳ್ಳಾಪುರ,ಸೆ.2:ಜಿಲ್ಲಾ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರಾಗಿ ಸೇವೆ ಸಲ್ಲಿಸಿ ನಿವೃತ್ತರಾದ ವಿಜಯಕುಮಾರ್ ಅವರನ್ನು ಇಲಾಖೆಯ ಕಛೇರಿಯಲ್ಲಿ ಸಿಬ್ಬಂದಿ ಹಾಗೂ ವಿವಿಧ ಸಂಘ ಸಂಸ್ಥೆಗಳ ವತಿಯಿಂದ ಅದ್ಧೂರಿಯಾಗಿ ನಿವೃತ್ತಿ ಬೀಳ್ಕೊಡುಗೆ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ಕಾರ್ಯಕ್ರಮದಲ್ಲಿ ನಿವೃತ್ತ ಸಹಾಯಕ ನಿರ್ದೇಶಕ ವಿಜಯಕುಮಾರ್ ಮಾತನಾಡಿ, ಕಳೆದ 16 ತಿಂಗಳುಗಳಿಂದ ಚಿಕ್ಕಬಳ್ಳಾಪುರದಲ್ಲಿ ಸಹಾಯಕ ನಿರ್ದೇಶಕನಾಗಿ ಕೆಲಸ ನಿರ್ವಹಿಸಿಕೊಂಡು ಬಂದಿದ್ದು, ಈ ಅವಧಿಯಲ್ಲಿ ಜಿಲ್ಲೆಯ ಎಲ್ಲಾ ತಾಲ್ಲೂಕು ಕ್ರೀಡಾಂಗಣಗಳಿಗೆ ಇಲಾಖೆಯಿಂದ ಬರುವ
ಅನುದಾನವನ್ನು ಸಮರ್ಪಕವಾಗಿ ಬಳಸಿಕೊಂಡು ತೃಪ್ತಿಕರವಾಗಿ ಸೇವೆಯನ್ನು ಸಲ್ಲಿಸಿ ನಿವೃತ್ತಿಯಾಗುತ್ತಿದ್ದೇನೆ. ನನ್ನೊಂದಿಗೆ ಕಾರ್ಯನಿರ್ವಹಿಸಿದ ಕಚೇರಿ ಸಿಬ್ಬಂದಿ ಸೇರಿದಂತೆ ಎಲ್ಲರಿಗೂ ಅಭಿನಂದನೆ ಸಲ್ಲಿಸುವುದಾಗಿ ತಿಳಿಸಿದರು.
ಕ್ರೀಡಾಪಟು ಮಂಚನಬಲೆ ಶ್ರೀನಿವಾಸ್ರವರು ಮಾತನಾಡಿ, ಸುಮಾರು 16 ತಿಂಗಳ ಹಿಂದೆ ಜಿಲ್ಲೆಗೆ ಆಗಮಿಸಿದ ವಿಜಯಕುಮಾರ್, ಉತ್ತಮ ರೀತಿಯಲ್ಲಿ ಕ್ರೀಡೆಗಳಿಗೆ ಸಹಕಾರ ನೀಡುತ್ತಾ, ಕ್ರೀಡಾಂಗಣಗಳ ಅಭಿವೃದ್ಧಿಗೆ ಸಹಕರಿಸಿದ್ದಾರೆ. ಜಿಲ್ಲೆಯ ಬೇರೆ ತಾಲ್ಲೂಕುಗಳ ಕ್ರೀಡಾಂಗಣಗಳ ಅಭಿವೃದ್ಧಿಗೂ ಸಹ ಆದ್ಯತೆ ನೀಡಿದ್ದಾರೆ ಎಂದು ಅಭಿನಂದಿಸಿದರು.
ಕಾರ್ಯಕ್ರಮದಲ್ಲಿ ಟಿ.ಪಿ.ಒ. ಅರುಣ್ಕುಮಾರ್, ಗೌರಿಬಿದನೂರಿನ ನಿವೃತ್ತ ದೈಹಿಕ ಶಿಕ್ಷಕ ನಾರಾಯಣಸ್ವಾಮಿ, ಜಯಂತಿಗ್ರಾಮ ನಾರಾಯಣಸ್ವಾಮಿ, ಹಾಕಿ ತರಬೇತಿದಾರರಾದ ದೇವರಾಜಮ್ಮ, ಶ್ರೀಧರ್, ನಾಸಿರ್ ಅಹಮದ್ಖಾನ್, ಕಛೇರಿಯ ಸಿಬ್ಬಂದಿ ರಾಘವೇಂದ್ರ,ನಾರಾಯಣಪ್ಪ, ಬಾಲು, ಮುನಿಯಪ್ಪ, ಲಲಿತ, ಶಶಿಕಲಾ, ಕಾವ್ಯ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.